– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ನಾಡಿನಲ್ಲಿ ಹೋಳಿ ಹಬ್ಬಕ್ಕೆ ಅದರದೇ ವಿಶೇಷ ಸ್ಥಾನವಿದೆ. ಪಟ್ಟಣದಲ್ಲಿ ಮಾ.೨೪ ರಂದು ಭಾನುವಾರ ಹೋಳಿ ಹುಣ್ಣಿಮೆ ಆಚರಿಸುತ್ತಿರುವುದರಿಂದ ಸಂಜೆ ಪಟ್ಟಣದ ವಿವಿಧೆಡೆಗಳಲ್ಲಿ ಸಂಜೆ ಕಾಮದಹನ ನಡೆಯಲಿದೆ.
ಕಾಮದಹನ ಮಾಡಲು ವಿವಿಧ ಗಲ್ಲಿಯವರು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಗತ್ಯ ತಯಾರಿಯಲ್ಲಿದ್ದಾರೆ. ನಾಳೆ ಸಂಜೆಯೊಳಗೆ ಕಾಮದಹನ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ ವಿವಿಧ ರಂಗೋಲಿಗಳನ್ನು ಹಾಕಿದ ನಂತರ ಕಟ್ಟಿಗೆಗಳನ್ನು ಒಟ್ಟಿ ನಡುವೆ ಔಡಲಗಿಡವನ್ನು ಇಟ್ಟು ಕಾಮದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಹಿಡಿದ ನಂತರ ಕಾಮದಹನ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಕಾಮದಹನ ಮಾಡಿದ ಮರುದಿನ ಎಲ್ಲೆಡೆ ಬಣ್ಣದಾಟವನ್ನು ಆಡುವುದು ರೂಢಿಯಲ್ಲಿದೆ. ಮಾ.೨೫ ರಂದು ಪಟ್ಟಣದಲ್ಲಿ ಬಣ್ಣದೋಕುಳಿ ನಡೆಯಲಿದೆ. ಕೆಲವೆಡೆ ಮಾ.26 ರಂದು ಬಣ್ಣದಾಟವಿದೆ ತಿಳಿದುಬಂದಿದೆ.
ಪಟ್ಟಣದಲ್ಲಿ ಶಿವರಾತ್ರಿ ಮುಗಿದ ನಂತರ ಹೋಳಿ ಹಬ್ಬದ ಹಲಗೆ ನಿನಾದ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಚಿಕ್ಕಮಕ್ಕಳು ಹಲಗೆ ಬಾರಿಸುತ್ತಾ ಸಂತಸ ಪಡುತ್ತಿದ್ದಾರೆ. ಈಗಾಗಲೇ ಪ್ರಾಥಮಿಕ ಹಂತದ ಮಕ್ಕಳ ಪರೀಕ್ಷೆಗಳು ಮುಗಿದ ಹಿನ್ನೆಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ಹಲಗೆ ಬಾರಿಸುವದರಲ್ಲಿ ನಿರತರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಕಾಮದಹನ ಮಾಡಲು ಬೇಕಾದ ಕಟ್ಟಿಗೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಮಕ್ಕಳು ತೊಡಗಿಕೊಂಡಿದ್ದಾರೆ. ಭಾನುವಾರ ಸಂಜೆ ಕಾಮದಹನ ನಡೆಯಲಿದೆ. ಮಾ. ೨೫ ರಂದು ಬಣ್ಣದಾಟ ಇರಲಿದೆ. ಐದು ದಿನಗಳ ನಂತರ ಮಾ.೨೯ ರಂಗಪಂಚಮಿ ದಿನದಂದು ಮತ್ತೆ ಬಣ್ಣದೋಕುಳಿ ನಡೆಯಲಿದೆ. ಬಣ್ಣದಾಟದಲ್ಲಿ ರಾಸಾಯನಿಕ ಬಣ್ಣ ಬಳಕೆ ಮಾಡದೇ ಪರಿಸರ ಸ್ನೇಹಿ ಬಣ್ಣಗಳನ್ನು ಬಳಕೆ ಮಾಡುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಪರಿಸರ ಸ್ನೇಹಿ ಬಣ್ಣ ಬಳಕೆ ಮಾಡುವ ಮೂಲಕ ಹಿರಿಯರು,ಯುವಜನತೆ, ಮಕ್ಕಳು ಸೇರಿದಂತೆ ಎಲ್ಲರೂ ಬಣ್ಣದಾಟಕ್ಕೆ ಮೆರಗು ತರಬೇಕಿದೆ. ಪಟ್ಟಣದ ನಂದಿ ಬಡಾವಣೆ, ಗಣಪತಿ ಚೌಕ ಸೇರಿದಂತೆ ಕೆಲ ಗಲ್ಲಿಗಳಲ್ಲಿ ಬಣ್ಣದಾಟದಂದು ಹಿರಿಯರು ಸೋಗು ಹಾಕಿ ಬಣ್ಣದೋಕುಳಿಗೆ ಮೆರಗು ತರುತ್ತಾರೆ.
೫,೮,೯ ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ಮಾ. ೨೫ ರಿಂದ ಆರಂಭವಾಗುತ್ತಿರುವದರಿಂದಾಗಿ ಇವರು ಬಣ್ಣದೋಕುಳಿಯಿಂದ ದೂರ ಉಳಿಯಲಿದ್ದಾರೆ. ಮಾ.೨೫ ರಿಂದ ಎಸ್ಎಸ್ಎಲ್ಸಿ ಪರೀಕ್ಷೆಯು ಸಹ ಆರಂಭವಾಗಲಿದೆ. ಪರೀಕ್ಷೆಗೆ ಹೋಗುವ ಮಕ್ಕಳು ಬಣ್ಣದಾಟದಿಂದ ವಂಚಿತರಾಗಲಿದ್ದಾರೆ. ಅವರ ಪರೀಕ್ಷೆ ಉತ್ತಮವಾಗಲಿ ಎಂದು ಶುಭ ಹಾರೈಕೆ.
ಪಟ್ಟಣದಲ್ಲಿ ಮೊದಲು ಹೋಳಿ ಹಬ್ಬ ಬಂತೆಂದರೆ ಸಾಕು ಚಿಕ್ಕಮಕ್ಕಳು ಕಾಮದಹನ ಮಾಡಲು ಕಟ್ಟಿಗೆಗಳನ್ನು ಸಂಗ್ರಹಿಸುವ ಕಾರ್ಯ ಶಿವರಾತ್ರಿ ಹಬ್ಬದ ಮರುದಿನದಿಂದಲೇ ಆರಂಭಿಸುತ್ತಿದ್ದರು. ಸಾಕಷ್ಟು ಕಟ್ಟಿಗೆಗಳನ್ನು ಸಂಗ್ರಹಿಸಿ ಕಾಮದಹನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಹಿರಿಯರು ಹೆಚ್ಚು ಸಂಖ್ಯೆಯಲ್ಲಿ ಹೋಳಿ ಹಬ್ಬದಲ್ಲಿ ಭಾಗವಹಿಸುವ ಮೂಲಕ ಹೋಳಿ ಹಬ್ಬಕ್ಕೆ ಮೆರಗು ತರುತ್ತಿದ್ದರು. ಈಚೆಗೆ ಇದು ಕಡಿಮೆಯಾಗಿರುವದು ಕಂಡುಬರುತ್ತಿದೆ. ಸಂಪ್ರದಾಯದಂತೆ ಕಾಮದಹನ ಮಾಡಲಾಗುತ್ತಿದೆ. ಈ ವರ್ಷವಾದರೂ ಹೋಳಿ ಹಬ್ಬದಲ್ಲಿ ಹಿರಿಯರು ಸೇರಿದಂತೆ ಎಲ್ಲರೂ ಭಾಗವಹಿಸುವ ಮೂಲಕ ಹೋಳಿ ಹಬ್ಬಕ್ಕೆ ಮೆರಗು ತರುವರೇ ಎಂದು ಕಾಯ್ದುನೋಡಬೇಕಷ್ಟೆ.
Subscribe to Updates
Get the latest creative news from FooBar about art, design and business.
Related Posts
Add A Comment

