- ಸಿದ್ಧಾಪುರ ಶಿವಕುಮಾರ್
ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ, ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಕೇಳುತ್ತಿದ್ದೆ. ಅವರು ಬೆಳಗೆರೆಯಲ್ಲಿ ಬಡವರ ಮಕ್ಕಳಿಗಾಗಿ ಶಾಲೆ ಕಟ್ಟಿಸಿದ್ದಾರೆ. ಮೂಲತಃ ಕೃಷಿಕರು. ವೃತ್ತಿಯಿಂದ ಶಿಕ್ಷಕರಾಗಿ ರಾಜ್ಯ ಪ್ರಶಸ್ತಿಗೆ ಪುರಸ್ಕೃತರಾದವರು. ಜೊತೆಗೆ ಸಾಹಿತಿಗಳು. ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆ ನಾಡಿನ ಅನೇಕ ಹಿರಿಯ ಜನಪ್ರಿಯ ಸಾಹಿತಿಗಳ ಒಡನಾಟದಲ್ಲಿದ್ದಾರೆ. ಇಷ್ಟು ಗೊತ್ತಿತ್ತು. ಒಮ್ಮೆ ಚಳ್ಳಕೆರೆಯಲ್ಲಿ ಅನಿರೀಕ್ಷಿತವಾಗಿ ಅಷ್ಟೇನೂ ಎತ್ತರವಿಲ್ಲದ ಸಾತ್ವಿಕ ಮುಖ ಚಹರೆಯ ಶುಭ್ರ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿ ಕಂಡರು. ನನ್ನ ಗಮನ ಅವರೆಡೆಗೆ ಹರಿಯಲು ಅವರ ತಲೆಗೆ ವಿಶೇಷವಾಗಿ ಕಟ್ಟಿಕೊಂಡಿದ್ದ ಬಿಳಿ ಟವಲು ಕಾರಣವಾಗಿತ್ತು. ಪೋಟೋದಲ್ಲಿ ಕಂಡಿದ್ದ ಸಾಯಿಬಾಬರನ್ನು ನೆನಪಿಸಿತು ಇವರ ಶೈಲಿ. ಪಕ್ಕದಲ್ಲಿದವರು ಅವರೇ ನೋಡಪ ಬೆಳಗೆರೆ ಕೃಷ್ಣಶಾಸ್ತ್ರಿಗಳು ಎಂದರು! ಆಗ ನನಗೆ ನಿಜವಾಗಿಯೂ ಖುಷಿಯಾಯ್ತು. ಇವರ ಬಗ್ಗೆ ಕೇಳ್ತ ಇದ್ದೆ, ಈಗ ನೇರವಾಗಿ ನೋಡ್ತಿರುವೆ ಎನಿಸಿತು. ಆದರೆ ಅವರ ಹತ್ತಿರ ಹೋಗಿ ಮಾತನಾಡಿಸುವಷ್ಟು ಧೈರ್ಯ ನನಗಿರಲಿಲ್ಲ. ಇದಾದ ನಂತರ ಅವರ ‘ಯೇಗ್ದಾಗೆಲ್ಲ ಐತೆ’ ಪುಸ್ತಕ ಓದಿದೆ. ಮುಕುಂದೂರು ಸ್ವಾಮಿಗಳ ಸಾನಿಧ್ಯದಲ್ಲಿ ಸಿಕ್ಕ ಅನುಭವಗಳನ್ನು ಬಹಳ ರಸವತ್ತಾಗಿ ಬರೆದಿದ್ದರು ಕೃಷ್ಣಶಾಸ್ತ್ರಿಗಳು. ಈ ಮೂಲಕ ನನಗೂ ಕೃಷ್ಣಶಾಸ್ತ್ರಿಗಳನ್ನು ಮತ್ತೊಮ್ಮೆ ಕಂಡು ಪುಸ್ತಕ ಓದಿದ ಅನುಭವವನ್ನು ಹೇಳಿಕೊಳ್ಳಬೇಕೆಂಬ ಆಸೆಯಾಯ್ತು. ಹೀಗೆ ಇವರ ಬಗ್ಗೆ ಮತ್ತಷ್ಟು ತಿಳಿಯುವ ಕುತೂಹಲ ಹೆಚ್ಚುತಿತ್ತು. ಹೀಗಾಗಿ ಕೃಷ್ಣಶಾಸ್ತ್ರಿಗಳ ಮತ್ತೊಂದು ‘ಮರೆಯಲಾದೀತೆ’ ಪುಸ್ತಕ ತರಿಸಿಕೊಂಡು ಓದಿದೆ. ಅಬ್ಬಾ ಅವರೊಬ್ಬ ಅದ್ಭುತ ಅಪೂರ್ವ ಅನುಭಾವಿ ಎನಿಸಿತು. ತನ್ನ ಸುತ್ತಮುತ್ತಲಿನ ಸರಳ ಸಾಮಾನ್ಯ ಜನರಲ್ಲಿನ ಮೌಲ್ಯಗಳ ಮಹತ್ವಗಳನ್ನು ಒಟ್ಟಾರೆ ಪುಸ್ತಕ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ‘ಮರೆಯಲಾದೀತೆ’ ಮೂಲಕ ಮಾಡಿದ್ದರು. ಇದು ನನ್ನ ಬಹುಮೆಚ್ಚುಗೆಯ ಪುಸ್ತಕವಾಯ್ತು. ನನಗರಿಯದ ಹತ್ತು ಹಲವು ಮೌಲ್ಯಾಧಾರಿತ ವ್ಯಕ್ತಿತ್ವದ ಮಹತ್ವ, ಮನುಷ್ಯತ್ವದ ಸಾರ್ಥಕತೆ ತಿಳಿದಿದ್ದೆ ಇದರಿಂದ. ನನ್ನ ಅನೇಕ ಸ್ನೇಹಿತರಿಗೆ ‘ಮರೆಯಲಾದೀತೆ’ ಪುಸ್ತಕ ಓದುವಂತೆ ಹೇಳಿದ್ದೆ. ಒಮ್ಮೆಯೂ ಮಾತನಾಡಿಸದ ನಾನು ದೂರದಿಂದಲೇ ಕೃಷ್ಣಶಾಸ್ತ್ರಿಗಳ ಬಗ್ಗೆ ಅಭಿಮಾನ ಗೌರವ ಬೆಳೆಸಿಕೊಂಡಿದ್ದೆ. ಇದು ಅಕ್ಷರಗಳು ಮೂಡಿಸಿದ ಸಂಮೋಹನ ಕ್ರಿಯೆ. ಅವರನೊಮ್ಮೆ ಮಾತನಾಡಿಸಬೇಕೆಂಬ ಬಯಕೆ ಮಾನಸಿಕವಾಗಿ ಸಂಕಲ್ಪವಾಗಿತ್ತು. ಇದರ ಪರಿಣಾಮವಾಗಿಯೊ ಏನೂ..2009ರ ಇಸವಿಯಲ್ಲಿ ಹಿರಿಯ ಚಿತ್ರಕಲಾವಿದ ಮಿತ್ರರಾದ ಜಿ.ಕೆ. ಶಿವಣ್ಣ ಪೋನ್ ಮಾಡಿದರು. “ನಾನು “ಶಿಕ್ಷಣ ವಾರ್ತೆ” ಪತ್ರಿಕೆಗಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಂದರ್ಶನಕ್ಕಾಗಿ ಬೆಂಗಳೂರಿಂದ ಬರುತ್ತಿದ್ದೇನೆ. ನೀವೂ ಜೊತೆಯಾಗುತ್ತೀರ” ಅಂತ ಕೇಳಿದ್ರು. ಇಂತಹ ಅವಕಾಶಕ್ಕಾಗಿ ಹಂಬಲಿಸುತ್ತಿದ್ದ ನಾನು ಮರುಮಾತನಾಡದೆ “ಖಂಡಿತವಾಗಿ ಬರುವೆ ಸರ್” ಎಂದು ತಿಳಿಸಿದೆ. ಕೃಷ್ಣಶಾಸ್ತ್ರಿಗಳನ್ನು ಭೇಟಿಯಾಗುವ ಆಸೆ ಮತ್ತು ಉತ್ಸಾಹದಲ್ಲಿ ಚಿತ್ರಕಲಾವಿದ ವೆಂಕಟೇಶ ರೆಡ್ಡಿಯವರನ್ನು ಜೊತೆಗೆ ಕರೆದುಕೊಂಡು ಮೂವರು ಬೆಳಗೆರೆ ಹೋದೆವು. ಹಸಿರುಮಯವಾಗಿ ತುಂಬಿದ ತೋಟದ ನಡುವೆ ಋಷಿಮುನಿಗಳು ಕಟ್ಟಿಕೊಂಡಂತೆ ಸಣ್ಣದೊಂದು ಕುಟೀರ ಕಟ್ಟಿಕೊಂಡಿದ್ದರು ಕೃಷ್ಣಶಾಸ್ತ್ರಿಗಳು. ಅಂಗಳದಲ್ಲಿ ಪ್ರಶಾಂತವಾಗಿ ಏನೋ ಓದುತ್ತಾ ಬಿಳಿ ಅಂಗಿ ಲುಂಗಿ ಧರಿಸಿದ್ದ ಅವರ ಹತ್ತಿರ ಹೋಗಿ ನಿಂತೆವು. ಜಿ.ಕೆ. ಶಿವಣ್ಣ ಮೊದಲೆ ಬರುವ ವಿಷಯ ತಿಳಿಸಿದ್ದರಿಂದ ಶಾಸ್ತ್ರೀಗಳು ಕಂಡು ನಗುಮೊಗದಿಂದ ಕೈಕುಲಕಿ ಬರಮಾಡಿಕೊಂಡರು. ಜಿ.ಕೆ.ಶಿವಣ್ಣ ನಮ್ಮನ್ನು ಪರಿಚಯಿಸಿದರು.ನಮಗೂ ಕುಳಿತು ಕೊಳ್ಳಲು ಹೇಳಿದ್ರು. ಮನದಾಸೆಯಂತೆ ಕಣ್ತುಂಬಿಸಿಕೊಂಡು ಅವರ ಮಾತುಗಳನ್ನು ಕೇಳುತ್ತಿದ್ದೆ. ಸಹಜ ಆಡುಭಾಷೆಯ ಅವರ ಅನುಭವಗಳು ರುಚಿಯೆನಿಸಿದವು. ಜಿ.ಕೆ.ಶಿವಣ್ಣ ಸಂದರ್ಶನ ಮಾಡಲು ಶಾಸ್ತ್ರೀಗಳ ಮುಖದತ್ತಿರ ರೆಕಾರ್ಡರ್ ಹಿಡಿದರು. ಸ್ವಲ್ಪ ಮಾತುಕತೆ ಆದ ಮೇಲೆ, ನನಗೂ ಏನಾದರೂ ಕೇಳಿ ಎಂದರು. ನಾನು ಖುಷಿಯಿಂದ ಧೈರ್ಯ ಮಾಡಿ ಅವರ ಬಗ್ಗೆ ತಿಳಿದಷ್ಟು ಅರಿವಿನಿಂದ ಎರಡು ಪ್ರಶ್ನೆ ಮಾಡಲಾಗಿ ಕೃಷ್ಣಶಾಸ್ತ್ರಿಗಳು ಪ್ರತಿಕ್ರಿಯಿಸಿದ್ದು ಬಹಳ ಆನಂದವಾಯ್ತು. ಅವರೊಂದಿಗೆ ಪೋಟೋ ತೆಗಿಸುವ ಉದ್ದೇಶದಿಂದ ಕ್ಯಾಮರ ತೆಗೆದುಕೊಂಡು ಹೋಗಿದ್ದರಿಂದ ಒಂದೆರಡು ಪೋಟೋ ತೆಗಿಸಿಕೊಂಡೆವು. ಈ ಸಂದರ್ಶನ ಒಂದು ವಾರದ ನಂತರ ಮೂರ್ನಾಲ್ಕು ಪುಟಗಳಲ್ಲಿ “ಶಿಕ್ಷಣ ವಾರ್ತೆ” ಪತ್ರಿಕೆಯಲ್ಲಿ ‘ಸಾಧಕರಿವರು’ ಅಂಕಣದಲ್ಲಿ ಸೊಗಸಾಗಿ ಪ್ರಕಟವಾಗಿತ್ತು. ನಂತರದಲ್ಲಿ ಹೆಚ್ಚೆಚ್ಚು ತಿಳಿಯಲು ಓದುವ ಪ್ರಯತ್ನ ಮಾಡಿದೆ. ಕೃಷ್ಣಶಾಸ್ತ್ರಿಗಳು ಸಾದಾರಣ ಯೋಚನೆಯವರಲ್ಲ ಅವರೊಬ್ಬ ಅಪರೂಪದ ಸಮಾಜಮುಖಿ ಚಿಂತನೆಯ ವ್ಯಕ್ತಿ. ಸಮಾಜದ ಬಗ್ಗೆ ಅತೀವ ಕಾಳಜಿ ಇಟ್ಟುಕೊಂಡವರು. ಅಷ್ಟರ ಮಟ್ಟಿಗೆ ಕುಟುಂಬದ ಹಿನ್ನೆಲೆ ಬದುಕು ಅವರನ್ನು ಮಾಗಿಸಿತ್ತು. ಒಂದು ಕಡೆ ಅವರೇ ಹೀಗೆ ಹೇಳಿಕೊಂಡಿದ್ದಾರೆ; ನನಗೆ ತುಂಬಾ ಹಸಿವು ಕಾಡಿದಾಗ ನನ್ನ ತಂದೆ ಚಂದ್ರಶೇಖರ ಶಾಸ್ತ್ರೀಗಳು ಪಕ್ಕದ ರಾಗಿ ಹೊಲಕ್ಕೆ ಕರೆದೊಯ್ದು ರಾಗಿ ತೆನೆ ಉಜ್ಜಿ ತಿನಿಸಿಕೊಂಡು ಬಂದಿದ್ದರು. ಶಾಸ್ತ್ರೀಗಳ ಈ ಅನುಭವದ ನೆನಪುಗಳು ಅವರ ಕಡು ಬಡತನದ ಬೇಗೆಯನ್ನು ಅದೊಂದು ಘಟನೆಯಲ್ಲಿ ಅರಿಯಬಹುದು. ಹಾಗೆ ಅವರು ಬೆಳೆದು ವಿವಾಹಿತನಾದ ಮೇಲೆ ತನ್ನ ಹೆಂಡತಿ ಎರಡು ಮಕ್ಕಳನ್ನು ಒಂದೇ ದಿನ ಕಳೆದುಕೊಳ್ಳಲು ದುರಂತ ನಡೆದುಹೋಯ್ತು. ಇದರಿಂದ ಈ ಮೃದು ಹೆಂಗರಳಿನ ಜೀವ ಅದೆಷ್ಟು ನೊಂದಿರಬೇಕು ಉಹಿಸಿ…!? ಸಂಬಂಧಿಕರು ಆಪ್ತರು ನಿಮಗಿನ್ನು ಚಿಕ್ಕ ವಯಸ್ಸು ಮರು ಮದುವೆ ಮಾಡಿಕೊಳ್ಳಿ. ಎಂದು ಎಷ್ಟೇ ಹೇಳಿದರು ಶಾಸ್ತ್ರೀಗಳು ಕೇಳುತ್ತಿರಲಿಲ್ಲ. ಒಪ್ಪಿಸುವ ಒತ್ತಡ ಹೆಚ್ಚಾದಂತೆ, ಇದರಿಂದ ಪಾರಾಗಲು ದಂತ ವೈದ್ಯರಿಂದ ಇನ್ನೂ ಆರೋಗ್ಯವಾಗಿದ್ದ ಹಲ್ಲುಗಳನ್ನೆ ಕೀಳಿಸಿಕೊಂಡು ಬಿಟ್ಟರು ಶಾಸ್ತ್ರೀಗಳು. ಅವರ ಉದ್ಧೇಶ ಈ ಬೊಚ್ಚುಬಾಯಿವನನ್ನು ಇನ್ಮುಂದೆ ಯಾವ ಹೆಣ್ಣು ಮದುವೆ ಆಗಲು ಮುಂದೆ ಬರೊಲ್ಲ ಎಂಬುದಾಗಿತ್ತು. ಇದನ್ನರಿತ ಕುಟುಂಬ ಮತ್ತು ಆಪ್ತರು ತೆಪ್ಪಗಾದರು. ಏನೇ ಇರಲಿ ಒಂದೇ ದಿನ ಹೆಂಡತಿ ಎರಡು ಹೆಣ್ಣು ಮಕ್ಕಳನ್ನು ಕಳೆದುಕೊಂಡ ನೋವಿನ ಆಗಾಥಗಳನ್ನು ಸಾಮಾನ್ಯ ವ್ಯಕ್ತಿ ಸಹಿಸಿಕೊಳ್ಳಲು ಕಷ್ಟ. ಆದರೆ ಕೃಷ್ಣಶಾಸ್ತ್ರಿಗಳು ಜ್ಞಾನ ಸಂಪಾದಕ ಅಧ್ಯಯನಶೀಲರು. ಜೊತೆಗೆ ಸಾಧಕ ಶ್ರೇಷ್ಠರ ಸಾಂಗತ್ಯದಲ್ಲಿ ಜೀವ ಜೀವನದ ಆರಂಭ ಅಂತ್ಯಗಳ ಸತ್ಯ ಮತ್ತು ಸಾರ್ಥಕಗಳನ್ನು ಅರ್ಥೈಸಿಕೊಂಡಿದ್ದರು. ಹೀಗಾಗಿ ಅವರೊಬ್ಬ ಸಮಾಜದ ಚಿಂತಕರಾಗಿ ಮಾನವೀಯ ಕಳಕಳಿಗಳೊಂದಿಗೆ ಸೇವಾಕಾರ್ಯಗಳಲ್ಲೆ ತಮ್ಮ ಮುಂದಿನ ಜೀವನವನ್ನು ಮುಂದುವರಿಸಲು ಸಾಧ್ಯವಾಯ್ತು. ಗಮನಾರ್ಹವೆಂದರೆ, ಕೃಷ್ಣಶಾಸ್ತ್ರಿಗಳ ನೊಂದ ಬದುಕೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಸಹಸ್ರಾರು ಜನರಿಗೆ ಸ್ಪೂರ್ತಿದಾಯಕವಾಗಲು ಪ್ರೇರಕಶಕ್ತಿಯಾಯ್ತು. ತಮ್ಮ ಬದುಕಿನ ಮೂಲಕವೇ ಈ ಸಮಾಜ ದೇಶದ ಋಣ ತೀರಿಸಬೇಕೆಂಬ ಹಂಬಲದಿಂದಲೇ ಬದುಕಿ ಹಲವರಿಗೆ ಬದುಕಲೂ ಕಾರಣವಾದರು. ಪರಹಿತ ಕಾರ್ಯಗಳಿಗಾಗಿಯೇ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ತಾನು ಶಿಕ್ಷಕನಾಗಿ ಸೇವೆ ಸಲ್ಲಿಸಲು ವಿಶೇಷವಾಗಿ ಕ್ರಿಯಾಶೀಲರಾದರು. ಹೋದಲೆಲ್ಲ ಸ್ಥಳೀಯರ ಮನಗೆದ್ದು ಅವರ ಶ್ರಮದಾನದ ಮೂಲಕವೇ ಶಿಕ್ಷಣದ ಸೌಕರ್ಯಕ್ಕಾಗಿ ಶಾಲಾ ಕಟ್ಟಡ, ಸಾರ್ವಜನಿಕ ಆಸ್ಪತ್ರೆ, ಹಾಗು ರಸ್ತೆಗಳ ನಿರ್ಮಾಣ ಮಾಡಿಸಿದ್ದರು. ಮುಖ್ಯವಾಗಿ ಮೂಲತಃ ಶಾಸ್ತ್ರೀ ಅವರಿಗೆ ಶಾಲೆ ಕಟ್ಟಿಸುವ ಕನಸು ಗರಿಗೆದರಿದ್ದೆ ಒಂದು ಭಾವನಾತ್ಮಕ ರೋಚಕ. ತಂದೆ ಚಂದ್ರಶೇಖರ ಶಾಸ್ತ್ರೀಗಳು ಕೊನೆಯುಸಿರೆಳೆಯುವ ಕ್ಷಣ, “ಮಗನೆ ನನ್ನ ಆಸೆಯಂತೆ ಬಡವರ ಮಕ್ಕಳ ವಿದ್ಯೆ ಶಿಕ್ಷಣಕ್ಕಾಗಿ ಶಾಲೆ ಕಟ್ಟಿಸು” ಎಂದು ಕೇಳಿಕೊಂಡೆ ಜೀವ ಬಿಟ್ಟರು. ತಂದೆಯ ಈ ಕನಸನ್ನು ತಮ್ಮ ಬದುಕಿನ ಸಾಧನೆಯ ಮುಖ್ಯ ಭಾಗವಾಗಿಯೆ ಸ್ವೀಕರಿಸಿದರು. ತಾನು ವೃತ್ತಿಗಾಗಿ ಹೋದಲೆಲ್ಲ ಸ್ಥಳೀಯರ ಸಹಕಾರಕ್ಕೆ ಮನವೊಲಿಸಿದರು. ಅವರುಗಳ ಶ್ರಮದಾನದಿಂದಲೇ ಶಾಲೆ ಜೊತೆಗೆ ಆಸ್ಪತ್ರೆ ರಸ್ತೆ ನಿರ್ಮಾಣಗಳನ್ನು ಸಾಧಿಸಿದ್ದು ಶಾಸ್ತ್ರೀಗಳ ಸಾರ್ಥಕತೆ. ಈ ಮೂಲಕ ತನ್ನ ತಂದೆಯ ಕನಸನ್ನು ನೇರವೇರಿಸಿದ ಧನ್ಯತೆ. ಈ ಮುಖೇನ ಸಾವಿರಾರು ಬಡ ವಿದ್ಯಾರ್ಥಿಗಳ ಜೀವನ ಭವಿಷ್ಯಕ್ಕೆ ಉತ್ತಮ ಶಿಕ್ಷಣದ ಅಡಿಪಾಯ ಹಾಕಿಕೊಟ್ಟಿದಲ್ಲದೆ, ತಂದೆ ಮತ್ತು ಈ ಭೂಮಿಯ ಋಣ ಎರಡೂ ತೀರಿಸಿದಂತಾಯ್ತು. ಕೃಷ್ಣಶಾಸ್ತ್ರಿಗಳು ಮಹಾತ್ಮ ಗಾಂಧಿಯವರ ಬದುಕು ಬರಹಕ್ಕೆ ಅತೀವ ಪ್ರಭಾವಿತರಾದವರು. ಈ ಹಿನ್ನೆಲೆಯಲ್ಲಿ ಅವರೊಬ್ಬ ಗಾಂಧಿವಾದಿಯಾಗಿಯೇ ಗುರುತಿಸಲ್ಪಟ್ಟವರು. ಗಾಂಧೀ ಆದರ್ಶಗಳನ್ನು ಅನುಸರಿಸಿ ಬದುಕುವ ಸಂಕಲ್ಪತೊಟ್ಟು ಸಾಧಿಸಿದ್ದರು ಕೂಡ. ತನ್ನ ಸುತ್ತಲಿನ ಜಗತ್ತನ್ನು ವಿಶಾಲವಾಗಿ ನೋಡುತ್ತಿದ್ದ ಶಾಸ್ತ್ರೀಗಳು. ಗೊಡ್ಡು ಅಮಾನವೀಯ ಧೋರಣೆ ಸಂಪ್ರದಾಯಗಳ ವಿರೋಧಿಯಾಗಿದ್ದವರು. ಮುಖ್ಯವಾಗಿ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಯಾರನ್ನು ಜಾತಿ ಭೇದ ಭಾವ ಮಾಡದೆ ಎಲ್ಲರೊಂದಿಗೆ ಸಮಾನ ಪ್ರೀತಿ ವಿಶ್ವಾಸದಿಂದ ಬೆರೆತವರು. ಹೀಗಾಗಿ ತಮ್ಮದೇ ಆದ
ಸಾರ್ವಜನಿಕ ಸಂಬಂಧಗಳನ್ನು ವೃದ್ಧಿಸಿಕೊಂಡಿದ್ದರು. ತಂದೆ ತಾಯಿ ಕುಟುಂಬದ ಪರೋಪಕಾರ ಚಿಂತನೆಗಳೆ ತುಂಬಿಕೊಂಡಿದ್ದ ಕೃಷ್ಣಶಾಸ್ತ್ರಿಗಳು ಅವುಗಳ ಅನುಷ್ಠಾನಕ್ಕೆ ಪರಿತಪಿಸುತ್ತಿದ್ದು ಅವರ ಬದುಕಿನುದ್ದಕ್ಕೂ ಕಾಣ ಸಿಗುತ್ತಲೇ ಹೋಗುತ್ತದೆ. ಇವರೊಬ್ಬ ಸಾಹಿತಿಯಾಗಿ ಬರೆಯುವ ಬರಹದಂತೆಯೆ ಬದುಕನ್ನು ಕೂಡ ಅಷ್ಟೇ ಸತ್ಯ ಸುಂದರ ಕಾವ್ಯದಂತೆ ರೂಪಿಸಿಕೊಂಡವರು. ಸರಳ ಬದುಕಿನ ಸಹಜ ಸಜ್ಜನಿಕೆಗಳ ಬಗ್ಗೆ ಭಾಷಣ ಭೋದನೆ ಮಾಡದೆ ಸಲೀಸಾಗಿ ಬದುಕುತ್ತಿದ್ದ ಶಾಸ್ತ್ರೀಗಳ ಬಗ್ಗೆ ಖ್ಯಾತ ಪತ್ರಕರ್ತ ರವಿಬೆಳಗೆರೆ ಹೀಗೆ ತನ್ನ ಮಾವವನ್ನು ಕುರಿತು ಹೀಗೆ ಬರೆಕೊಂಡಿದ್ದಾರೆ: ಕಿಟ್ಟಪ್ಪ ತನ್ನ ಜೀವಮಾನದಲ್ಲೆಂದೂ ಇಸ್ತ್ರಿ ಬಟ್ಟೆ ಹಾಕಿಲ್ಲ.ವರ್ಷಗಟ್ಟಲೆ ತನ್ನ ಜುಬ್ಬಾ,ತನ್ನ ಅಂಚಿಲ್ಲದ ಬಿಳೀ ಪಂಚೆಯನ್ನು ತಾನೇ ಒಗೆದುಕೊಂಡಿದ್ದಾನೆ.ಎರಡನೆಯದನ್ನು ಬಿಟ್ಟರೆ ಆತನ ಬಳಿ ಮೂರನೆಯ ಜೊತೆ ಬಟ್ಟೆಯಿಲ್ಲ.ಆದರೆ ಆತ ನನಗಿಂತ ತುಂಬಾ ಮಾನವಂತ. ಶಾಸ್ತ್ರೀಗಳ ಸರಳತೆಗೆ ಇದಕ್ಕಿಂತ ಸಾಕ್ಷಿಬೇಕಿಲ್ಲ. ಹಾಗೆ ಕೃಷ್ಣಶಾಸ್ತ್ರಿಗಳು ಅಕ್ಷರಶಃ ಮಾನವತವಾದಿಗಳು. ಅವರೆಂದೂ ಜಾತಿಗೆ ಪ್ರಾಧಾನ್ಯತೆ ಕೊಟ್ಟವರಲ್ಲ. ತನ್ನ ಸುತ್ತಮುತ್ತಲಿನ ಯಾರಲ್ಲೂ ಜಾತಿ ಕಾಣದೆ ಪ್ರೀತಿಯಿಂದ ಬೆರೆತು ಬಾಳಿದವರು. ಇದಕ್ಕೊಂದು ದಿಟ್ಟ ನಿದರ್ಶನವಾಗಿ ರವಿಬೆಳಗೆರೆಯವರೆ ಕೃಷ್ಣಶಾಸ್ತ್ರಿಗಳ ಪ್ರಮುಖವಾದ ಪ್ರಸಂಗವನ್ನು ಬರೆದುಕೊಂಡಿದ್ದಾರೆ ಕೇಳೋಣ ಬನ್ನಿ: ನಮ್ಮ ಮನೆಯಿಂದ ಬಹುಶಃ ಜಾತಿಯನ್ನೂ, ಗೊಡ್ಡು ಬ್ರಾಹ್ಮಣ್ಯವನ್ನೂ ಕಿತ್ತು ಹೊರಕ್ಕೆ ಚೆಲ್ಲಿದ್ದೇ ಬೆಳಗೆರೆ ತಾತ. ನನ್ನ ತಾಯಿಯ ತಂದೆ. ಆತನನ್ನು ಶೃಂಗೇರಿಯ ಮಠದವರು ಸಂಸ್ಕೃತ ಪಾಠ ಹೇಳಿ ಕೊಡಲು ಕರೆಸಿಕೊಂಡಿದ್ದರು.ಶುದ್ಧ ಬಯಲು ಸೀಮೆಯ ಮನುಷ್ಯನಿಗೆ ಶೃಂಗೇರಿ ಎಡೆಬಿಡದ ಮಳೆ ಹುಚ್ಚು ಹಿಡಿಸಿತ್ತು. ಸಂಜೆಯಾದ ಕೂಡಲೆ ಕಾಫಿ ಕುಡಿಯುವ ಚಟ.ಮಠದವರನ್ನು ಕೇಳಲು ಸಂಕೋಚ, ಹೀಗಾಗಿ ಮಠದಿಂದ ದೂರ,ಊರ ಬಾಗಿಲಲ್ಲಿ ಹೋಟೆಲ್ಲೊಂದರತನಕ ನಡೆದು ಹೋಗಿ ಕಾಫಿ ಕುಡಿದು ಬರುತ್ತಿದ್ದ ಅವತ್ತೊಂದು ದಿನ ಕಾಫಿಗೆಂದು ಹೊರಟವನು ದೊಡ್ಡ ಮಳೆಗೆ ಸಿಕ್ಕಿದ್ದಾನೆ.ರಸ್ತೆ ಬದಿಯಲ್ಲೇ ಇದ್ದ ಮುಸ್ಲಿಮರೊಬ್ಬರ ಮನೆಯ ಅಂಗಳದಲ್ಲಿ,ಮನೆಯ ಸಜ್ಜೆಯ ನೆರಳಲ್ಲಿ ಸುಮ್ಮನೆ ಮಳೆಯ ಇರುಚಲು ತಿನ್ನುತ್ತ ನಿಂತಿದ್ದಾನೆ. ಆ ಮನೆಯ ಗೃಹಿಣಿ ‘ಒಳ್ಗಡೆ ಬನ್ನಿ ತಾತ’ ಅಂದಳಂತೆ.ಎಷ್ಟು ಹೊತ್ತಾದರೂ ಮಳೆ ನಿಲ್ಲುತ್ತಿಲ್ಲ. ಕಾಫಿಯ ಚಟ ಚಟಪಡಿಸುವಂತೆ ಮಾಡುತ್ತಿದೆ.ಮಳೆ ನಿಲ್ಲುವ ಹೊತ್ತಿಗೆ ಹೊಟೇಲು ಮುಚ್ಚಿ ಬುಟ್ಟೀತೆಂಬ ಆತಂಕ.ಮುಸ್ಲಿಮರ ಗೃಹಿಣಿಯ ಮುಂದೆ ಹಾಗಂತ ಪೇಚಾಡಿಕೊಂಡಿದ್ದಾನೆ. ನಮ್ಮನೇಲಿ ಕಾಫಿ ಮಾಡಿಕೊಟ್ರೆ ಕುಡಿತೀರೋ? ನಾವು ಮುಸ್ಲಿಮರು ಅಂದಳಂತೆ ಗೃಹಿಣಿ. ‘ಅಲ್ಲ ಕಣಮ್ಮಾ….ನಾನೇನು ನಿನ್ನ ಜಾತಿ ಕೇಳಿದನಾ? ನಾನು ಕೇಳಿದ್ದು ಕಾಫಿ!’ ಅಂದಿದ್ದಾನೆ ತಾತ.ಅವತ್ತಿಂದ ಪ್ರತೀ ಸಾಯಂಕಾಲ ಸಾಬರ ಮನೆಯಲ್ಲಿ ತಾತನಿಗೆ ಕಾಫಿ ಸೇವೆ. ಮುಸ್ಲಿಮರ ಮನೆಯಲ್ಲಿ ಕಾಫಿ ಕುಡಿಯುತ್ತಿರುವ ವಿಷಯ ಮಠದವರಿಗೆ ಗೊತ್ತಾಗಿ, ‘ನಿಮಗೆ ಬಹಿಷ್ಕಾರ ಹಾಕಬೇಕಾಗುತ್ತೆ!’ ಎಂದು ಗದರಿಸಿದರಂತೆ. ಅಷ್ಟೇ ತಾನೇ ಈ ಜನಿವಾರಕ್ಕೆ ಹಾಕಿ. ಜನಿವಾರ ಹಾಕ್ಕೊಂಡಿದ್ದರಿಂದ ನಾನು ಬ್ರಾಹ್ಮಣ. ಬ್ರಾಹ್ಮಣನಾಗಿದ್ದರಿಂದ ನಿಮಗೆ ನನ್ನ ಮೇಲೆ ಬಹಿಷ್ಕಾರ ಹಾಕುವ ಹಕ್ಕು ಬಂದಿದೆ.ಇದನ್ನು ಬಿಚ್ಚಿಟ್ಟರೆ ಮುಗಿತಲ್ಲ? ಹಾಕೋದೇ ಆದರೆ, ಈ ಜನಿವಾರಕ್ಕೆ ಬಹಿಷ್ಕಾರ ಹಾಕಿ’ ಎಂದು ಕಳಚಿಟ್ಟು ಶೃಂಗೇರಿ ಮಠದಿಂದ ಹೊರಬಿದ್ದವನು ಮತ್ತೆ ಅದರ ಹೆಬ್ಬಾಗಿಲು ತುಳಿಯಲಿಲ್ಲ. ನಮ್ಮ ಮನೆಯಿಂದ, ಮನೆತನದಿಂದ ಬ್ರಾಹ್ಮಣ್ಯ ಮತ್ತು ಅದರ ಲಾಂಛನಗಳು ತೊಲಗಿಹೋದದ್ದೇ ಹಾಗೆ. ತಾತ ಬ್ರಾಹ್ಮಣ. ಆತನ ಮಗ ಬೆಳಗೆರೆ ಕೃಷ್ಣಶಾಸ್ತ್ರಿ.ಆತನೂ ಜನಿವಾರ ಹಾಕಲಿಲ್ಲ ಆತನೂ ಅ- ಬ್ರಾಹ್ಮಣ. ಜನಿವಾರ ತಾನು ತೆಗೆದೆಸೆದೆ. ಇದನ್ನು ರವಿಬೆಳಗೆರೆಯವರೆ ತನ್ನ ಮಾವ ಕೃಷ್ಣಶಾಸ್ತ್ರಿಗಳ ನಡೆ ನಿಲುವುಗಳ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ಒಬ್ಬ ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿ ತಂದೆ ತಾಯಿಗಳ ಆದರ್ಶ ಮತ್ತು ಕನಸುಗಳನ್ನು ಬೆನ್ನಿಗೆ ಕಟ್ಟಿಕೊಂಡು ಅವುಗಳ ಕಾರ್ಯಸಾಧನೆಗಾಗಿಯೆ ಬದುಕಿದ್ದು ಸಾದಾರಣವೇ? ತನ್ನ ವೈಯಕ್ತಿಕ ಇಚ್ಚೆಗಳ ಮೀರಿ ಕುಟುಂಬದ ಉದ್ಧಾರ ಮೀರಿ ಸಮಾಜದ ಒಳಿತಿಗಾಗಿ ಉನ್ನತಿಗಾಗಿಯೇ ಬೆಳಗೆರೆ ಕೃಷ್ಣಶಾಸ್ತ್ರಿಗಳು ಸಂತನಂತೆ ಜೀವಿಸಿದ ರೀತಿಯೇ, ಮನುಕುಲಕ್ಕೆ ದಾರಿದೀಪ. ಅವರೊಬ್ಬ ಸಮರ್ಥ ಸಾಧಕ ಶ್ರೇಷ್ಠರಾಗಿ ಚಿರಂತನದ ಬೆಳಕಾಗಿಯೆ ಇರುತ್ತಾರೆ.
- ಸಿದ್ಧಾಪುರ ಶಿವಕುಮಾರ್

