ರಾಜ್ಯದಲ್ಲಿ ಕುಡಿವ ನೀರಿಗೆ ಹಾಹಾಕಾರ | ಖಾಲಿ ಕೊಡ ಹಿಡಿದು ಪ್ರತಿಭಟನೆ | ಚುನಾವಣೆ ಮುಂದೂಡಲು ಆಗ್ರಹ
ಬೆಂಗಳೂರು: ಕುಡಿಯಲು ನೀರಿಲ್ಲ. ಜನ ನೀರಿಗಾಗಿ ಪರದಾಡುವಂತಾಗಿದೆ. ರಾಜ್ಯದಲ್ಲಿ ಕುಡಿಯೋ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಿರುವಾಗ ಚುನಾವಣೆ ಮಾಡೋದು ಎಷ್ಟು ಸರಿ. ಚುನಾವಣೆ ಮುಂದೂಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇಂಥಹ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಬೇಡ. ಅದನ್ನು ಮುಂದೂಡಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಾನು ಆಗ್ರಹಿಸುತ್ತೇನೆ’ ಎಂದರು.
ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಮೂರು ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ ಯಾವೊಂದು ಪಕ್ಷದ ನಾಯಕರೂ ಕಾವೇರಿ ನೀರಿನ ಬಗ್ಗೆ ಆಗಲಿ, ರಾಜ್ಯದಲ್ಲಿ ಉಂಟಾಗಿರುವ ಜಲಕ್ಷಾಮದ ಬಗ್ಗೆ ಆಗಲಿ ಮಾತನಾಡುತ್ತಿಲ್ಲ. ಹೀಗಾಗಿ ಚುನಾವಣೆ ಮುಂದೂಡುವಂತೆ ನಾನು ಮನವಿ ಮಾಡುತ್ತೇನೆ ಎಂದರು. ಹೀಗೇ ನೀರಿನ ಸಮಸ್ಯೆ ಮುಂದುವರೆದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ನೀರಿಲ್ಲ. ಕಾವೇರಿ ನೀರು ತಮಿಳುನಾಡು ಪಾಲಾಗುತ್ತಿದೆ. ನಮ್ಮ ರಾಜ್ಯದ ಜನ ನೀರಿಲ್ಲದ ಸಾಯುತ್ತಿದ್ದಾರೆ. ಈ ಬಗ್ಗೆ ಯಾರೂ ಕೂಡ ಗಮನವೇ ಹರಿಸುತ್ತಿಲ್ಲ. ಯಾರೊಬ್ಬರೂ ಕೂಡ ಇದರ ಬಗ್ಗೆ ಪ್ರಸ್ತಾಪವೂ ಮಾಡುತ್ತಿಲ್ಲ ಎಂದು ಆಕ್ರೋಶಗೊಂಡರು. ಇನ್ನೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ನೀರಿಗಾಗಿ ಪ್ರತಿಭಟನೆಯಲ್ಲಿ ಐವತ್ತಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಖಾಲಿ ಕೊಡ ಹಿಡಿದು ಬೇಕೇ ಬೇಕು ನೀರು ಬೇಕು ಎಂದು ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸ್ ವಾಹನದಲ್ಲಿ ಪ್ರತಿಭಟನಾಕಾರರನ್ನು ಕರೆದೊಯ್ಯಲಾಯಿತು.
ರಾಜ್ಯದಲ್ಲಿ ನೀರು ಬಿಕ್ಕಟ್ಟು ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬೆಂಗಳೂರಿಗರು ನೀರಿನ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ನೀರಿಗಾಗಿ ಹೋರಾಟವನ್ನು ಶುರು ಮಾಡಿದ್ದಾರೆ. ವಿಪರ್ಯಾಸ ಅಂದರೆ ಬಿಬಿಎಂಪಿ ಹಾಗೂ ಬಿಡ್ಲ್ಯೂಎಸ್‌ಎಸ್‌ಬಿ ಉಚಿತವಾಗಿ ನೀರು ಪೂರೈಕೆ ಮಾಡುತ್ತಿದ್ದರೂ ನೀರು ಬಳಸಲು ಯೋಗ್ಯವಾಗಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಕಲುಷಿತ ನೀರನ್ನು ಫಿಲ್ಟರ್ ಮಾಡಿ ಕಳುಹಿಸುತ್ತಿದ್ದಾರೆಂದು ಜನ ಆರೋಪ ಮಾಡಿದ್ದಾರೆ.
ನಗರದಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತಿದ್ದಂತೆ ವಾಟರ್ ಕ್ಯಾನ್ ಹಾಗೂ ವಾಟರ್ ಟ್ಯಾಂಕ್‌ಗಳ ಬೆಲೆ ಕೂಡ ಕೈಮೀರಿ ಹೋಗಿದೆ. ಮಧ್ಯಮ ವರ್ಷದವರ ಪಾಲಿಗೆ ನೀರಿನ ಸಮಸ್ಯೆ ದೊಡ್ಡ ಚಿಂತೆಯಾಗಿ ಕಾಡತೊಡಗಿದೆ. ಹೀಗಾಗಿ ಸರ್ಕಾರ ನೀರಿನ ಸಮಸ್ಯೆಯನ್ನು ಬಗೆ ಹರಿಸಬೇಕು, ನೀರಿನ ಪೈರೈಕೆಗೆ ಹೆಚ್ಚು ಒತ್ತು ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

