ರಾಜೇಂದ್ರಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ
ವಿಜಯಪುರ: ಪುಸ್ತಕಗಳ ಓದು ಮನುಷ್ಯನೊಳಗೆ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತವೆ ಎಂದು ಸಮಾಜ ಸೇವಕಿ ಉಮಾ ಪಾಟೀಲ ಹೇಳಿದರು.
ನಗರದ ಸಾಯಿ ರೆಸಿಡೆನ್ಸಿ ಬಡಾವಣೆಯ ಮನು ಪತ್ತಾರ ಕಲಕೇರಿ ಅವರ ಮನೆಯಲ್ಲಿ ಆಯೋಜಿಸಿದ ಓದುಗರ ಚಾವಡಿಯ ರಾಜೇಂದ್ರಕುಮಾರ್ ಬಿರಾದಾರ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ ಹಮ್ಮಿಕೊಂಡ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಸರದ ಈ ದಿನಮಾನಗಳಲ್ಲಿ ಓದುವ ಪ್ರಕ್ರಿಯೆ ನಿಧಾನವೆಂದು ಭಾವಿಸಬಾರದು ನಿಧಾನವಾದ ಓದು ಬದುಕನ್ನು ಸುಭದ್ರವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಓದುಗರ ಚಾವಡಿಯ ಮನೆ ಮನೆಯ ಈ ಪುಸ್ತಕ ಪರಿಚಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಇಂಡಿ ತಾಲ್ಲೂಕಿನ ಹಿರೆಮಸಳಿ ಗ್ರಾಮದ ಯುವ ಕಥೆಗಾರ ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನವನ್ನು ನಾಗಠಾಣ ಪಬ್ಲಿಕ್ ಶಾಲೆಯ ಶಿಕ್ಷಕ ಶಿವಶರಣಪ್ಪ ಶಿರೂರು ಪರಿಚಯಿಸಿ, ಆಧುನಿಕತೆಯ ಮೋಹದ ಸೆಳೆತಕ್ಕೆ ಸಿಕ್ಕು ಸಾಹಿತ್ಯದ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಅನಿಲ್ ಗುನ್ನಾಪೂರ ಅವರ ಕಥೆಗಳು ಹೊಸ ಭರವಸೆಯನ್ನು ಹುಟ್ಟು ಹಾಕುತ್ತವೆ. ಗ್ರಾಮ ಜಗತ್ತಿನ ಒಳ ಹೂರಣವನ್ನು ಪ್ರಾದೇಶಿಕ ಭಾಷೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕಟ್ಟಿಕೊಡುವ ಅನಿಲ್ ಅವರು ಆಧುನಿಕ ಕಾಲದ ಅವಘಡಗಳನ್ನು ಹಾಗೂ ಗ್ರಾಮೀಣ ಪ್ರದೇಶದ ಸಾಮಾಜಿಕ ಚಿತ್ರಣವನ್ನು ನಯವಾಗಿ ಕಟ್ಟಿಕೊಡುವುದನ್ನು ನೋಡಿದರೆ ದುರ್ಗಸಿಂಹನ ಕಥೆಗಳು ನೆನಪಾಗುತ್ತಿವೆ. ತನ್ನ ಸುತ್ತಲಿನ ಬದುಕಿನ ಅವಘಡಗಳನ್ನು ಹಾಗೂ ಅಪಸವ್ಯಗಳನ್ನು ಪರಿಣಾಮವಾಗಿ ಕಥೆಯ ಮೂಲಕ ಕಟ್ಟಿ ಕೊಡುವ ಗುನ್ನಾಪುರ ಅವರ ಬಹುತೇಕ ಕಥೆಗಳು ಗ್ರಾಮ ಹಾಗೂ ನಗರಗಳಲ್ಲಿ ವಾಸಿಸುವವರ ಬದುಕಿನ ಹಲವು ಮುಖಗಳನ್ನು ಅನಾವರಣ ಮಾಡುತ್ತವೆ. ಹುಚ್ಚಯ್ಯನ ಲೀಲೆ, ಕಮಲಜ್ಜಿ, ಶಾರಿಯ ಗಲ್ಲಾ ಡೆಬ್ಬಿ, ಚಿನ್ಮಯ ನಿಲಯ, ಈ ಎಲ್ಲ ಕಥೆಗಳು ಕನ್ನಡದ ಅತ್ಯುತ್ತಮ ಕಥೆಗಳ ಸಾಲಿಗೆ ಸೇರುವ ಸಾಮರ್ಥ್ಯ ಹೊಂದಿವೆ ಹೀಗಾಗಿ ಅನಿಲ್ ಗುನ್ನಾಪೂರ ಭರವಸೆಯ ಕಥೆಗಾರರಾಗಿದ್ದಾರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಥೆಗಾರ ಅನಿಲ್ ಗುನ್ನಾಪೂರ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಬಿ.ಆರ್. ಬನಸೋಡೆ ಅವರು ಮಾತನಾಡಿ, ಓದುಗರ ಚಾವಡಿಯ ಮೂಲಕ ಸಾಹಿತ್ಯದ ಆಸಕ್ತರ ಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಪರಿಚಾರಿಕೆ ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ದಾಕ್ಷಾಯಿಣಿ ಬಿರಾದಾರ, ಚೆನ್ನಮ್ಮ ಪತ್ತಾರ, ಕಾಮಾಕ್ಷಿ ಪತ್ತಾರ, ಸ್ವಪ್ನಾ ಅಳ್ಳಿಮೊರೆ ಹಾಗೂ ಶರಣು ಸಬರದ, ರಾಜಕುಮಾರ್ ಜೊಲ್ಲೆ, ಸುಭಾಸ ಯಾದವಾಡ, ಬಸವರಾಜ ಕುಂಬಾರ, ಗಂಗಾಧರ ಪತ್ತಾರ, ರಾಜಶೇಖರ ಉಮರಾಣಿ, ಮೋಹನ ಕಟ್ಟಿಮನಿ, ಭಾರತ ಕುಮಾರ್ ಹೆಚ್ ಟಿ, ಅನಿಲ್ ಕುಮಾರ್ ಮಾಶಾಳಕರ್, ಶಶಿಧರ ಶಿರಹಟ್ಟಿ, ಸುಭಾಸ ಕನ್ನೂರ, ಎಸ್. ಡಿ. ಕೃಷ್ಣಮೂರ್ತಿ, ಪಂಡಿತರಾವ ಪಾಟೀಲ್, ಸಿದ್ದಾರೂಢ ಕಟ್ಟಿಮನಿ, ಡಾ.ಎಸ್.ಟಿ. ಮೇರವಾಡೆ, ಆರ್. ಎಸ್. ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಗದ್ದನಕೇರಿ, ಅಶ್ವಥ್, ಕೆ. ಕೆ. ಅಸ್ಕಿ, ಶ್ರೀಧರ ಪತ್ತಾರ, ಸುಜಾತಾ ಚೆಲವಾದಿ, ದಾಕ್ಷಾಯಿಣಿ ಹುಡೇದ, ಹೇಮಲತಾ ವಸ್ತೃದ, ಪ್ರಭಾವತಿ ದೇಸಾಯಿ ಮೊದಲಾದವರು ಉಪಸ್ಥಿತರಿದ್ದರು.
ಕುಮಾರಿ ವಿಮರ್ಶಾ ಪತ್ತಾರ್ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ. ಎಂ. ಎಸ್. ಮಾಗಣಗೇರಿ ಸ್ವಾಗತಿಸಿ ನಿರೂಪಿಸಿದರು.

