*– ಇಲಾಹಿ ಇ. ಜಮಖಂಡಿ*
ಚಿಮ್ಮಡ: ಬೇಸಿಗೆ ಬಂತೆಂದರೆ ಎಲ್ಲೆಡೆ ಕುಡಿಯುವ ನೀರಿಗಾಗಿ ಹಾಹಾಕಾರ, ಬಟ್ಟೆ ತೊಳೆಯಲು ನೀರಿಗಾಗಿ ಜನರು ಹೊಲ-ಗದ್ದೆಗಳೆನ್ನದೆ ಐದು ಕಿ.ಮಿ.ವರೆಗೆ ಎಲ್ಲೆಡೆ ಅಲೆದಾಡುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಗ್ರಾಮದಲ್ಲಿ ನೀರಿನ ಸಮಸ್ಯೆಯೇ ಇಲ್ಲವೆಂದರೆ ನಂಬುತ್ತೀರಾ…
ಹೌದು ರಬಕವಿ-ಬನಹಟ್ಟಿ ತಾಲೂಕಿನ ಸುಮಾರು ಹದಿನೆಂಟು ಸಾವಿರ ಜನಸಂಖ್ಯೆ ಹೊಂದಿರುವ ಅತೀ ದೊಡ್ಡ ಗ್ರಾಮವಾಗಿರುವ ಚಿಮ್ಮಡದಲ್ಲಿ ವರ್ಷವಿಡೀ ನೀರಿನ ಯಾವುದೇ ಸಮಸ್ಯೆಯಿಲ್ಲದೇ ಜನ ನೆಮ್ಮದಿಯಾಗಿದ್ದಾರೆ.
ಈ ಭಾಗದ ಹಲವೆಡೆ ಬೇಸಿಗೆಯಲ್ಲಿ ವಾರಕ್ಕೊಮ್ಮೆ, ಹದಿನೈದು ದಿನಗಳಿಗೊಮ್ಮೆ ನಲ್ಲಿಗಳಿಗೆ ನೀರು ಹರಿಸಿದರೆ, ಇಲ್ಲಿ ಗಂಟೆಗಟ್ಟಲೆ ತಾಜಾ ಸಿಹಿನೀರು ನಲ್ಲಿಗಳ ಮೂಲಕ ಪ್ರತಿದಿನ ಹರಿಸಲಾಗುತ್ತಿದೆ. ಅವಶ್ಯವೆನಿಸಿದರೆ ದಿನಕ್ಕೆ ಎರಡು ಹೊತ್ತು ಬಿಡಲಾಗುತ್ತದೆ. ಇದರಿಂದ ಮಹಿಳೆಯರು ಕೊಳೆ ಬಟ್ಟೆ ತೊಳೆಯಲು ಹೊಲ ಗದ್ದೆಗಳಿಗೆ ಅಲೆಯದೆ ತಮ್ಮ ಮನೆಯ ಮುಂದೆಯೇ ನೀರು ಸಂಗ್ರಹಿಸಿಕೊಂಡು ಬಳಸುತ್ತಾರೆ. ಅಲ್ಲದೇ ಶುಧ್ಧ ಕುಡಿಯುವ ನೀರಿನ ಮೂರು ಘಟಕಗಳು ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಗ್ರಾಮಸ್ಥರು ಈ ಮೊದಲು ಕುಡಿಯುವ ನೀರನ್ನು ಸುಮಾರು ಅರ್ಧ ಕಿ.ಮಿ. ದೂರದಲ್ಲಿ ಬ್ರಿಟೀಷರು ನಿರ್ಮಿಸಿದ ದೇಸಾಯಿಯರ ಬಾವಿಯಿಂದಲೇ ಹೊತ್ತು ತರುತ್ತಿದ್ದರು, ೧೯೮೫ ರಲ್ಲಿ “ನೀರಸಾಬ” ಎಂದೇ ಖ್ಯಾತರಾಗಿದ್ದ ಗ್ರಾಮೀಣಾಭಿವೃದ್ದಿ, ಪಂಚಾಯತ ರಾಜ್ ಸಚಿವ ಅಬ್ದುಲ್ ನಜೀರಸಾಬ ರವರ ಯೋಜನೆಯಂತೆ ಶಾಸಕ ಜಿ.ಎಸ್. ಬಾಗಲಕೋಟ ರವರ ಸಹಕಾರದಿಂದ ಆಗಿನ ತಾ.ಪಂ ಅದ್ಯಕ್ಷರಾಗಿದ್ದ ಗ್ರಾಮದ ದಿ;ನಮಹಾದೇವಪ್ಪಾ ಹಟ್ಟಿಯವರು ದೇಸಾಯಿಯವರ ಬಾವಿಯಿಂದಲೇ ಇಡೀ ಗ್ರಾಮಕ್ಕೆ ಪೈಪ್ಲೈನ್ ಮೂಲಕ ನಲ್ಲಿಗಳಿಗೆ ನೀರು ಹರಿಸುವ ಯೋಜನೆ ಕಾರ್ಯರೂಪಕ್ಕೆ ತಂದು ಅದರಲ್ಲಿ ಯಶಸ್ವಿಯೂ ಆದರು. ಗ್ರಾಮವು ಬೆಳೆದಂತೆಲ್ಲ ನಲ್ಲಿಗಳ ಸಂಖೆ ವಿಸ್ತರಣೆಯಾಗುತ್ತ ಬಂದರೂ ಬೇರೆ ಬೇರೆ ಮೂಲಗಳಿಂದ ಗ್ರಾಮಸ್ಥರಿಗೆ ಸಮರ್ಪಕ ನೀರು ಪೋರೈಸುವ ಮೂಲಕ ಇಲ್ಲಿನ ಗ್ರಾಮ ಪಂಚಾಯತಿ ಇತರ ಗ್ರಾಮಗಳಿಗೆ ಮಾದರಿಯಾಗಿದೆ.
ಇಲ್ಲಿನ ಹಲವು ಕುಡಿಯುವ ನೀರಿನ ಮೂಲಗಳು ಯಾವ ಭೀಕರ ಬರಗಾಲದಲ್ಲಿಯೂ ಬತ್ತದೇ ಗ್ರಾಮಸ್ಥರ ದಾಹ ತಣಿಸುತ್ತಿವೆ.


