ತಿಕೋಟಾ: ತಾಲೂಕು ವ್ಯಾಪ್ತಿಯ ಎಲ್ಲ ೧೪ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ಜನರು ವಲಸೆ ಹೋಗುವದನ್ನು ತಡೆದು ಸ್ಥಳಿಯವಾಗಿ ಅವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೇ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಕುಶಲ ಕೆಲಸ ನೀಡುವ ಉದ್ದೇಶದಿಂದ ಹಾಗೂ ಮಹಾತ್ಮ ಗಾಂದಿ ನರೇಗಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಭಾಗವಹಿಸುವಂತೆ ಪ್ರೇರೆಪಿಸುವ ದೃಷ್ಠಿಯಿಂದ ಮೇ-೨೦೨೪ರ ಅಂತ್ಯದವರೆಗೆ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ “ವಲಸೆ ಯಾಕ್ರಿ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ/ ಉದ್ಯೋಗ ಖಾತ್ರಿ, ದುಡಿಮೆ ಖಾತ್ರಿ” ಎಂಬ ವಿಶೇಷ ಅಭಿಯಾನವನ್ನು ಮಾನ್ಯ ಆಯುಕ್ತರ ನಿರ್ದೇಶನದಂತೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣಕುಮಾರ ಸಾಲಿ ಹೇಳಿದರು.
ಈಗಾಗಲೇ ಗ್ರಾಮೀಣ ಭಾಗದ ಜನರಿಗೆ ಪ್ರತಿ ದಿನ ೩೧೬ ರೂ ಕೂಲಿ ಜೊತೆಗೆ ೧೦೦ ದಿನಗಳ ಅಕುಶಲ ಕೆಲಸ ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವದೇ ಉದ್ಯೋಗ ದೊರೆಯದೇ ಇರುವ ಪ್ರಯುಕ್ತ ಈ ಅವಧಿಯಲ್ಲಿ ಅವರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಭಾಗವಾಗಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು & ಸಿಬ್ಬಂದಿಗಳು ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗೆ ಭೇಟಿ ನೀಡಿ ನರೇಗಾ ಮಾಹಿತಿ ನೀಡುವದರ ಜೊತೆಗೆ ನಮೂನೆ-೦೬ರಲ್ಲಿ ಕೆಲಸಕ್ಕೆ ಬೇಡಿಕೆ ಪಡೆಯುತ್ತಿದ್ದಾರೆ. ಹೀಗೆ ಬೇಡಿಕೆ ಸಂಗ್ರಹಿಸಿದ ಕೂಲಿಕಾರರರಿಗೆ ಎಪ್ರೀಲ್ ೦೧ ರಿಂದ ಅಕುಶಲ ಕೆಲಸ ನೀಡಲಾಗುತ್ತದೆ. ಈಕುರಿತು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಮಹಾತ್ಮ ಗಾಂಧಿ ನರೇಗಾ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ತಾಲೂಕಿನ ಪ್ರತಿ ಗ್ರಾಮದಲ್ಲಿ ಕೂಲಿ ಆಧಾರಿತ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ, ಕೆಲಸ ಬಯಸುವ ಪ್ರತಿ ವ್ಯಕ್ತಿಗೂ ಉದ್ಯೋಗ ಕಲ್ಪಿಸಲಾಗುತ್ತದೆ. ವಿಶೇಷಚೇತನರು, ಮಹಿಳೆಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪಸಂಖ್ಯಾತರು, ದುರ್ಬಲ ವರ್ಗಗಳಿಗೆ ಆಧ್ಯತೆ ಮೇಲೆ ಕೆಲಸ ನೀಡಲಾಗುತ್ತಿದೆ. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: ೧೮೦೦ ೪೨೫೮ ೬೬೬ ಅಥವಾ ೯೪೮೦೮ ೩೧೬೯೯ಗೆ ಸಂಪರ್ಕಿಸಲು ಅಥವಾ ಹತ್ತಿರದ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

