ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ಅಖಂಡ ತಾಲೂಕಿನಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಗಳು ಸೋಮವಾರ ಆರಂಭವಾದವು. ಅಖಂಡ ತಾಲೂಕಿನಲ್ಲಿ ಒಟ್ಟು ೧೮ ಪರೀಕ್ಷಾ ಕೇಂದ್ರಗಳಿದ್ದು. ಒಟ್ಟು ೫,೫೨೩ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಇಂದು ೧೧೦ ವಿದ್ಯಾರ್ಥಿಗಳು ಗೈರು ಉಳಿಯುವ ಮೂಲಕ ಒಟ್ಟು ೫,೪೧೩ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆದರು.
ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ೪೭೦ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ೧೮ ಪರೀಕ್ಷಾ ಕೇಂದ್ರಗಳಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಪರೀಕ್ಷಾ ಕೇಂದ್ರವಾಗಿದೆ. ಹುಣಶ್ಯಾಳ ಪಿಬಿ ಗ್ರಾಮದ ಹತ್ತಿರುವಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೧೭೭ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ಅತಿ ಕಡಿಮೆ ಇರುವ ಪರೀಕ್ಷಾ ಕೇಂದ್ರವಾಗಿದೆ.
ಪಟ್ಟಣದ ಬಾಲಕಿಯರು ಸರ್ಕಾರಿ ಪ್ರೌಢಶಾಲೆಯ ಸುತ್ತಮುತ್ತ ನಕಲು ಕೊಡಲು ಜನರು ಓಡಾಡುವ ದೃಶ್ಯಕಂಡುಬಂದಿತ್ತು. ಒಂದೆಡೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಕಲು ಮುಕ್ತ, ಪಾರದರ್ಶಕವಾಗಿ ನಡೆಯುವಂತೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡರೂ ಇದು ಸೋಮವಾರ ಕಂಡುಬಂದಿತ್ತು. ಅಧಿಕಾರಿಗಳು ಇದರ ಕಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ. ಪರೀಕ್ಷೆ ಮುಕ್ತಾಯವಾದ ಬಳಿಕ ಕೆಲ ಪಾಲಕರು ಜಮಾಯಿಸಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಕೋಣೆಯ ಮೇಲ್ವಿಚಾರಕರು ಪರೀಕ್ಷೆ ಬರೆಯಲು ತೊಂದರೆ ಕೊಟ್ಟಿದ್ದಾರೆ ಎಂದು ಮಾತನಾಡುವುದು ಕಂಡುಬಂದಿತ್ತು. ಮಹಾನಂದ ಭೂತನಾಳ ಎಂಬ ಪಾಲಕರು ನನ್ನ ಮಗಳು ಪರೀಕ್ಷೆ ಬರೆಯುವಾಗ ಹೊರಗಡೆಯಿಂದ ಕಾಫಿ ಬಂದು ಹತ್ತಿರ ಬಿದ್ದಿರುವುದರಿಂದಾಗಿ ಅವಳು ಭಯ ಪಟ್ಟಿದ್ದಾಳೆ. ಅವಳು ಸರಿಯಾಗಿ ಅಭ್ಯಾಸ ಮಾಡಿ ಪರೀಕ್ಷೆಗೆ ಚೆನ್ನಾಗಿ ತಯಾರಿ ಮಾಡಿಕೊಂಡಿದ್ದಾಳೆ. ಇಂತಹ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ಪರೀಕ್ಷೆ ಬರೆಯುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಪಾಲಕರಾದ ದಿನೇಶ ಗಾಯಕವಾಡ, ಸಾವಿತ್ರಿ ಗಾಯಕವಾಡ ಸಹ ಈ ಪರೀಕ್ಷಾ ಕೇಂದ್ರದಲ್ಲಿ ಕೆಲ ಕೋಣೆಯ ಮೇಲ್ವಿಚಾರಕರು ವಿದ್ಯಾರ್ಥಿಗಳು ಭಯದಲ್ಲಿ ಪರೀಕ್ಷೆ ಬರೆಯುವಂತೆ ನಡೆದುಕೊಂಡಿದ್ದಾರೆ ಎಂದು ದೂರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅಖಂಡ ತಾಲೂಕಿನಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆ ಬಹು ವ್ಯವಸ್ಥಿತವಾಗಿ, ಯಾವುದೇ ನಕಲು ನಡೆಯದೇ ಯಾವುದೇ ಅಹಿತಕರ ಘಟನೆಗಳು ನಡೆಯದೇ ವ್ಯವಸ್ಥಿತವಾಗಿ ಪರೀಕ್ಷೆ ನಡೆಯಿತು. ೧೧೦ ವಿದ್ಯಾರ್ಥಿಗಳು ಗೈರು ಉಳಿದುಕೊಂಡಿದ್ದಾರೆ. ೧೮ ಪರೀಕ್ಷಾ ಕೇಂದ್ರದಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿ ಕ್ಯಾಮರಾ ವ್ಯವಸ್ಥೆಯಿಂದ ನಮ್ಮ ಕಚೇರಿಯಲ್ಲಿಯೇ ಕುಳಿತುಕೊಂಡು ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಚಟುವಟಿಕೆಯನ್ನು ಒಂದು ತಂಡ ನಿರಂತರವಾಗಿ ವೀಕ್ಷಿಸುತ್ತದೆ. ಇದು ನಮ್ಮ ಆಯುಕ್ತ ಕಚೇರಿಯ ಅಧಿಕಾರಿಗಳು ನೋಡಬಹುದು. ಇಂದು ಒಂದು ಪರೀಕ್ಷಾ ಕೇಂದ್ರವನ್ನು ಆಯುಕ್ತರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ನಕಲು ನಡೆಯಲು ಸಾಧ್ಯವೇ ಇಲ್ಲ. ನಕಲು ನಡೆಯದಂತೆ ಸೂಕ್ತ ಕ್ರಮ ವಹಿಸಲಾಗಿದೆ. ಪಾಲಕರು ಇದಕ್ಕೆ ಸಹಕಾರ ಕೊಡಬೇಕು. ಬಿರುಬಿಸಿಲು ಇರುವದರಿಂದಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೆಲ ಅಗತ್ಯ ಔಷಧೋಪಚಾರದೊಂದಿಗೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಕೆಲ ಸಿಬ್ಬಂದಿ ಇದ್ದಾರೆ. ಎಲ್ಲ ವಿದ್ಯಾರ್ಥಿಗಳು ಇಂದು ಚೆನ್ನಾಗಿ ಪರೀಕ್ಷೆ ಬರೆದಿದ್ದಾರೆ. ಬಸವನಬಾಗೇವಾಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಕೆಲ ಪಾಲಕರು ತಮ್ಮ ಮಕ್ಕಳಿಗೆ ಕಾಫಿ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು. ಇದು ಸರಿಯಲ್ಲ ಎಂದು ಪಾಲಕರಿಗೆ ತಿಳುವಳಿಕೆ ಹೇಳಲಾಯಿತು. ನಮ್ಮ ಅಖಂಡ ತಾಲೂಕಿನಲ್ಲಿ ನಕಲು ಮುಕ್ತ ಪರೀಕ್ಷೆ ನಡೆದಿದೆ. ಯಾವುದೇ ಪರೀಕ್ಷಾ ಕೇಂದ್ರ ಬಗ್ಗೆ ಏನಾದರೂ ಸಮಸ್ಯೆ ನಮ್ಮ ಗಮನಕ್ಕೆ ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

