ಇಂಡಿ: ಜೋಡೆತ್ತುಗಳನ್ನು ಹೊಂದಿರುವ ಕಂಬಿ ಮಲ್ಲಯ್ಯನು ಗ್ರಾಮಗಳ ಜೋಡೆತ್ತುಗಳ ಭಾವೈಕ್ಯದ ಸಂಕೇತವಾಗಿದ್ದಾನೆ. ಗ್ರಾಮಗಳಲ್ಲಿ ಸದಾ ಜೋಡೆತ್ತಿನ ಕೃಷಿ ಉಳಿಯಬೇಕು ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ನಮ್ಮ ಹಿಂದಿನ ಆಧ್ಯಾತ್ಮಿಕ ಗುರುಗಳು ಕಂಬಿ ಮಲ್ಲಯ್ಯನ ಪೂಜೆಯ ಸಂಪ್ರದಾಯವನ್ನು ಜಾರಿಗೆ ತಂದಿದ್ದಾರೆ ಎಂದು ಅಭೀ ಪೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಅಭಿಪ್ರಾಯಪಟ್ಟರು.
ಅವರು ಭಾನುವಾರ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಜೋಡೆತ್ತಿನ ಕೃಷಿ ಮತ್ತು ಮಣ್ಣು ಉಳಿಸಲು ಮುಂದಾದ ರೈತ ಮಿತ್ರ ಸ್ವಯಂ ಸೇವಕರ ತಂಡವು ವಿಜಯಪೂರ ಜಿಲ್ಲೆಯ ೪೦ ಗ್ರಾಮಗಳಲ್ಲಿರುವ ಕಂಬಿ ಮಲ್ಲಯ್ಯನ ದರ್ಶನ ಮಾಡಿ, ಆ ಎಲ್ಲಾ ಗ್ರಾಮಗಳಲ್ಲಿ ರೈತ ಜಾಗೃತಿ ಮಾಡಿ, ಪ್ರತೀ ಗ್ರಾಮಗಳಲ್ಲಿ ಜೋಡೆತ್ತಿನ ಕೃಷಿಕರ ಸಂಖ್ಯೆ ಹೆಚ್ಚಾಗಲು ಸಂಕಲ್ಪ ಮಾಡುವ ಉದ್ದೇಶದಿಂದ ಭಾನುವಾರ ಸಾಲೋಟಗಿ ಗ್ರಾಮಕ್ಕೆ ಆಗಮಿಸಿ, ಅಲ್ಲಿ ಕಂಬಿ ಮಲ್ಲಯ್ಯನ ದರ್ಶನ ಪಡೆದುಕೊಂಡು ಮಾತನಾಡಿದರು.
ವರ್ಷಪೂರ್ತಿ ರೈತನಿಗೆ ಹೆಗಲು ನೀಡುವ ಜೋಡೆತ್ತುಗಳ ಭಾವೈಕ್ಯದ ಸಂಕೇತವಾದ ಎತ್ತುಗಳ ಮೂರ್ತಿಗಳನ್ನು ಹೊತ್ತಿರುವ ಕಂಬಿ ಮಲ್ಲಯ್ಯನಿಗೆ ರೈತ ಭಕ್ತರು ಹೆಗಲು ನೀಡಿ ಶ್ರೀಶೈಲ ಮಲ್ಲಯ್ಯನ ವರೆಗೆ ಕೊಂಡೊಯ್ಯುವ ಸಂಪ್ರದಾಯವಿದೆ. ಇದರಿಂದ ಶ್ರೀಶೈಲ ಮಲ್ಲಯ್ಯನು ಕಂಬಿಯ ಮೂಲಕ ಗ್ರಾಮಕ್ಕೆ ಆಗಮಿಸಿ ವರ್ಷಪೂರ್ತಿ ಮಾರ್ಗದರ್ಶನ ನೀಡುವನು ಎಂಬ ನಂಬಿಕೆಯಿದೆ. ಆದರೆ, ಇಂದು ಕಂಬಿ ಮಲ್ಲಯ್ಯನ ಪೂಜೆಯನ್ನು ಆಚರಣೆಗೆ ಮಾತ್ರ ಸೀಮಿತಗೊಳಿಸಿ, ಜೋಡೆತ್ತುಗಳ ಕೃಷಿ ಎಲ್ಲ ಗ್ರಾಮಗಳಲ್ಲಿ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದರಿಂದ ಬಯಲು ಸೀಮೆಯ ಮಣ್ಣಿನ ಫಲವತ್ತತೆ ನಾಶವಾಗಿ ಇಳುವರಿ ಕುಂಠಿತವಾಗುತ್ತಿದೆ. ಅದ್ದರಿಂದ ನಂದಿ ಕೃಷಿ ಪುನಶ್ಚೇತನಕ್ಕಾಗಿ ಹಲವು ಗ್ರಾಮಗಳಲ್ಲಿ ಕಂಬಿ ಮಲ್ಲಯ್ಯನ ದರ್ಶನ ಮಾಡಿ ಜೋಡೆತ್ತಿನ ಸಂಖ್ಯೆ ಹೆಚ್ಚಾಗಲು ಸಂಕಲ್ಪ ಮಾಡುವ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಜೊಡೆತ್ತುಗಳು ಬಯಲು ಸೀಮೆಯ ನಾಗರೀಕತೆಯ ನಿರ್ಮಾಣತೃಗಳು. ಎತ್ತುಗಳ ನಾಶದಿಂದ ನಮ್ಮ ನಾಗರೀಕತೆ ಅಳಿವಿನ ಅಂಚಿನಲ್ಲಿದೆ ಎಂದು ತಿಳಿಸಿದರು. ಜೋಡೆತ್ತಿನ ಕೃಷಿಕರಿಗೆ ಸಮಾಜದಲ್ಲಿ ಸೂಕ್ತ ಪ್ರೋತ್ಸಾಹ ದೊರೆತರೆ ಮಾತ್ರ ಎತ್ತುಗಳ ಸಂತತಿ ಉಳಿಯಲು ಸಾಧ್ಯವಿದೆ. ಅದಕ್ಕಾಗಿ ಶ್ರೀಶೈಲ ಮಲ್ಲಯ್ಯನ ಎಲ್ಲ ಭಕ್ತರು ಮಲ್ಲಯ್ಯನಿಗೆ ಪ್ರೀಯವಾದ ಜೋಡೆತ್ತಿನ ಕೃಷಿಯನ್ನು ಉಳಿಸಲು ಮುಂದಾಗಬೇಕು. ಅಂದಾಗ ಮಾತ್ರ ಶ್ರೀಶೈಲ ಮಲ್ಲಯ್ಯ ನಮಗೆ ಒಲಿಯಲು ಸಾಧ್ಯ ಎಂದು ತಿಳಿಸಿದರು.
ಸಾಲೋಟಗಿಯ ಶ್ರೀ ಶಿವಯೋಗೀಶ್ವರ ರೈತ ಮಿತ್ರ ಸ್ವಯಂಸೇವಕರ ಸಂಘದ ಸದಸ್ಯರಾದ ಪುಂಡಲೀಕ ಅಪ್ಪಣ್ಣ ಕನ್ನೂರ, ಸಹದೇವ ಪಾತರ, ರೈತ ಮಿತ್ರ ಸ್ವಯಂಸೇವಕರ ಸಂಘದ ಸಂಚಾಲಕರಾದ ಅಭಿಶೇಕ ಬಿರಾದರಾ, ರವಿಪ್ರಕಾಶ ಹಾಗೂ ಇತರರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
Subscribe to Updates
Get the latest creative news from FooBar about art, design and business.
Related Posts
Add A Comment

