ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಬಹುಹಳ್ಳಿ ಕುಡಿಯುವ ನೀರು ಯೋಜನೆಯ ಮೂಲಕ ಆಲಮಟ್ಟಿ ಹಾಗೂ ನಾರಾಯಣಪೂರ ಜಲಾಶಯದ ಮೂಲಕ ಕಾಲುವೆಗಳಿಗೆ ನೀರನ್ನು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಲಾಗಿದ್ದು, ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಈ ನೀರನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ನಿರ್ವಹಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ನೀರು ಸರಬರಾಜು ಮಾಡುವ ವೇಳೆಯಲ್ಲಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ. ಜನರಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಿತವಾಗಿ ನೀರು ಬಳಸಲು ಗ್ರಾಮ ಮಟ್ಟದಲ್ಲಿ, ವಾರ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಿ ಎಂದು ಅವರು ಹೇಳಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಲಕಾಲಕ್ಕೆ ಕೆರೆಗೆ ಬೇಟಿ ನೀಡಿ ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಬರ ಪರಿಸ್ಥಿತಿ ಮತ್ತು ಲೋಕಸಭಾ ಸಾರ್ವತ್ರಿಕ ಚುನಾವಣೆ ಸಮಯವಾಗಿರುವುದರಿಂದ ಸಂಬಂಧಿಸಿದ ಗ್ರಾಮ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಯಾ ಪಿಡಿಓ ಮತ್ತು ಗ್ರಾಮ ಆಡಳಿತ ಅಧಿಕಾರಿ ಕಡ್ಡಾಯವಾಗಿ ಸ್ಥಾನಿಕವಾಗಿ ಇದ್ದು, ಯಾವುದೇ ಕಾರಣಕ್ಕೂ ಜನ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

