ಬಸವನಬಾಗೇವಾಡಿ: ಮೇ.7 ರಂದು ನಡೆಯಲಿರುವ ವಿಜಯಪುರ ಮತಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಮುಕ್ತ, ನ್ಯಾಯಸಮ್ಮತ, ಪಾರದರ್ಶಕವಾಗಿ ಮತದಾನ ನಡೆಯುವ ನಿಟ್ಟಿನಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಆಲಮಟ್ಟಿ ಯುಕೆಪಿ ಭೂಸ್ವಾಧಿನಾಧಿಕಾರಿ, ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಗಂಗಪ್ಪ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶುಕ್ರವಾರ ಅಖಂಡ ತಾಲೂಕಿನ ಪತ್ರಿಕೆ ವರದಿಗಾರರ ಹಾಗೂ ವಿಡಿಯೋ ಮಾಧ್ಯಮದವರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಲಾಗುವದು. ನಮ್ಮ ವಿಧಾನಸಭಾ ಮತಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಲು ವಿವಿಧ ಜಾಗೃತಿ ಜಾಥಾ ಕಾರ್ಯಕ್ರನಗಳನನ್ನು ಆಯೋಜನೆ ಮಾಡಲಾಗುವದು. ಮಾ.16 ರಿಂದ ಚುನಾವಣೆ ನೀತಿಸಂಹಿತೆ ಜಾರಿ ಬಂದಿರುವದರಿಂದ ಯಾರೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಯಾರಾದರೂ ನೀತಿ ಸಂಹಿತೆ ಉಲ್ಲಂಘಿಸಿದರೆ ಅಂತಹವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವದು. ಈಗಾಗಲೇ ಕೊಲ್ಹಾರ ಯುಕೆಪಿ ಬ್ರಿಜ್, ಅರಳದಿನ್ನಿ ಕ್ರಾಸ್, ಯಲಗೂರ ಕ್ರಾಸ್ ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.
ರೂ.50 ಸಾವಿರಕ್ಕಿಂತ ಹೆಚ್ಚಿನ ಹಣ ದಾಖಲೆ ಇಲ್ಲದೇ ತೆಗೆದುಕೊಂಡು ಹೋಗುವಂತಿಲ್ಲ. ದಾಖಲೆಯಿಲ್ಲದ ಹಣವನ್ನು ವಶಪಡಿಸಿಕೊಳ್ಳಲಾಗುವುದು. ರೂ.10 ಲಕ್ಷಕ್ಕಿಂತ ಹೆಚ್ಚು ಹಣ ಸಿಕ್ಕರೆ ಅದನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು. ಮದ್ಯ ಸೇರಿದಂತೆ ಇತರೆ ವಸ್ತುಗಳ ಸಾಗಣೆ ಮೇಲೆ ನಿಗಾ ವಹಿಸಲಾಗುತ್ತಿದೆ. ಸಿ ವ್ಹಿಜಿಲ್ ಆ್ಯಪ್ ಮೂಲಕ ಇದುವರೆಗೆ ದಾಖಲಾಗಿದ್ದ 37 ದೂರು ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ 9 ಫ್ಲಾಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದೆ. ಜನರು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಹೆಲ್ಪ್ ಲೈನ್ ಸಂಖ್ಯೆ: 08358245226 ಗೆ ಸಲ್ಲಿಸಬಹುದು ಎಂದು ಹೇಳಿದರು.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 1,09,508 ಪುರುಷ ಮತದಾರರು, 1,06,412 ಮಹಿಳಾ ಮತದಾರರು, ಇತರೆ 15 ಮತದಾರರು ಸೇರಿದಂತೆ ಒಟ್ಟು 2,15,935 ಮತದಾರರಿದ್ದಾರೆ. ಇದರಲ್ಲಿ 5,495 ಯುವ ಮತದಾರರು ಇದ್ದಾರೆ. ಮತಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು 1,752 ಹಾಗೂ ಅಂಗವಿಕಲ 1,975 ಮತದಾರರಿದ್ದಾರೆ. ಇವರು ಅಂಚೆ ಮತಪತ್ರದ ಮೂಲಕ ಮತದಾನ ಮಾಡುವ ಅವಕಾಶ ಚುನಾವಣಾ ಆಯೋಗ ನೀಡಿದೆ. ಇವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಒಟ್ಟು 230 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತಗಟ್ಟೆಯಲ್ಲಿ ಮೂಲ ಸೌಲಭ್ಯದೊಂದಿಗೆ ಉತ್ತಮ ವಾತಾವರಣ ನಿರ್ಮಿಸಲಾಗುವುದು. ಕ್ಷೇತ್ರದಲ್ಲಿ 5 ವಲ್ನರೇಬಲ್, 9 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ನಾಗೂರಿನ ಮತಗಟ್ಟೆ ಸಂಖ್ಯೆ 124 ರಲ್ಲಿ ಹೆಚ್ವು ಅಂಗವಿಕಲ ಮತದಾರರಿದ್ದಾರೆ. ಬಳೂತಿಯ ಮತಗಟ್ಟೆ ಸಂಖ್ಯೆ 183 ರಲ್ಲಿ 51 ಹೊಸ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
21 ಸೆಕ್ಟರ್ ಅಧಿಕಾರಿಗಳು, 21 ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರು, 230 ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಮತದಾನಕ್ಕಾಗಿ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸುವ 1900 ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಸಭೆ ಸಮಾರಂಭಗಳಿಗೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಸ್ಥಳೀಯ ಸಂತೆ, ಜಾತ್ರೆ, ಮದುವೆ ಇತರೆ ಸಮಾರಂಭಗಳಿಗೆ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಜನರ ಖಾಸಗಿ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಉಂಟುಮಾಡುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ ಎಸ್.ಎಸ್.ನಾಯಕಲಮಠ, ಸಿಬ್ಬಂದಿಗಳಾದ ಮಂಜು ಹಳ್ಳೂರ, ಅಜರ ಮಕಾನದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

