ನಲ್ಲಿಗಳಿಂದ ಪೋಲಾಗುತ್ತಿರುವ ನೀರು | ಕಂಡು ಕಾಣದಂತಿರುವ ಅಧಿಕಾರಿಗಳು | ಸಾರ್ವಜನಿಕರ ಆಕ್ರೋಶ
*– ರಶ್ಮಿ ನೂಲಾನವರ*
ಸಿಂದಗಿ: ರಾಜ್ಯದಲ್ಲಿ ಈಗಾಗಲೇ ಬರಗಾಲದ ಛಾಯೆ ಆವರಿಸಿದೆ. ಹಲವು ಕಡೆಗಳಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಆದರೆ ಸಿಂದಗಿ ಪಟ್ಟಣದ ಪುರಸಭೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ನಳ ಬಿಟ್ಟಾಗೊಮ್ಮೆ ನೀರು ಚರಂಡಿ ಮತ್ತು ರಸ್ತೆಯ ಪಾಲಾಗುತ್ತಿದೆ. ಹೌದು. ಪಟ್ಟಣದ ಬಂದಾಳ ರಸ್ತೆಯಲ್ಲಿ ಫೈಪ್‌ಗಳು ಒಡೆದು ಹೋಗಿದ್ದರೂ ಪುರಸಭೆ ಇದುವರೆಗೆ ದುರಸ್ತಿ ಮಾಡುವ ಕೆಲಸ ಮಾಡಿಲ್ಲ. ಇದರಿಂದ ನೀರು ರಸ್ತೆಯಲ್ಲಿ ಪೋಲಾಗುತ್ತಿದೆ.
ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಉಢಾಪೆ ಉತ್ತರ ನೀಡುತ್ತಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಇದು ಕೇವಲ ಬಂದಾಳ ರಸ್ತೆಯ ಕಥೆಯಷ್ಟೇ ಅಲ್ಲ. ಪಟ್ಟಣದ ಹಲವು ಓಣಿಗಳಲ್ಲಿ ಇದೇ ದುಸ್ಥಿತಿಯಿದೆ. ಈ ಬಗ್ಗೆ ಪುರಸಭೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳುವುದಿರಲಿ ಚರ್ಚೆ ಕೂಡ ಮಾಡುತ್ತಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಈ ವರ್ಷ ವರುಣನ ಕಠೋರತನ ನೋಡಿದರೆ ಬೇಸಿಗೆಯನ್ನು ಹೇಗೆ ಎದುರಿಸುವುದು ಎಂಬ ಚಿಂತೆ ಜನರಲ್ಲಿ ಪ್ರಾರಂಭವಾಗಿದೆ. ಪುರಸಭೆ ಈಗಿನಿಂದಲೇ ನೀರಿನ ಬಗ್ಗೆ ಅಗತ್ಯ ಕ್ರಮ ಕೈಗೊಂಡರೆ ಒಳಿತು ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
ಪುರಸಭೆ ಅಧಿಕಾರಿಗಳು ಈಗಲೇ ನೀರಿನ ಮಿತ ಬಳಕೆಗೆ ಮುಂದಾಗಬೇಕು. ಒಂದು ವೇಳೆ ಇದೇ ರೀತಿ ನೀರು ರಸ್ತೆಯ ಮೇಲೆ ಅಥವಾ ಚರಂಡಿ ತುಂಬಿ ಹರಿಯುತ್ತಿದ್ದರೆ ಖಾಲಿ ಕೊಡದೊಂದಿಗೆ ಪುರಸಭೆ ಎದುರು ಧರಣಿ ಕುಳಿತುಕೊಳ್ಳುವ ಸ್ಥಿತಿ ಎದುರಾಗಬಹುದು.
*ಮೊಬೈಲ್ ಕರೆ ಸ್ವೀಕಾರ ಇಲ್ಲ:* ನೀರಿನ ಪೈಪು ಒಡೆದಿರುವ ಮತ್ತು ಇತರೆ ಸಮಸ್ಯೆಗಳ ಕುರಿತು ದೂರು ನೀಡಲು ಸಾರ್ವಜನಿಕರು ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವೀಕಾರ ಮಾಡುವುದಿಲ್ಲ ಎಂಬುದು ದೂರುಗಳು ಕೇಳಿ ಬಂದಿವೆ.
*ನೀರಿನ ಪೈಪ್‌ಲೈನ್ ಸೋರಿಕೆ:*
ನೀರಿನ ಪೈಪ್‌ಗಳು ಸೋರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗಿ ಜನರ ಸಂಕಷ್ಟವನ್ನು ಹೆಚ್ಚಿಸಿದೆ. ಅಮೂಲ್ಯವಾದ ನೀರು ವ್ಯರ್ಥವಾಗುತ್ತಿದ್ದರೂ ಪುರಸಭೆ ಗಮನಹರಿಸದೇ ಸೋರಿಕೆಯನ್ನು ಸರಿಪಡಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
*ಅಧಿಕಾರಿಗಳ ನಿರ್ಲಕ್ಷ್ಯ ಹೊಸದಲ್ಲ:*
ಹಲವಾರು ಸಂದರ್ಭಗಳಲ್ಲಿ ಹಲವು ಕಡೆಗಳಲ್ಲಿ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಒಳಚರಂಡಿ ಕಾಮಗಾರಿ ನಡೆಸುತ್ತಿದ್ದಾಗ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿವೆ. ಇಂತಹ ನಿರ್ಲಕ್ಷ್ಯದ ಹೊರತಾಗಿಯೂ, ಪುರಸಭೆ ಅಧಿಕಾರಿಗಳು ಎಂದಿಗೂ ಪಾಠ ಕಲಿಯುವುದಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
*ಬೇಕಾಬಿಟ್ಟಿ ನೀರು ಸರಬರಾಜು:* ನಿಗದಿತ ಸಮಯಕ್ಕೆ ನೀರು ಪೂರೈಕೆ ಪ್ರಾರಂಭಿಸುವ ಪುರಸಭೆ ಸಿಬ್ಬಂದಿ ನಿಗದಿತ ಸಮಯಕ್ಕೆ ಬಂದ್ ಮಾಡುವುದನ್ನು ಮರೆಯುತ್ತಾರೆ. ಹೀಗಾಗಿ ನೀರು ರಸ್ತೆಯ ಮೇಲೆ ಅಥವಾ ಚರಂಡಿಯಲ್ಲಿ ಹರಿದು ಪೋಲಾಗುತ್ತಿದೆ. ಕೆಲವೊಮ್ಮೆ ನಿಗದಿತ ಸಮಯಕ್ಕಿಂತ ಬೇಗ ಬಂದ್ ಮಾಡಿ ಮತ್ತೊಂದು ಭಾಗಕ್ಕೆ ಪೂರೈಕೆ ಮಾಡುತ್ತಾರೆ. ಇದು ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗಿದೆ.

