ಗ್ರಾಪಂ.ಗೆ ಬೀಗ ಹಾಕಿ ತಲೆಯ ಮೇಲೆ ಕಲ್ಲು ಹೊತ್ತು ಗ್ರಾಮಸ್ಥರಿಂದ ಧರಣಿ ಸತ್ಯಾಗ್ರಹ
ಕಲಕೇರಿ: ತಿಂಗಳಾದ್ರು ಬರ್ತಾ ಇಲ್ಲ ನಲ್ಲಿ ನೀರು..! ತಿಂಗಳುಗಳೇ ಕಳೆದರೂ ಗ್ರಾಮ ಪಂಚಾಯಿತಿಗೆ ಬಾರದ ಅಭಿವೃದ್ಧಿ ಅಧಿಕಾರಿಗಳು, ತಿಳಗೂಳ ಗ್ರಾಮದ ನೆರವಿಗೆ ಬರ್ತಾರಾ ಶಾಸಕ ರಾಜುಗೌಡ ಪಾಟೀಲ್, ಹೀಗೆಲ್ಲ ಕೇಳಿ ಬರುತ್ತಿರುವ ಮಾತುಗಳು ಕಲಕೇರಿ ಸಮೀಪದ ತಿಳಗೂಳ ಗ್ರಾಮದಲ್ಲಿ..
ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಗ್ರಾಮದಲ್ಲಿ ತಿಂಗಳು ಕಳೆದರೂ ಯಾವುದೇ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ, ಗ್ರಾಮದ ಎರೆ ಹೋಲದಲ್ಲಿ ಸರ್ಕಾರದಿಂದ ಎರಡು ಬಾವಿಗಳನ್ನು ನಿರ್ಮಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ ಎಂದು ನೀರಿನ ಬವಣೆ ತೋಡಿಕೊಂಡ ಗ್ರಾಮಸ್ಥರು ಎರಡು ಬಾವಿಗಳಲ್ಲಿ ನೀರು ತುಂಬಿದ್ದರೂ ಎರಡೂ ಬಾವಿಗಳ ಪೈಪ್ಲೈನ್ ಒಡೆದು ಹೋಗಿ ಸುಮಾರು ೪ ರಿಂದ ೫ ವರ್ಷಗಳು ಗತಿಸಿದರೂ ಯಾವೊಬ್ಬ ಅಧಿಕಾರಿಯೂ ಸಹ ಇತ್ತ ಕಡೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬೀಗ ಮುದ್ರೆ ಹಾಕಿ ತಲೆಯ ಮೇಲೆ ಕಲ್ಲು ಇಟ್ಟುಕೊಂಡು ಬೇಡಿಕೆ ಈಡೇರಿಸುವ ವರೆಗೆ ಉಪವಾಸ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಹೇಳಿದ್ದು, ಹಲವು ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಮೊದಲನೆಯದಾಗಿ ಕೂಡಲೇ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಮತ್ತು ಎರೆ ಹೋಲದಲ್ಲಿ ಇರುವ ಎರಡು ಬಾವಿಗಳ ಪೈಪ್ಲೈನ್ ಮಾಡಬೇಕು, ಈ ಭ್ರಷ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡಬೇಕು, ೧೫ನೇ ಹಣಕಾಸು ಸಂಪೂರ್ಣ ತನಿಖೆ ಆಗಬೇಕು, ಕೊಳ್ಳೆ ಹೊಡೆದ ಹಣವನ್ನು ಸರ್ಕಾರಕ್ಕೆ ಮರಳಿ ತುಂಬಿಸಬೇಕು, ಎಸ್ಸಿ ಎಸ್ಟಿ ವಾರ್ಡ್ ಗಳಲ್ಲಿ ಸಿಸಿ ರಸ್ತೆಗಳು ನಿರ್ಮಾಣ ಮಾಡಬೇಕು, ಪಂಚಾಯಿತಿಯಲ್ಲಿ ಇರುವ ಕಸದ ವಾಹನವನ್ನು ಪ್ರತಿ ಹಳ್ಳಿಗಳಿಗೆ ಕಳಿಸಬೇಕು ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಚಾಲನೆ ಮಾಡಬೇಕು ಎಂದು ಹೇಳಿದ್ದಾರೆ.
ಈ ಎಲ್ಲಾ ಬೇಡಿಕೆಗಳು ಈಡೇರುವ ವರೆಗೂ ಧರಣಿ ಸತ್ಯಾಗ್ರಹ ಹಿಂದೆ ತೆಗೆದುಕೊಳ್ಳುವುದಿಲ್ಲ ಎಂದು ಗ್ರಾಮದ ಮುಖಂಡರಾದ ವಿಠೋಬಾ ನಾಟೀಕಾರ, ನಿತ್ಯಾನಂದ ಕತ್ತಿ, ಮಾಂತಪ್ಪ ಸಂದಿಮನಿ, ದಾನೇಶ ಕೇಸರಿ, ಶರಣಪ್ಪ ಗದ್ದಗಿ, ಮುತ್ತು ಬಯ್ಯಾರ, ರಾಜು ಸಂದಿಮನಿ, ಸುಸಿಲಬಾಯಿ ಮಾದರ, ಸೀತಮ್ಮ ಗೆದ್ದಲಮಾರಿ, ರಾಮನಗೌಡ ಯಾಳವಾರ, ಮಾಂತಪ್ಪ ಗುಡಿಸಲಮನಿ, ಸಂತೋಷ್ ದೊಡಮನಿ, ಆನಂದ ಕಲಕೇರಿ, ದ್ಯಾವಪ್ಪ ದೊಡಮನಿ ಸೇರಿದಂತೆ ಇತರರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪಿಡಿಓ ಅಕ್ಕಮಹಾದೇವಿ ಅಂಗಡಿ ಮತ್ತು ಜೆಇ ಮಲ್ಲಿಕಾರ್ಜುನ ಹಿಕ್ಕನಗುತ್ತಿ ಸ್ಥಳಕ್ಕಾಗಮಿಸಿ ತಮ್ಮ ಆಶ್ವಾಸನೆಯ ಮೂಲಕ ಧರಣಿ ನಿರತರ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಗ್ರಾಮಸ್ಥರು ಧರಣಿ ಮುಂದುವರೆಸುವುದಾಗಿ ಹೇಳಿದರು. ಈ ವೇಳೆ ಪತ್ರಿಕಾ ವರದಿಗಾರರು ಫೋನ್ ಮೂಲಕ ಪಿಡಿಓ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

