“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಕೆಲವು ವರ್ಷಗಳ ಹಿಂದೆ ನೀರಿಗಾಗಿ ಕಾದು ನಲ್ಲಿಯ ಮುಂದೆ ಕುಳಿತು ಅಳುತ್ತಿರುವ ಮಹಿಳೆಯ ಕಣ್ಣೀರಿನಿಂದ ಬಕೆಟ್ ತುಂಬಿದ್ದ ವ್ಯಂಗ್ಯಚಿತ್ರವೊಂದು ವೃತ್ತಪತ್ರಿಕೆಗಳಲ್ಲಿ ಪ್ರಕಟವಾದಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿತ್ತು. ಆದರೆ ಇಂದು ಲಕ್ಷಾಂತರ ಜನ ಹೆಣ್ಣು ಮಕ್ಕಳು ಅಕ್ಷರಶಃ ನೀರಿಗಾಗಿ ಕಣ್ಣೀರಿಡುತ್ತಿದ್ದಾರೆ. ಕೊಳಾಯಿಗಳ ಬಳಿ ನೀರಿಗಾಗಿ ಹೆಣ್ಣು ಮಕ್ಕಳು ಜಗಳ ಸರ್ವೆಸಾಮಾನ್ಯವಾಗಿದೆ. ಈ ಹಿಂದೆ “ಅಕಸ್ಮಾತ್ ಮೂರನೇ ಮಹಾಯುದ್ಧವಾದರೆ ಅದು ನೀರಿಗಾಗಿಯೇ” ಎಂಬ ಮಾತು ನಿಜ ಎಂಬಂತಹ ಕಾಲ ಬಂದೊದಗಿದೆ.
ಸಣ್ಣಪುಟ್ಟ ಹಕ್ಕಿಗಳು ಬಿಸಿಲಿನ ಆಘಾತವನ್ನು ತಡೆಯಲಾಗದೆ, ಕುಡಿಯಲು ನೀರಿಲ್ಲದೆ ಅಸು ನೀಗುತ್ತಿವೆ. ದನ ಕರುಗಳು ಕೆರೆ ಕಟ್ಟೆಗಳಲ್ಲಿ ನೀರನ್ನು ಹುಡುಕುತ್ತಾ ಅಂಬಾ ಎಂದು ಒರಲುವುದನ್ನು ಕೇಳಿದರೂ ಏನು ಮಾಡಲಾಗದ ಅಸಹಾಯಕತೆ ಅವುಗಳನ್ನು ಸಾಕಿದವರಿಗೆ. ಬೆಳೆಗಳು ಒಣಗಿ ಆಕಾಶಕ್ಕೆ ಮುಖ ಮಾಡಿ ನಿಂತಿವೆ. ಉಳ್ಳವರು ಟ್ಯಾಂಕರ್ಗಳಲ್ಲಿ ನೀರನ್ನು ಹಾಕಿಸಿಕೊಳ್ಳುತ್ತಿರಬಹುದು, ಆದರೆ ನೀರೇ ಇಲ್ಲದೆಡೆ ಬದುಕು ದುಸ್ತರವಾಗುತ್ತದೆ.ಇದು ಪ್ರತಿ ವರ್ಷ ಬೇಸಿಗೆ ಶುರುವಾಗುವ ಹೊತ್ತಿಗೆ ನಾವು ಕಾಣುವ ಚಿತ್ರಣ.
ಜಗತ್ತಿನ ಅತಿ ದೊಡ್ಡ ಸೋಜಿಗವೆಂದರೆ ನಾವು ಬದುಕಿರುವ ಈ ಭೂಮಿಯಲ್ಲಿ ಶೇಕಡಾ 72ರಷ್ಟು ನೀರಿದ್ದು ಕೇವಲ 28 ಶೇಕಡಾ ಭೂಮಿ ಇದೆ. ಈ ಭೂ ಭಾಗದಲ್ಲಿಯೂ ಮರುಭೂಮಿಗಳು, ಬೆಟ್ಟ ಗುಡ್ಡಗಳು, ಪರ್ವತಗಳು ಆವರಿಸಿಕೊಂಡಿದ್ದು ಅತ್ಯಂತ ಕಡಿಮೆ ಭಾಗದಲ್ಲಿ ಜನವಸತಿ ಇದೆ. ಆದರೂ ಕೂಡ ನಾವು ನೀರಿಗಾಗಿ ಹಾಹಾಕಾರ ಮಾಡುತ್ತಿದ್ದೇವೆ. ಎಲ್ಲಿ ನೋಡಿದರಲ್ಲಿ ಕೊಡಗಳ ಸಾಲು, ಗಂಟೆಗಟ್ಟಲೆ ನೀರಿಗಾಗಿ ಕಾದು ಬಾಯಾರಿದ ಜನ. ಇನ್ನು ಜಾನುವಾರುಗಳ ಪಾಡು ಇನ್ನೂ ಶೋಚನೀಯ. ಮಾತು ಬರುವ ಮನುಷ್ಯರು ಹೇಗಾದರೂ ದಾಹ ತೀರಿಸಿಕೊಳ್ಳಬಲ್ಲರು… ಮಾತು ಬಾರದ ಮೂಕ ಪ್ರಾಣಿಗಳ ಸ್ಥಿತಿ ಆ ದೇವರೇ ಬಲ್ಲ.
ಈ ಹಿಂದೆ ಊರಿನ ಪ್ರತಿ ಮನೆಗಳ ಹಿತ್ತಲಲ್ಲಿ ಬಾವಿಗಳಿದ್ದು ಪ್ರತೀ ಊರಲ್ಲಿ ಒಂದೊಂದು ಹಳ್ಳ ಕೆರೆಗಳು ಇದ್ದೇ ಇರುತ್ತಿದ್ದವು. ಮಳೆ ಬಂದಾಗ ಹೆಚ್ಚಾದ ನೀರು ಈ ಬಾವಿ, ಹೊಂಡ, ಕೆರೆ, ಹೊಳೆ-ಹಳ್ಳಗಳನ್ನು ಸೇರಿಕೊಂಡು ಜನರ ಮತ್ತು ಒಕ್ಕಲುತನದ ಅವಶ್ಯಕತೆಗಳನ್ನು ಪೂರೈಸುವಷ್ಟು ಜಲ ಸ್ವಾವಲಂಬಿತನವನ್ನು ಆಯಾ ಊರುಗಳು ಹೊಂದಿದ್ದವು. ಪ್ರತಿ ವರ್ಷವೂ ದೇವರ ಕಾರ್ಯ ಎಂಬಂತೆ ಕೆರೆ ಹಳ್ಳಗಳ ಹೂಳನ್ನು ಆಯಾ ಗ್ರಾಮಸ್ಥರು ತಮ್ಮ ಶ್ರಮದಾನದ ಮೂಲಕ ತೆಗೆದು ಮತ್ತಷ್ಟು ಹೆಚ್ಚು ಮಳೆ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಿದ್ದರು.
ಅಂದು ತಮ್ಮ ಮನೆಯ ಅವಶ್ಯಕತೆಯ ನೀರನ್ನು ಪೂರೈಸಲು ಬಾವಿಗೆ ಹೋಗಿ ಅದಕ್ಕೆ ಅಳವಡಿಸಿರುವ ಕಬ್ಬಿಣದ ರಾಟೆಗೆ ಹಗ್ಗ ಹಾಕಿ ಕೊಡಕ್ಕೆ ಹಗ್ಗದ ಕುಣಿಕೆಯನ್ನು ಬಿಗಿದು ಬಾವಿಯಲ್ಲಿ ಇಳಿಬಿಟ್ಟು ನೀರನ್ನು ಸೇದಿ ಮನೆಗೆ ಹೊತ್ತು ಹಾಕುತ್ತಿದ್ದರು. ಈ ರೀತಿ ನೀರು ಸೇದಿ ತುಂಬಿಸುವುದು ಒಂದಾಳಿನ ಕೆಲಸವಾಗಿರುತ್ತಿತ್ತು, ಮನೆಯ ಗಂಡಸರು ಊರಿನ ಹೊಳೆಗಳಲ್ಲಿ ಸ್ನಾನ ಮಾಡಿ ಹಳ್ಳಗಳಲ್ಲಿ ತಮ್ಮ ದನಕರುಗಳ ಮೈ ತೊಳೆದು ಅವುಗಳಿಗೆ ನೀರು ಕುಡಿಸಿದರೆ, ಹೆಣ್ಣು ಮಕ್ಕಳು ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಮನೆಯ ಮುಸುರೆ ಪಾತ್ರೆಗಳನ್ನು ಮೈಲಿಗೆ ಬಟ್ಟೆಗಳನ್ನು ಹೊಳೆ ಹಳ್ಳಗಳ ಬಳಿ ಒಯ್ದು ತೊಳೆದು ಸ್ವಚ್ಛಗೊಳಿಸಿ ತರುತ್ತಿದ್ದರು. ಅಂತೆಯೇ ಮಿತವಾಗಿ ನೀರನ್ನು ಬಳಕೆ ಮಾಡುತ್ತಿದ್ದರು ಕೂಡ. ಬದಲಾದ ಕಾಲಘಟ್ಟದಲ್ಲಿ ಬಟನ್ ಹಾಕಿದರೆ ಮನೆಯ ಅಂಗಳದ ಮೂಲೆಯೊಂದರಲ್ಲಿ ಸಂಗ್ರಹವಾಗಿರುವ ತೊಟ್ಟಿಯ ನೀರನ್ನು ಕ್ಷಣಮಾತ್ರದಲ್ಲಿ ಮನೆಯ ಮೇಲ್ಭಾಗದಲ್ಲಿ ಅಳವಡಿಸಿರುವ ಓವರ್ ಹೆಡ್ ಟ್ಯಾಂಕ್ ಗೆ ತುಂಬಿಸಿಕೊಳ್ಳಬಹುದು. ಯಾವುದೇ ರೀತಿಯ ಅನಾನುಕೂಲವಾಗಬಾರದೆಂದು ಮನೆಯ ಬಚ್ಚಲು, ಅಡುಗೆಮನೆಯ ಸಿಂಕ್, ಹಿತ್ತಲು ಹೀಗೆ ಎತ್ತ ನೋಡಿದರತ್ತ ನಲ್ಲಿಗಳು ಮತ್ತು ನಳ ತಿರುವಿದರೆ ಬೋರೆಂದು ಸುರಿಯುವ ನೀರು. ಶ್ರಮವೇ ಇಲ್ಲದೆ ನೀರಿನ ಸಂಗ್ರಹ ಮಾಡಿಕೊಳ್ಳುವ ಮನುಷ್ಯ ನೀರಿನ ಬೆಲೆಯನ್ನು ಹೇಗೆ ಅರಿತಾನು?? ಅಂತೆಯೇ ನೀರಿನ ಬಳಕೆ ಹೆಚ್ಚಾಯಿತು.
ನಗರೀಕರಣದ ಭರಾಟೆಯಲ್ಲಿ ಕೆರೆ ಬಾವಿಗಳನ್ನು ಮುಚ್ಚಿಸಿ ಜಲ ಮೂಲಗಳನ್ನು ನಿರ್ಲಕ್ಷಿಸಿ ಇದ್ದ ಬದ್ಧ ಹೊಲಗಳನ್ನು ವಾಸಯೋಗ್ಯ ನಿವೇಶನಗಳನ್ನಾಗಿ ಪರಿವರ್ತಿಸುವಲ್ಲಿ ಮನುಷ್ಯ ಸಫಲನಾಗಿದ್ದಾನೆ. ಅದರ ಪರಿಣಾಮವಾಗಿ ಎಲ್ಲ ಜಲ ಮೂಲಗಳು ಮುಚ್ಚಿ ಹೋಗಿವೆ. ಇರುವ ಒಂದಷ್ಟು ಜಲ ಮೂಲಗಳಿಗೆ ನೀರಿನ ಹರಿವು ಕಡಿಮೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಗಳು ಮೇಲಿಂದ ಬೀಳುವ ಮಳೆಯ ನೀರನ್ನು ಹಿಂಗಿಸಿಕೊಳ್ಳದೆ, ಚರಂಡಿಯ ಮೂಲಕ ಮಳೆ ನೀರು ಹರಿದು ಹೋಗುವಂತಾಗಿದೆ. ನಗರೀಕರಣದ ಭರಾಟೆಗೆ ಜನವಸತಿ ಪ್ರದೇಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಡಿನ ಒತ್ತುವರಿ ಕಾರ್ಯ ಹೆಚ್ಚಾಗಿದ್ದು ಅದರ ಅಂಗವಾಗಿ ಗಿಡಮರಗಳನ್ನು ಕಡಿದು, ಜನವಸತಿ ಯೋಗ್ಯ ಪ್ರದೇಶಗಳನ್ನಾಗಿ ಮಾಡುತ್ತಿರುವುದರಿಂದ ಕೂಡ ಅರಣ್ಯ ನಾಶವಾಗುತ್ತಿದೆ. ಕಾಡುಪ್ರಾಣಿಗಳನ್ನು, ಬೆಲೆಬಾಳುವ ಮರಗಳನ್ನು ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿರುವ ಕಳ್ಳ ಸಾಗಣೆಕೋರದಿಂದ ಕಾಡು ವಿನಾಶದ ಅಂಚಿಗೆ ತಲುಪುತ್ತಿದೆ. ವಿಪರ್ಯಾಸವೆಂದರೆ ಬೆಟ್ಟಗಳ ನೆತ್ತಿಯ ಭಾಗವನ್ನು ಸುಟ್ಟರೆ ದೇವರು ಸಂತೃಪ್ತನಾಗಿ ಮಳೆ ಸುರಿಸುತ್ತಾನೆ ಎಂಬ ಜನರ ಮೂಢನಂಬಿಕೆ ಕಾಡನ್ನು ಮತ್ತಷ್ಟು ಅಪಾಯಕ್ಕೆ ದೂಡುತ್ತದೆ. ಕೇವಲ ಬೆಲೆಬಾಳುವ ಮರ-ಗಿಡಗಳಲ್ಲದೆ ಜೀವ ಸಂಕುಲ ಮತ್ತು ಸಸ್ಯ ಸಂಪತ್ತು ಈ ರೀತಿಯ ಬೆಂಕಿಯ ಹಾವಳಿಯಿಂದ ನಾಶವಾಗುತ್ತದೆ.
ಮೂರು ಭಾಗ ನೀರಿದ್ದು ಕೇವಲ ಒಂದು ಭಾಗ ಜನವಸತಿ ಇದ್ದರೂ ನೀರಿನ ತೊಂದರೆ ಆಗುತ್ತಿರುವ ಕಾರಣ ಹುಡುಕಿದರೆ ಭೂಮಿಯ ಮೇಲಿರುವ ಶೇಕಡ 72 ರಷ್ಟು ನೀರಿನಲ್ಲಿ ಕೇವಲ ಎರಡು ಶೇಕಡ ನೀರು ಮಾತ್ರ ಬಳಸಲು ಯೋಗ್ಯವಾಗಿದೆ ಎಂಬ ಸತ್ಯ ಮುಖಕ್ಕೆ ರಾಚುತ್ತದೆ. ಬೆಳೆಯುತ್ತಿರುವ ಊರುಗಳು, ಏರುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ತಾಪಮಾನ ತಮ್ಮ ಒಡಲನ್ನು ಬರಿದಾಗಿಸಿಕೊಂಡಿರುವ ಬಾವಿ ಹೊಳೆ ಹಳ್ಳಗಳು ಎಲ್ಲಿ ನೋಡಿದರಲ್ಲಿ ಬರದ ಛಾಯೆ ಮುಸುಕಿದೆ.
ಉಳ್ಳವರು ಟ್ಯಾಂಕರ್ ಗಳಲ್ಲಿ ನೀರನ್ನು ತರಿಸಿ ಹಾಕಿಕೊಳ್ಳುತ್ತಿದ್ದಾರೆ. ಇಲ್ಲೂ ಕೂಡ ಟ್ಯಾಂಕರ್ ಗಳವರು ಯದ್ವಾತದ್ವಾ ದರ ಏರಿಸಿ ಪರಿಸ್ಥಿತಿಯ ಲಾಭ ಪಡೆಯುತ್ತಾರೆ.,ಆದರೆ ಆರ್ಥಿಕವಾಗಿ ಅಷ್ಟೇನೂ ಅನುಕೂಲ ಇಲ್ಲದವರು ಹನಿ ನೀರಿಗಾಗಿ ಕಾದು ಬಳಲಿ ಬೆಂಡಾಗುತ್ತಾರೆ.

ಹಾಗಾದರೆ ಇದಕ್ಕೇನು ಪರಿಹಾರ??
ಖಂಡಿತವಾಗಿಯೂ ಪರಿಹಾರವಿದೆ. ಆದರೆ ಇದು ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತಲ್ಲ….. ಅತ್ಯಂತ ವ್ಯವಸ್ಥಿತವಾಗಿ ಯೋಜನಾತ್ಮಕವಾಗಿ ನಿರಂತರವಾಗಿ ನಡೆಯಲ್ಪಡುವ ಕಾರ್ಯಕ್ರಮ.
2000ನೇ ಇಸವಿಯಲ್ಲಿ ಇಂದಿನ ತಮಿಳ್ನಾಡು ರಾಜ್ಯದ ರಾಜಧಾನಿ ಚೆನ್ನೈ ಜಿಲ್ಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಯವರ ಪರಿಶ್ರಮದಿಂದ ಇಡೀ ಜಿಲ್ಲೆಯ ಎಲ್ಲಾ ಮನೆಗಳು ಮಳೆನೀರು ಕೊಯ್ಲನ್ನು ಅಳವಡಿಸಿಕೊಂಡು ಜಲ ಸ್ವಾವಲಂಬನೆಯನ್ನು ಸಾಧಿಸಿದ್ದವು. ಅಂತಹ ಪ್ರಯತ್ನಗಳು ಎಲ್ಲೆಡೆ ಆಗಲೇಬೇಕು..
ಅವುಗಳಲ್ಲಿ ಮೊಟ್ಟ ಮೊದಲನೆಯದಾಗಿ
- ಎಲ್ಲೆಡೆ ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.ರಸ್ತೆ ಆಗಲೀಕರಣದ ನೆಪದಲ್ಲಿ ಗಿಡಗಳ ಮಾರಣಹೋಮವನ್ನು ನಿಲ್ಲಿಸಬೇಕು. ಕಾಡುಗಳನ್ನು ಒತ್ತುವರಿ ಮಾಡುವುದನ್ನು ನಿಲ್ಲಿಸಬೇಕು. ವೈಯುಕ್ತಿಕವಾಗಿ ಪ್ರತಿ ಮನೆಯಲ್ಲಿ ಎಷ್ಟು ಜನ ಸದಸ್ಯರಿರುತ್ತಾರೆಯೋ ಅಷ್ಟು ಮರಗಳನ್ನು ಬೆಳೆಸಲೇಬೇಕು ಎಂಬ ಕಡ್ಡಾಯ ನಿಯಮವನ್ನು ಹಾಕಿಕೊಳ್ಳಬೇಕು. ಪ್ರತಿ ವರ್ಷ ಮನೆಯ ಸದಸ್ಯರ ಹುಟ್ಟುಹಬ್ಬಗಳನ್ನು ಆಚರಿಸುವಾಗ ಒಂದೊಂದು ಸಸಿಗಳನ್ನು ನೆಟ್ಟು ಪೋಷಿಸಬೇಕು.
- ಈಗಾಗಲೇ ಸಾಕಷ್ಟು ಕೆರೆ ಕಾಲುವೆಗಳನ್ನು ಮುಚ್ಚಿ ಹಾಕಿ ನಿವೇಶನಗಳನ್ನು ಮಾಡಿ ಮಾರಾಟ ಮಾಡಿರುವುದರಿಂದ ಅಳಿದುಳಿದಿರುವ ನಮ್ಮ ಜಲ ಮೂಲಗಳನ್ನು ರಕ್ಷಣಾ ಗೋಡೆಗಳನ್ನು ಕಟ್ಟುವ ಮೂಲಕ ರಕ್ಷಿಸಿಕೊಳ್ಳಬೇಕು.ಬತ್ತಿ ಹೋಗಿರುವ ಕೆರೆ ಬಾವಿಗಳಿಗೆ ನೀರಿನ ಮರುಪೂರಣ ಮಾಡಬೇಕು.
- ತೋಟಗಳಲ್ಲಿ ಹೊಲದ ಬದುವುಗಳಲ್ಲಿ ದೊಡ್ಡ ದೊಡ್ಡ ಇಂಗು ಗುಂಡಿ(ಟ್ರೆಂಚ್) ಗಳನ್ನು ತೋಡುವ ಮೂಲಕ ಮಳೆಯ ನೀರನ್ನು ಇಂಗಿಸಬೇಕು. ಪ್ರತಿ ಹೊಲಗಳಲ್ಲೂ ಹೊಂಡಗಳನ್ನು ಮಾಡಿ ಅಲ್ಲಿ ಮಳೆ ನೀರನ್ನು ಸಂಗ್ರಹಿಸಬೇಕು. ಮಳೆಯ ನೀರು ಕೊಚ್ಚಿ ಹೋಗದಂತೆ ಸಸಿಗಳನ್ನು ನೆಟ್ಟು ಪೋಷಿಸಿ, ಎತ್ತರದ ಬದುವುಗಳನ್ನು ನಿರ್ಮಾಣ ಮಾಡಿ ಮಳೆಯ ನೀರು ಮತ್ತು ಮಣ್ಣು ಕೊಚ್ಚಿ ಹೋಗದಂತೆ ಕಾಯ್ದುಕೊಳ್ಳಬೇಕು.
- ಮಳೆಯ ನೀರು ರಸ್ತೆಯ ಮೇಲೆ ಹರಿದು ಚರಂಡಿ ಸೇರಿ ಪೋಲಾಗದಂತೆ ತಡೆಯಲು ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಮನೆಯ ತಾರಸಿಯಿಂದ ವಿವಿಧೆಡೆ ಹರಿಯುವ ಹರನಾಳಿಗೆ ಮಳೆ ನೀರನ್ನು ಸಂಗ್ರಹಿಸಿ ದನ ಕರುಗಳಿಗೆ ಕುಡಿಯಲು, ವಾಹನಗಳನ್ನು ತೊಳೆಯಲು, ಮನೆಯ ಬಟ್ಟೆ ಒಗೆಯುವ ಪಾತ್ರೆ ತೊಳೆಯುವ ನೆಲ ಒರೆಸುವ, ಬಚ್ಚಲು ಮತ್ತು ಟಾಯ್ಲೆಟ್ ಗಳನ್ನು ತೊಳೆಯಲು ಬಳಸಬಹುದು.
- ಮುಖ್ಯವಾಗಿ ಮನೆಯ ನಲ್ಲಿಗಳಲ್ಲಿ ನೀರು ಸೋರದಂತೆ ರಿಪೇರಿ ಮಾಡಿಸಬೇಕು. ಅನವಶ್ಯಕವಾಗಿ ನೀರು ಬಳಸಬಾರದು. ಮಿತವ್ಯಯ ಯಾವತ್ತಿಗೂ ಒಳ್ಳೆಯದು.
- ಮುಂದಿನ ದಿನಗಳಲ್ಲಿ ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳದಂತೆ ಮುಂಜಾಗರೂಕತಾ ಕ್ರಮವಾಗಿ ಹಸಿರನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಟ್ಟು ಪೋಷಿಸಬೇಕು. ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು.
- ನೀರು ನಮ್ಮ ಪಂಚಭೂತಗಳಲ್ಲಿ ಒಂದಾಗಿದ್ದು ಪ್ರತಿಯೊಬ್ಬರ ದಾಹ ತೀರಿಸುವ ಜೀವದಾಯಿನಿ. ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರುಹುಃ ಎಂದು ಸಪ್ತ ಜಾಹ್ನವಿ ನದಿಗಳನ್ನು ಪೂಜಿಸುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ಸಾಕ್ಷಾತ್ ಗಂಗಾಮಾತೆ ಎಂಬ ಸ್ಥಾನವನ್ನು ನೀಡಿದ್ದಾರೆ. ಆದರೆ ಪೂಜೆ,ವಿವಾಹ ಮತ್ತಿತರ ಮಂಗಳ ಕಾರ್ಯಗಳ ನಂತರ ಅಳಿದುಳಿದ ನೈರ್ಮಲ್ಯವನ್ನು ಎಸೆಯಲೂ ನದಿಗಳನ್ನೇ ಜನರು ಆರಿಸಿಕೊಳ್ಳುತ್ತಾರೆ. ಹಾಗಾಗಿಯೇ ನದಿಗಳು ಅತ್ಯಂತ ಕಲುಷಿತವಾಗಿದ್ದು ಅವುಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಇನ್ನೂ ಕೆಲವೆಡೆ ನೀರಿನಲ್ಲಿರುವ ಆಕ್ಸಿಜನ್ ಮಟ್ಟ ಸಂಪೂರ್ಣವಾಗಿ ಕುಸಿದು ಹೋಗಿದ್ದು ಅಂತಹ ನೀರಿನಲ್ಲಿ ಯಾವುದೇ ರೀತಿಯ ಸಸ್ಯಗಳು ಮತ್ತು ಜೀವ ಜಂತುಗಳು ಬದುಕಲು ಅವಶ್ಯಕವಾದ ವಾತಾವರಣ ಇಲ್ಲದೆ ಹೋಗಿದ್ದು ಅಂತಹ ನೀರನ್ನು ವೈಜ್ಞಾನಿಕವಾಗಿ ಸತ್ತು ಹೋದ ನೀರೆಂದು ಘೋಷಿಸಲಾಗುತ್ತದೆ, ಈಗಾಗಲೇ ಮಹಾನಗರಗಳಿಗೆ ಹೊಂದಿಕೊಂಡಂತಿರುವ ನಮ್ಮ ದೇಶದ ಬಹುತೇಕ ನದಿಗಳು ಸತ್ತುಹೋಗಿವೆ ಎಂದು ಜಲ ತಜ್ಞರು ಹೇಳುತ್ತಾರೆ. ಮಹಾನಗರಗಳ ಸುತ್ತ ಇರುವ ಕಾರ್ಖಾನೆಗಳು ತಮ್ಮಲ್ಲಿ ಶೇಖರವಾಗುವ ತ್ಯಾಜ್ಯವನ್ನು ಹೊರ ಬಿಡಲು ನದಿಗಳನ್ನು ಆಶ್ರಯಿಸುತ್ತಾರೆ. ಎಷ್ಟೋ ಬಾರಿ ಕಾರ್ಖಾನೆಗಳು ಹೊರ ಸೂಸುವ ರಾಸಾಯನಿಕ ತ್ಯಾಜ್ಯಗಳಿಂದ ನೀರು ಸಂಪೂರ್ಣ ಕಲುಷಿತವಾಗಿ ಚರ್ಮ ಸಂಬಂಧಿ ರೋಗಗಳು ಮತ್ತು ಶ್ವಾಸಕೋಶ ಮತ್ತು ಜೀರ್ಣ ಸಂಬಂಧಿ ರೋಗಗಳಿಗೆ ಜನರು ಗುರಿಯಾಗುತ್ತಾರೆ. ಆದ್ದರಿಂದ ಸರ್ಕಾರಗಳು ಯಾವುದೇ ರೀತಿಯ ಘನ ಮತ್ತು ರಾಸಾಯನಿಕ ತ್ಯಾಜ್ಯಗಳನ್ನು ನದಿಗಳಿಗೆ ಸೇರದೆ ಇರುವಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆ ನದಿ ಮೂಲಗಳನ್ನು ಕಲುಷಿತಗೊಳಿಸುವ ಸಂಸ್ಥೆಗಳನ್ನು, ಜನರನ್ನು ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಬೇಕು.
- ಈಗಾಗಲೇ ಬಳಸಿರುವ ನೀರನ್ನು ಮತ್ತೆ ಪುನರ್ಬಳಕೆಗೆ ಯೋಗ್ಯವಾಗುವಂತೆ ಮಾಡುವ ತಂತ್ರಜ್ಞಾನ ಜಗತ್ತಿನ ಎಲ್ಲೆಡೆ ಲಭ್ಯವಾಗಿದ್ದು ಆ ತಂತ್ರಜ್ಞಾನವನ್ನು ಬಳಸಿ ಜಲ ಮರುಪೂರಣ ವ್ಯವಸ್ಥೆಯನ್ನು ಕಲ್ಪಿಸಿ ನೀರಿನ ಬವಣೆಯನ್ನು ತಪ್ಪಿಸಬೇಕು.
ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡ ಮೇಲೆ ಮುಖ್ಯವಾಗಿ ನಮ್ಮ ಮೇಲಿರುವ ಜವಾಬ್ದಾರಿ ನೀರಿನ ಮಿತವ್ಯಯ….. ಅನವಶ್ಯಕವಾಗಿ ನೀರನ್ನು ಪೋಲು ಮಾಡಬಾರದು. ನೀರಿನ ಈ ಬಳಕೆಯನ್ನು ಅರಿತಿರುವ ರಾಜಸ್ಥಾನದ ಜನರು ಲೋಟಗಳಲ್ಲಿ ನೀರು ಕೊಡದೆ ದೊಡ್ಡ ದೊಡ್ಡ ತಂಬಿಗೆಗಳಲ್ಲಿ ಕೊಡುತ್ತಾರೆ. ಲೋಟಗಳಲ್ಲಿ ಕೊಟ್ಟ ನೀರನ್ನು ಅರ್ಧ ಕುಡಿದು ಇನ್ನುಳಿದ ನೀರನ್ನು ಚೆಲ್ಲುತ್ತಾರೆ, ಆದರೆ ದೊಡ್ಡ ತಂಬಿಗೆಯನ್ನು ನೇರವಾಗಿ ಎತ್ತಿ ಕುಡಿಯುವುದರಿಂದ ತಮಗೆ ಅವಶ್ಯವಿದ್ದಷ್ಟು ನೀರನ್ನು ಮಾತ್ರ ಕುಡಿದು ತಂಬಿಗೆಯನ್ನು ಹಾಗೆಯೇ ಇಡುತ್ತಾರೆ. ಈ ವ್ಯವಸ್ಥೆ ಅದೆಷ್ಟು ಒಳ್ಳೆಯದಲ್ಲವೇ?? ಸಣ್ಣ ಪುಟ್ಟ ಬದಲಾವಣೆಗಳು ಸಾಕಷ್ಟು ದೊಡ್ಡ ಉಳಿತಾಯಕ್ಕೆ ಕಾರಣವಾಗುತ್ತವೆ. ಆದ್ದರಿಂದ ನೀರಿಗಾಗಿ ಹೋರಾಟ ಮಾಡುವುದರ ಬದಲು ನೀರನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅತ್ಯಂತ ಒಳ್ಳೆಯ ಕಾರ್ಯವಾಗುತ್ತದೆ.
ಪ್ರತಿ ಹನಿ ನೀರನ್ನು ಉಳಿಸಿ ಮತ್ತು ಮಿತವಾಗಿ ಬಳಸಿ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

