ಯಡ್ರಾಮಿ: ಇಂಡೋನೇಷಿಯಾ ಕೌನ್ಸಲೇಟ್ ಸಹಯೋಗದಲ್ಲಿ ವಿಶ್ವವಾಣಿ ದಿನಪತ್ರಿಕೆಯು ಪ್ರತಿ ವರ್ಷ ಕೊಡಮಾಡುವ ಅಂತಾರಾಷ್ಟ್ರೀಯ ಪ್ರತಿಷ್ಠಿತ “ಗ್ಲೋಬಲ್ ಅಚೀವರ್ಸ್ ಅವಾರ್ಡ್” ಪ್ರಶಸ್ತಿಗಾಗಿ ಸಾಹಿತಿ, ಸಂಶೋಧಕ, ಚಿತ್ರಕಲಾವಿದ ಡಿ.ಎನ್. ಅಕ್ಕಿ ಅವರನ್ನು ಆಯ್ಕೆ ಮಾಡಿದೆ.
ವಿವಿಧ ಕ್ಷೇತ್ರಗಳಲ್ಲಿಯ ಅಪೂರ್ವ ಸಾಧಕರನ್ನು ಗುರುತಿಸಿರುವ ಈ ಸಂಸ್ಥೆಗಳು ಇಂಡೋನೇಷಿಯಾದ “ಬಾಲಿ”ಯಲ್ಲಿ ಮಾ. 30ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿವೆ. ಆ ದೇಶದ ಪ್ರತಿಷ್ಠಿತ ಗಣ್ಯರು ಪಾಲ್ಗೊಳ್ಳಲಿದ್ದು, ಭಾರತ- ಇಂಡೋನೇಷಿಯಾ ಕಲಾವಿದರಿಂದ ಕಲಾ ಪ್ರದರ್ಶವೂ ಆಯೋಜಿಸಲಾಗಿದೆ.
ಡಿ.ಎನ್. ಅಕ್ಕಿ ಅವರು ಚಿತ್ರಕಲೆಯ ನಿವೃತ್ತ ಶಿಕ್ಷಕರು. ಮೂಲತಃ ಯಾದಗಿರಿನ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಸಗರನಾಡಿನ ಶಾಸನಗಳ ಸಂಶೋಧನೆ, ವ್ಯಕ್ತಿಚಿತ್ರಗಳು, ಜೈನ ಸಾಹಿತ್ಯ, ಜಾನಪದೀಯ ಸಾಹಿತ್ಯ, ರೇಡಿಯೋ ನಾಟಕಗಳು-ಚಿಂತನೆಗಳು ಹೀಗೆ ವಿವಿಧ ವಲಯಗಳಲ್ಲಿ 19ಕ್ಕೂ ಹೆಚ್ಚು ಕೃತಿಗಳನ್ನು ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಸೇರಿದಂತೆ 36ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶ್ರೀ ಕ್ಷೇತ್ರ ಶ್ರವಣ ಬೆಳಗೊಳದ ಜೈನ ಅಧ್ಯಯನ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇರಿದಂತೆ ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ತಮ್ಮ ತಾಯಿ ಶ್ರೀಕಾಂತಮ್ಮ ಅಕ್ಕಿ ಅವರಿಂದ ಜಾನಪದ ಹಾಡುಗಳನ್ನು ಹಾಡಿಸಿ, ಅವುಗಳ ಧ್ವನಿಮುದ್ರಣವೂ ಮಾಡಿ, ಪ್ರಕಟಿಸಿದ ಇವರ “ಹಡದವ್ವ ಹಾಡ್ಯಾಳ” ಕೃತಿಯು ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರಕ್ಕೊಂದು ವಿಶೇಷ ಕೊಡುಗೆ ಎನಿಸಿದೆ. ಡಿ.ಎನ್. ಅಕ್ಕಿ ಅವರು ಮಾ. 28ರಂದು ಸಂಜೆ ಬೆಂಗಳೂರಿನಿಂದ ಇಂಡೋನೇಷಿಯಾಗೆ ತೆರಳಲಿದ್ದಾರೆ.
ಹರ್ಷ: ಸಾಹಿತಿ, ಸಂಶೋಧಕ ಅಕ್ಕಿಯವರು ಮಳ್ಳಿ ಗ್ರಾಮದ ಮೊಮ್ಮಗ, ಅಳಿಯನಾಗಿ ತಮ್ಮ ಬಾಲ್ಯದ ದಿನಗಳನ್ನು ಅತಿ ಹೆಚ್ಚು ಮಳ್ಳಿಯಲ್ಲಿ ಕಳೆದಿದ್ದಾರೆ. ಗ್ರಾಮದಲ್ಲಿ ದೊಡ್ಡ ಗೆಳೆಯರ ಬಳಗವೇ ಇದೆ. ಅಕ್ಕಿಯವರ ಬಾಲ್ಯದ ಸ್ನೇಹಿತರಾದ ಶರಣಗೌಡ ಪೊಲೀಸ್ ಪಾಟೀಲ, ಗೊಲ್ಲಾಳಪ್ಪಗೌಡ ಪೊಲೀಸ್ ಪಾಟೀಲ, ಸಂಗಣ್ಣ ಪತ್ತಾರ, ಹಾಗೂ ಯಡ್ರಾಮಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಕಾರ್ಯದರ್ಶಿ ಪ್ರಕಾಶ ಸಾಹು ಬೆಲ್ಲದ, ಯುವ ಸಾಹಿತಿ ಡಾ. ಸಂತೋಷ ನವಲಗುಂದ, ಪ್ರಶಾಂತ ಕುನ್ನೂರ, ಆರ್.ಜಿ. ಪುರಾಣಿಕ, ಬಿ.ಬಿ. ವಾರದ, ಪ್ರಹ್ಲಾದ ಪತ್ತಾರ, ಪತ್ರಕರ್ತ ಮಲ್ಲಿಕಾರ್ಜುನ ಯಾದಗಿರಿ, ಇತರರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

