ಬಸವನಬಾಗೇವಾಡಿ: ತಾಲೂಕಿನಲ್ಲಿ ಮೋಸ ಮಾಡುವ ಆಧಾರ ಕಾರ್ಡ್ ಕೇಂದ್ರಗಳ ಮೇಲೆ ತಹಸೀಲ್ದಾರರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ರಾಜಶೇಖರ ಹುಲ್ಲೂರ,ಪದಾಧಿಕಾರಿಗಳು ಗ್ರೇಡ್-೨ ತಹಸೀಲ್ದಾರ ಜಿ.ಎಸ್.ನಾಯಕ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ರಾಜ್ಯದಲ್ಲಿ ಶಾಲೆಯ ಮಕ್ಕಳ ಹೆಸರು ಎಸ್ಟಿಎಸ್ ದಾಖಲಾತಿ ಪ್ರಕಾರ ಆಧಾರ ಕಾರ್ಡ್ನಲ್ಲಿಯೂ ಇರಬೇಕು. ಇದರಿಂದಾಗಿ ಆಧಾರ ಕಾರ್ಡ್ನಲ್ಲಿ ಮಕ್ಕಳು ಹೆಸರು, ತಂದೆಯ ಹೆಸರು, ಅಡ್ಡಹೆಸರು ಸೇರಿದಂತೆ ಏನಾದರೂ ತಪ್ಪಾಗಿದ್ದರೆ ಆಧಾರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಶಾಲೆಯ ಮುಖ್ಯಗುರುಗಳು ಪಾಲಕರಿಗೆ ಹೇಳುತ್ತಾರೆ. ಅದರಂತೆ ಪಾಲಕರು ತಮ್ಮ ತಮ್ಮ ಮಕ್ಕಳ ಆಧಾರ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಆಧಾರ ಕಾರ್ಡ್ ಕೇಂದ್ರಗಳಿಗೆ ಶಾಲೆಯ ದಾಖಲೆಯನ್ನು ಮುಖ್ಯಗುರುಗಳಿಂದ ಬರೆಸಿಕೊಂಡು ಹೋಗುತ್ತಾರೆ. ಪಾಲಕರು ಇದನ್ನು ತೆಗೆದುಕೊಂಡು ಹೋದಾಗ ಆಧಾರ ಕಾರ್ಡ್ ಕೇಂದ್ರದವರು ಇದನ್ನು ಪ್ರಿಂಟ್ ಮಾಡಿ ಮತ್ತೆ ಶಾಲೆಯ ಮುಖ್ಯಗುರುಗಳಿಂದ ಸಹಿ ಮಾಡಿಸಿಕೊಂಡು ಬರಲು ಹೇಳುತ್ತಾರೆ. ಆಗ ಪಾಲಕರಿಂದ ರೂ. ೧೦೦ ತೆಗೆದುಕೊಳ್ಳುತ್ತಾರೆ. ಪಾಲಕರು ಮತ್ತೆ ಮುಖ್ಯಗುರುಗಳಿಂದ ಸಹಿ, ಮುದ್ರೆ ಹಾಕಿಸಿಕೊಂಡು ಬಂದ ನಂತರ ಮತ್ತೆ ಪಾಲಕರಿಂದ ರೂ. ೧೦೦ ಪಡೆದುಕೊಂಡು ಆಧಾರ ಕಾರ್ಡ್ ತಿದ್ದುಪಡಿ ಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ಪಾಲಕರಿಗೆ ಆರ್ಥಿಕ ಹೊರೆಯಾಗುವ ಜೊತೆಗೆ ತಮ್ಮ ಕೆಲಸ ಬಿಟ್ಟು ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಮಕ್ಕಳ ಪಾಲಕರ ಮೇಲೆ ಆರ್ಥಿಕ ಹೊರೆಯಾಗುವ ಜೊತೆಗೆ ಅವರನ್ನು ಅಲೆದಾಡಿಸುತ್ತಿರುವ ಆಧಾರ ಕಾರ್ಡ್ ಕೇಂದ್ರಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದೇ ಹೋದರೆ ಮಕ್ಕಳ ಪಾಲಕರ ಜೊತೆಗೆ ಸಂಘಟನೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರಾಜುಗೌಡ ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

