ವಿ.ಆರ್.ಜಿ ಶಿಕ್ಷಣ ಸಂಸ್ಥೆಯ ಕಿಡ್ಜೀ ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಸಿಂದಗಿ: ಆರೋಗ್ಯಪೂರ್ಣ ಮನಸ್ಸು ಆರೋಗ್ಯ ಪೂರ್ಣ ದೈಹಿಕ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಚಿಕ್ಕ ಮಕ್ಕಳ ವಿದ್ಯಾಭ್ಯಾಸ ಪ್ರಾರಂಭದ ಹಂತದಲ್ಲಿ ಆಟ ಪಾಠಗಳಿಂದ ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಸಹಕಾರಿ ಆದಾಗ ಮಾತ್ರ ಶಿಕ್ಷಣ ಸಂಸ್ಥೆಗಳ ಧ್ಯೇಯೋದ್ದೇಶಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪಟ್ಟಣದ ವಿ.ಆರ್.ಜಿ ಶಿಕ್ಷಣ ಸಂಸ್ಥೆಯವರ ಕಿಡ್ಜೀ ಶಾಲೆಯು ಹಮ್ಮಿಕೊಂಡಿದ್ದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ಶಿಸ್ತಿನಿಂದ ಕೂಡಿರುವ ಉತ್ತಮ ಗುಣಮಟ್ಟದ, ಉತ್ತಮ ಕರ್ತೃತ್ವ ಶಕ್ತಿಯನ್ನು ಹೊಂದಿರುವ ಶಿಕ್ಷಕ, ಶಿಕ್ಷಕಿಯರ ವೃಂದವು ಶಾಲೆಯನ್ನ ಉನ್ನತ ಹಂತಕ್ಕೆ ತಂದು ನಿಲ್ಲಿಸಿದೆ. ಉದ್ಯಮವನ್ನೇ ಉಸಿರಾಗಿಸಿಕೊಂಡಿದ್ದ ಗುತ್ತೇದಾರ್ ಕುಟುಂಬ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದ್ದು ತುಂಬಾ ಸಂತೋಷದ ವಿಷಯ. ಮುಂಬರುವ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಯು ಪದವಿ ಶಿಕ್ಷಣದವರೆಗೂ ತನ್ನ ಬಾಹು ವಿಸ್ತರಿಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರ್ಬನ್ ಬ್ಯಾಂಕಿನ ನಿರ್ದೇಶಕ ಶರಣಪ್ಪ ವಾರದ, ದೈಹಿಕ ನಿರ್ದೇಶಕ ರವಿ ಗೋಲಾ ಮಾತನಾಡಿದರು.
ಈ ವೇಳೆ ಸಾನಿಧ್ಯ ವಹಿಸಿದ್ದ ಭೀಮಾಶಂಕರ ಶ್ರೀಮಠದ ದತ್ತಪ್ಪಯ್ಯ ಮಹಾರಾಜರು ಆಶೀರ್ವಚನ ನೀಡಿದರು.
ಸಂಸ್ಥೆಯ ಅಧ್ಯಕ್ಷ ರಾಜು ಗುತ್ತೇದಾರ, ವೆಂಕಟೇಶ್ ಗುತ್ತೇದಾರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ವೇದಿಕೆ ಮೇಲಿದ್ದರು.
ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

