ತಿಕೋಟಾ: ಪಟ್ಟಣದ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸೋಮವಾರ ಯುವಕ, ಯುವತಿಯರು ಹಾಗೂ ಚಿಣ್ಣರು ಬೆಳಗ್ಗೆಯಿಂದಲೇ ಹೋಳಿ ನಿಮಿತ್ಯ ಬಣ್ಣ ಎರಚಾಡುವ ಮೂಲಕ ಸಂಭ್ರಮಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ತಮ್ಮ ಪ್ರೀತಿ ಪಾತ್ರದವರ ಮನೆ ಮುಂದೆ ಗೆಳೆಯರೊಂದಿಗೆ ಸಾಗಿ ಹಲಗೆ ಬಡಿಯುತ್ತಾ ನೃತ್ಯ ಮಾಡುವ ಮೂಲಕ ಬಣ್ಣ ಹಚ್ಚಿದರು. ಯುವಕರು ತಂಡೋಪತಂಡವಾಗಿ ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೂ ತೆರಳಿ ದ್ರಾಕ್ಷಿ ಪಡ ಹಾಗೂ ಒಣದ್ರಾಕ್ಷಿ ಸೆಡ್ ನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೂ ಸಹ ಬಣ್ಣ ಲೇಪಿಸಿ ಖುಷಿಪಟ್ಟರು.
ತಾಂಡಾ ಮಹಿಳೆಯರ ಸಂಭ್ರಮ: ತಾಲ್ಲೂಕಿನ ಎಲ್ಲ ಲಂಬಾಣಿ ತಾಂಡಾ ಮಹಿಳೆಯರಿಗೆ ಈ ಹಬ್ಬ ಖುಷಿಯೋ ಖುಷಿ. ಏಕೆಂದರೆ ಬೆಳಗ್ಗೆಯಿಂದಲೇ ಮಹಿಳೆಯರು ಬಕೇಟ್ ಗಳಲ್ಲಿ ಬಣ್ಣ , ನೀರು ತುಂಬಿಕೊಂಡು ಬಣ್ಣ ಎರಚಾಡಿ ಲಂಬಾಣಿ ಹಾಡುಗಳನ್ನು ಹಾಡುತ್ತಾ ವಿಭಿನ್ನ ನೃತ್ಯ ಮಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ದಂಡು ಸಾಗಿತು.
ನಾಮಕರಣ ಕಾರ್ಯ: ಸಂಜೆಯವರೆಗೂ ತಾಂಡಾದಲ್ಲಿ ಬಣ್ಣದ ಹಬ್ಬ ಆಚರಿಸಿದ ಮಹಿಳೆಯರ ಗುಂಪು ಕಳೆದ ಹೋಳಿ ಹಬ್ಬದಿಂದ ಈ ವರ್ಷದ ಹೋಳಿವರೆಗೆ ಜನಿಸಿದ ಮಕ್ಕಳ ನಾಮಕರಣ ಕಾರ್ಯಕ್ರಮ ಮಾಡಿದರು. ಈಗಾಗಲೆ ಮಗುವಿಗೆ ಕುಟುಂಬದಲ್ಲಿ ನಾಮಕರಣ ಮಾಡಿರುತ್ತಾರೆ, ಈಗ ಒಂದು ವರ್ಷದಲ್ಲಿ ತಾಂಡದಲ್ಲಿ ಜನಿಸಿದ ಎಲ್ಲ ಮಕ್ಕಳಿಗೆ ಸಾಮೂಹಿಕವಾಗಿ ನಾಮಕರಣ ಮಾಡುವ ಪದ್ದತಿ ಇದೆ. ತಾಂಡಾದ ಎಲ್ಲ ನೀವಾಸಿಗಳ ಸಮ್ಮುಖದಲ್ಲಿ ಕಂದಮ್ಮಗಳ ನಾಮಕರಣ ಮಾಡಿ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿಸಲಾಗಿರುತ್ತದೆ ಎಂದು ಲೋಹಗಾಂವ ತಾಂಡಾ ನಿವಾಸಿ ಮಹಾಂತೇಶ ರಾಠೋಡ ಪತ್ರಿಕೆಗೆ ಮಾಹಿತಿ ನೀಡಿದರು.
ರಸ್ತೆಗಿಳಿದ ಚಿಣ್ಣರು: ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಿಣ್ಣರು ಕೈಯಲ್ಲಿ ಬಣ್ಣ ತುಂಬಿದ ಬಕೇಟ್, ಚಂಬು, ಬಾಟಲಿ, ಪಿಚಕಾರಿ ಹಿಡಿದುಕೊಂಡು ಹಲಗೆ ಬಾರಿಸುತ್ತಾ ರಸ್ತೆಗಿಳಿದಿದ್ದರು. ದಾರಿಯುದ್ದಕ್ಕೂ ಸಾಗುವ ಜನರಿಗೆ ಪಿಚಕಾರಿಯಿಂದ ಬಣ್ಣ ಸಿಡಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

