ಯಡ್ರಾಮಿ: ಪ್ರಾಚೀನ ಕಾಲದಿಂದಲೂ ಹುಟ್ಟಿ ಬೆಳೆದು ಬಂದ ಕನ್ನಡದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಅಣ್ಣ ಬಸವಣ್ಣನವರು ಹುಟ್ಟು ಹಾಕಿದ ವಚನ ಸಾಹಿತ್ಯ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ ಎಂದು ನಿವೃತ್ತ ಆರೋಗ್ಯಾಧಿಕಾರಿ, ಚನ್ನಬಸವಣ್ಣನವರ ವಂಶಸ್ಥರಾದ ದತ್ತಾತ್ರೇಯ ಕುಲಕರ್ಣಿ ಇಂಗಳೇಶ್ವರ ಅವರು ಹೇಳಿದರು.
ತಾಲೂಕಿನ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಹುಣ್ಣಿಮೆಯ ಆನ್ಲೈನ್ ಸಂಗಮ (ಸರಣಿ -58) ದಲ್ಲಿ ಅವರು ಮಾತನಾಡಿದರು.
ಇಂಗಳೇಶ್ವರ ಈ ಹಿಂದೆ ಪ್ರಖ್ಯಾತ ಅಗ್ರಹಾರವಾಗಿತ್ತು. ಬಸವಣ್ಣನವರು ಇಂಗಳೇಶ್ವರದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಲಿಂಗಾಯತ ಧರ್ಮ ಹುಟ್ಟು ಹಾಕಿದರು. ವೈದಿಕ ಸಂಪ್ರದಾಯದಂತೆ ಬಸವಣ್ಣನವರಿಗೆ ಉಪನಯನ ಕಾರ್ಯಕ್ರಮ ನೆರವೇರಿತ್ತು. ಆದರೆ ಕೆಲವರು ಉಪನಯನವೇ ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಉಪನಯನ ನೆರವೇರಿದ್ದನ್ನು ಅವರ ಜೀವನ ಮತ್ತು ವಚನ ಸಾಹಿತ್ಯದಿಂದ ಸ್ಪಷ್ಟಪಡಿಸಬಹುದು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದ್ದು ಸ್ವಾಗತಾರ್ಹವಾಗಿದೆ. ಜಾತಿ ವ್ಯವಸ್ಥೆಯಿಂದ ಕ್ರೋಧಗೊಂಡ ಬಸವಣ್ಣನವರು ಹರಿಜನರಿಗೂ ಇಷ್ಟಲಿಂಗ ನೀಡುವುದರ ಮೂಲಕ ಬಹು ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದರು. ಸಮಾಜದುದ್ಧಾರ ಬಯಸಿ ರಚಿತಗೊಂಡದ್ದೇ ವಚನ ಸಾಹಿತ್ಯವಾಗಿದೆ. ಅಹಂಭಾವವಿಲ್ಲದ ಸೋಹಂಭಾವವೇ ಬಸವಣ್ಣನವರ ನಡೆಯಾಗಿತ್ತು. ಸಾಮಾಜಿಕ ಸಮಾನತೆಗಾಗಿ ಅವರು ಮಾಡಿದ ಕ್ರಾಂತಿ ಅಸಾಮಾನ್ಯವಾದುದು. ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಸಾಂಸ್ಕೃತಿಕ ನಾಯಕನಿಗೆ ನೀಡುವ ದೊಡ್ಡ ಗೌರವವೆನಿಸುತ್ತದೆ ಎಂದರು. ನಂತರ, ಆನ್ಲೈನ್ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬಸವಣ್ಣನವರು ಪದವಿಗಳನ್ನು ತಿರಸ್ಕರಿಸಿದವರು. ಐಕ್ಯ ಸ್ಥಲದಿಂದ ಭಕ್ತ ಸ್ಥಲವನ್ನು ಅಪ್ಪಿಕೊಂಡವರು ಬಸವಣ್ಣನವರು ಎಂದು ನುಡಿದರು.
ಇದಕ್ಕೂ ಮೊದಲು ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಸಾಹು ಅಂಗಡಿ ಕನ್ನೆಳ್ಳಿ ಅವರು ಆಶಯ ನುಡಿಗಳನ್ನಾಡಿದರು.
ಆನ್ಲೈನ್ ಕಾರ್ಯಕ್ರಮದಲ್ಲಿ ಸಂಗಮದ ಕಾರ್ಯದರ್ಶಿ ಪ್ರಕಾಶ ಸಾಹು ಬೆಲ್ಲದ, ನಿಂಗನಗೌಡ ಪೊಲೀಸ್ ಪಾಟೀಲ, ಪ್ರಶಾಂತ ಕುನ್ನೂರ, ಸುಧೀಂದ್ರ ಕುಲಕರ್ಣಿ, ವಿಜಯೇಂದ್ರ ಕುಲಕರ್ಣಿ, ಗೀತಾ ಕುಲಕರ್ಣಿ, ಮಲ್ಲಿಕಾರ್ಜುನ ಮಾನಶೆಟ್ಟಿ, ಪ್ರಮೋದಕುಮಾರ ಮಳ್ಳಿ, ಡಾ. ಭಾಗ್ಯವತಿ ಕೆಂಭಾವಿ, ರಮೇಶ ಬಡಿಗೇರ, ಬಾಪೂಜಿ ಕುಲಕರ್ಣಿ, ಮಹಾದೇವಿ ಕೋರವಾರ, ಗೊಲ್ಲಾಳಪ್ಪ ಪತ್ತಾರ, ವೀರಭದ್ರ ಪತ್ತಾರ, ಶ್ರೀರಂಗ ಕುಲಕರ್ಣಿ, ಬಿ.ಬಿ.ವಾರದ, ಆರ್.ಜಿ. ಪುರಾಣಿಕ, ಬಸವರಾಜ ಬೋರಗಿ, ರಾಜಶ್ರೀ ಪಾಟೀಲ, ಮುತ್ತು ಕುಲಕರ್ಣಿ, ಸಿದ್ರಾಮಯ್ಯ ಮಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಡಾ. ಸಂತೋಷ ನವಲಗುಂದ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

