ಸಿಂದಗಿ ಮತಕ್ಷೇತ್ರದಲ್ಲಿ ಒಟ್ಟು ೨,೪೦,೪೪೪, ಮತದಾರರು | ಸ.ಚುನಾವಣಾಧಿಕಾರಿ ವಿನಯ ಪಾಟೀಲ ಮಾಹಿತಿ
ಸಿಂದಗಿ: ೧,೨೩,೩೧೩ ಪುರುಷ ಮತದಾರರು, ೧,೧೭,೧೦೦ ಮಹಿಳಾ ಮತದಾರರು, ೧೩೮೧ ವಯಸ್ಕರು ಹಾಗೂ ೨೯ ತೃತೀಯ ಲಿಂಗಿಗಳನ್ನೊಳಗೊಂಡಂತೆ ಒಟ್ಟು ಅಂದಾಜು ೨,೪೦,೪೪೪, ಮತದಾರರು ಇದ್ದಾರೆ ಎಂದು ಸಹಾಯಕ ಚುನಾವಣಾ ಅಧಿಕಾರಿ ವಿನಯ್ ಪಾಟೀಲ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಪ್ರಿಲ್ ೧೨ರಿಂದ೧೯ರ ವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಏ.೨೦ರಂದು ನಾಮಪತ್ರಗಳ ಪರಿಶೀಲನೆ, ಏ.೨೨ರಂದು ನಾಮಪತ್ರಗಳ ಹಿಂಪಡೆಯುವಿಕೆ ನಡೆಯಲಿದ್ದು, ಮೇ.೭ರಂದು ಅಭ್ಯರ್ಥಿಗಳ ಭವಿಷ್ಯವು ಮತದಾನ ಪೆಟ್ಟಿಗೆಯಲ್ಲಿ ಭದ್ರವಾಗಲಿದ್ದು, ಅಭ್ಯರ್ಥಿಗಳ ಭವಿಷ್ಯ ಜೂ.೪ ರಂದು ನಿರ್ಧಾರವಾಗಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಹೇಳಿದರು.
ಅಂಗವಿಕಲರಿಗಾಗಿ ವಿಶೇಷ ವೀಲ್ ಚೇರ್‌ಗಳ ವ್ಯವಸ್ಥೆ ಕೂಡಾ ಮಾಡಲಾಗುವುದು. ಮತದಾನ ಕೇಂದ್ರಗಳಿಗೆ ಸರಾಗವಾಗಿ ಹೋಗಲು ರ‍್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸಮರ್ಪಕ ವಿದ್ಯುತ್ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಹಾಗೆಯೇ ಪ್ರತ್ಯೇಕವಾಗಿ ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ಕೂಡ ವ್ಯವಸ್ಥೆ ಮಾಡಲಾಗುವುದು.
ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಗಟ್ಟಲು ವಿಶೇಷವಾಗಿ ಮೂರು ನಿಗಾ ತಂಡಗಳನ್ನು ರಚಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಿದೆ.
ಮತಕ್ಷೇತ್ರದಲ್ಲಿ ಗೋಲಗೇರಿ, ಮೋರಟಗಿ ಹಾಗೂ ದೇವಣಗಾವಗಳಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲಾ ದ್ವೀಚಕ್ರ ಹಾಗೂ ಬಹುಚಕ್ರ ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ದಾಖಲೆಯಿಲ್ಲದೇ ರೂ.೫೦ ಸಾವಿರಕ್ಕಿಂತ ಅಧಿಕ ಮೌಲ್ಯದ ಹಣವನ್ನು ಜಪ್ತು ಮಾಡಿಕೊಳ್ಳಲಾಗುವುದು. ಮತದಾನ ಸಮಯದಲ್ಲಿ ವಿಡಿಯೋ ವೀಕ್ಷಣಾ ದಳಗಳನ್ನು ರಚಿಸಲಾಗಿದ್ದು, ಇವು ಮತದಾನ ಕೇಂದ್ರ ಹಾಗೂ ಸುತ್ತಮುತ್ತಲಿನ ಪರಿಸರದ ಮೇಲೆ ಹದ್ದಿನ ಕಣ್ಣಿಡಲಿವೆ.
೮೫ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು, ಅನಾರೋಗ್ಯ ಪೀಡಿತರು ಪೋಲಿಂಗ್ ಬೂತ್‌ವರೆಗೂ ಬಂದು ಮತದಾನ ಮಾಡಲು ಆಗದೇ ಇರುವಂತಹವರಿಗೆ ಮನೆಗೆ ಹೋಗಿ ಮತವನ್ನು ಪಡೆದುಕೊಂಡು ಬರುವ ವ್ಯವಸ್ಥೆ ಮಾಡಲಾಗುವುದು. ಇದುವರೆಗೂ ೪೨೦೫ ಇಂತಹ ಮತದಾರರನ್ನು ಗುರುತಿಸಲಾಗಿದ್ದು, ಅದರಲ್ಲಿ ೨೭೭೭ ವಿಕಲಚೇತನರು, ೧೩೮೧ ವಿಕಲಚೇತನ ಮತದಾರರು ಇದ್ದು, ಇದೇ ರೀತಿ ಇನ್ನೂ ಹೆಚ್ಚಿನ ಮತದಾರರು ಇದ್ದರೆ ಏ.೧೭ರ ಒಳಗಾಗಿ ತಿಳಿಸಬೇಕೆಂದು ಅವರು ವಿನಂತಿಸಿಕೊಂಡರು.
ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಣೆ ಮಾಡಲು ನಿರ್ಧರಿಸಿದ್ದರ ಬಗ್ಗೆ ಪತ್ರಕರ್ತರ ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಪ್ರದೀಪಕುಮಾರ್ ಹಿರೇಮಠ, ಚುನಾವಣೆ ಮುಗಿಯುವವರೆಗೂ ನೀತಿ ಸಂಹಿತೆ ಜಾರಿಯಿರುವುದರಿಂದ ಸರಕಾರ ಯಾವುದೇ ರೀತಿಯ ನಿರ್ಧಾರವನ್ನು ಈಗ ಕೈಗೊಳ್ಳಲಾಗುವುದಿಲ್ಲ. ತಾಲೂಕು ಆಡಳಿತ ಹಾಗೂ ಶಾಸಕರ ಮಟ್ಟದಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯಿಂದ ಸೂಕ್ತ ಮಾಹಿತಿಗಳನ್ನು ಸಲ್ಲಿಸಲಾಗಿದ್ದು, ಚುನಾವಣೆ ಮುಗಿಯುವವರೆಗೂ ಗ್ರಾಮಸ್ಥರು ಕಾಯ್ದು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

