ವಿಜಯಪುರ: ಮಾ.೨೮ ರಿಂದ ೩೦ ರವರೆಗೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ನಗರದ ಕಲಾವಿದ ರಮೇಶ ಚವ್ಹಾಣ ಮತ್ತು ಛಾಯಾಗ್ರಾಹಕ ಸತೀಶ ಕಲಾಲ ಅವರ ಚಿತ್ರಕಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆ ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೧೧.೩೦ ಗಂಟೆಗೆ ಈ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮಕ್ಕೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ ಎಂ ಚಿಕ್ಕಪಾಟೀಲ ಇವರು ಅಧ್ಯಕ್ಷರಾಗಿಯೂ, ನಗರದ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಬಿ.ಎನ್.ಮಲ್ಲೇಶ್ರವರು ಉದ್ಘಾಟಕರಾಗಿಯೂ, ಬಾಲಾಜಿ ಪ್ರೇಮಿಂಗ್ ಬೆಂಗಳೂರು ಇದರ ಮುಖ್ಯಸ್ಥರಾದ ಡಾ. ಪ್ರಶಾಂತ ಹೆಗಡೆಯವರು ಮುಖ್ಯ ಅತಿಥಿಯಾಗಿಯೂ ಪಾಲ್ಗೊಳ್ಳಲಿದ್ದು, ಕಲಾ ವಿಮರ್ಶಕ ದತ್ತಾತ್ರೇಯ ಎನ್ ಭಟ್ ಇವರು ಕಲಾ ಪ್ರದರ್ಶನ ಕುರಿತು ಆಶಯ ನುಡಿಗಳನ್ನಾಡಲಿದ್ದಾರೆ. ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶಕುಮಾರ್ ಪಿ ವಲ್ಲೇಪುರೆಯವರು ಗೌರವ ಉಪಸ್ಥಿತರಿರುವರು. ಈ ಕಲಾ ಪ್ರದರ್ಶನದಲ್ಲಿ ಚಿತ್ರಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಸೇರಿ ಒಟ್ಟು ಸುಮಾರು ೫೦ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.
ಕ್ಯಾನವಾಸಿನ ಮೇಲೆ ಆಕ್ರಿಲಿಕ್ ಬಣ್ಣ ಬಳಸಿ ಅಭಿವ್ಯಕ್ತಿಸಿದ ಚಿತ್ರಗಳು:
ರಮೇಶ ಚವ್ಹಾಣರು ತಮ್ಮ ಮನಸ್ಸಿನ ಭಾವನೆಗಳನ್ನೇ ಮನೋವಲಯದ ಬೇರೆ ಬೇರೆ ಭಾವತರಂಗಗಳನ್ನೇ ಅಮೂರ್ತ ಆಯಾಮದಲ್ಲಿ ತೋರ್ಪಡಿಸಿದ್ದಾರೆ. ಇವರು ತುಮಕೂರಿನ ರವೀಂದ್ರ ಕಲಾನಿಕೇತತನದಲ್ಲಿ ಜಿ.ಡಿ ಆರ್ಟ್ ಅಭ್ಯಸಿಸಿದ್ದಾರೆ. ಅಲ್ಲದೇ ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಸದಸ್ಯರೂ ಕೂಡಾ ಆಗಿದ್ದಾರೆ. ಹೈದ್ರಾಬಾದ್, ಗೋವಾ, ಬೆಂಗಳೂರು, ವಿಜಯಪುರ, ಕೇರಳ ಮೊದಲಾದ ಕಡೆಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕಲಾವಿಮರ್ಶಕರ ಮೆಚ್ಚುಗೆ ಗಳಿಸಿವೆ. ಹಲವಾರು ರಾಜ್ಯ ಮಟ್ಟದ ಪ್ರಶಸ್ತಿ ವಿಜೆತರಾದ ಇವರು ರಾಜ್ಯ, ರಾಷ್ಟ್ರೀಯ ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
ಸತೀಶ ಕಲಾಲ ರವರು ವಿಜಯಪುರ ಜಿಲ್ಲೆಯಲ್ಲಿ ಯುವ ಛಾಯಾಗ್ರಾಹಕರಾಗಿ ಗುರುತಿಸಿಕೊಂಡವರು ‘ಚಾಲುಕ್ಯ ಉತ್ಸವ- ೨೦೨೪ ರ ನಿಮಿತ್ತ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ೩ನೇ ಬಹುಮಾನ, ೨೦೧೬ ರಲ್ಲಿ ಎನ್.ಪಿ.ಎಸ್ ಡಿಜಿಟಲ್ ಸಲನ್ ಸಾಗರ ಇವರು ಏರ್ಪಡಿಸಿದ್ದ ೨ನೇ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಇವರ ಛಾಯಾಚಿತ್ರ ಆಯ್ಕೆಯಾಗಿದೆ. ಆಂಧ್ರಪ್ರದೇಶದಲ್ಲಿ ೨೦೧೭ ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಇವರ ಛಾಯಾಚಿತ್ರಕ್ಕೆ ಬಹುಮಾನ ಲಭಿಸಿದೆ. ಕೀನ್ಯಾ ದೇಶದಲ್ಲಿ ನಡೆದ ಛಾಯಾಗ್ರಹಣ ಶಿಬಿರ, ಆಸ್ಸಾಂದ ಕಾಜಿರಂಗಾದಲ್ಲಿನ ಶಿಬಿರ, ಹೆಗ್ಗೋಡಿನ ಛಾಯಾಗ್ರಹಣ ಶಿಬಿರ ಮೊದಲಾದ ಮಹತ್ವ ಪೂರ್ಣ ಛಾಯಾಗ್ರಹಣ ಶಿಬಿರಗಳಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಪ್ರದರ್ಶನದಲ್ಲಿ ಇವರು ಕ್ಲಿಕ್ಕಿಸಿದ ವನ್ಯಜೀವಿಗಳು, ಹಳ್ಳಿಯ ಪರಿಸರ, ಕಂಬಳದಂತಹ ಆಚರಣೆ ಮೊದಲಾದ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.
Subscribe to Updates
Get the latest creative news from FooBar about art, design and business.
Related Posts
Add A Comment

