ಪ್ರಣಾಳಿಕೆಯಲ್ಲಿ ಡಿಎಂಕೆ ಘೋಷಣೆ | ಕರ್ನಾಟಕದ ರೈತರ ಕುಡಿವ ನೀರಿನ ಪ್ರಶ್ನೆ | ಬಿಜೆಪಿ ವಾಗ್ದಾಳಿ
ಬೆಂಗಳೂರು: ಕರ್ನಾಟಕದ ದೌರ್ಬಲ್ಯವನ್ನು ಮನಗಂಡ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರಕಾರವು ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂಡಿ ಒಕ್ಕೂಟ ಗೆದ್ದು ಬಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ತಮಿಳುನಾಡು ಸರಕಾರದ ಮುಖ್ಯಸ್ಥ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದಾರೆ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ಆ.5 ರಿಂದ ಕರ್ನಾಟಕ ಸರಕಾರದ ವೈಫಲ್ಯಗಳನ್ನು ಮನಗಂಡು ಈ ರೀತಿ ಚುನಾವಣಾ ಪ್ರಣಾಳಿಕೆ ಹೊರಡಿಸಿದೆ. ಇದು ರಾಜ್ಯ ಸರಕಾರಕ್ಕೆ ಗೊತ್ತಿದೆಯೇ ಇಲ್ಲವೋ ಗೊತ್ತಿಲ್ಲ ಎಂದು ಅಶ್ವತ್ಥನಾರಾಯಣ ಅವರು ಟೀಕಿಸಿದರು.
ಕಾವೇರಿ ಐತೀರ್ಪು ಬಂದ ಬಳಿಕ ಬೆಂಗಳೂರಿನ ಕುಡಿಯುವ ನೀರು ಸಂಬಂಧ ಮತ್ತು 400 ಮೆ.ವಾ. ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ ಎಂದು ಗೊತ್ತಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದ ಮೇರೆಗೆ ನಮ್ಮ ಸರಕಾರ ಇದ್ದಾಗ ಒಂದು ಸಾಧ್ಯತಾ ವರದಿ (ಫೀಸಿಬಿಲಿಟಿ ರಿಪೋರ್ಟ್) ಸಲ್ಲಿಸಲು ಸೂಚಿಸಲಾಗಿತ್ತು. ಬಸವರಾಜ ಬೊಮ್ಮಾಯಿಯವರು 4-8-2018ರಲ್ಲಿ ಕೇಂದ್ರ ಜಲ ಆಯೋಗ ತಿಳಿಸಿದ ಬಳಿಕ ಸಾಧ್ಯತಾ ವರದಿ ನೀಡಿದ್ದರು. 2019ರಲ್ಲಿ ಮತ್ತೊಮ್ಮೆ 9 ಸಾವಿರ ಕೋಟಿ ವೆಚ್ಚದ ಪೂರ್ಣ ಪ್ರಮಾಣದ ಸವಿವರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ಹೇಳಿದರು.
ಬಿಜೆಪಿ ಸರಕಾರ ಇದ್ದಾಗ ಮೇಕೆದಾಟು ಯೋಜನೆ ಕುರಿತ ಬೆಳವಣಿಗೆ ಇದು. ಇದಾದ ಬಳಿಕ 1 ಸಾವಿರ ಕೋಟಿ ಹಣವನ್ನೂ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಸಂಬಂಧ ‘ನನ್ನ ನೀರು ನನ್ನ ಹಕ್ಕು’ ಎಂಬ ಪಾದಯಾತ್ರೆಯನ್ನು ನಡೆಸಿದ್ದರು. ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಿನ್ನೆಯ ಸ್ಟಾಲಿನ್ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ನಿಲುವೇನು ಎಂದು ತಿಳಿಸಿಲ್ಲ. ಕರ್ನಾಟಕದ ರೈತರ, ಕುಡಿಯುವ ನೀರಿನ ಪ್ರಶ್ನೆ ಇದು. ಮುಖ್ಯಮಂತ್ರಿಗಳ ನಿಲುವೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರವು ತಮಿಳುನಾಡು ಸರಕಾರ, ಸ್ಟಾಲಿನ್ ಹೇಳಿಕೆ ಕುರಿತು ತುಟಿ ಬಿಚ್ಚುತ್ತಿಲ್ಲ ಎಂದ ಅಶ್ವತ್ಥನಾರಾಯಣ ಅವರು ಸಿಎಂ, ಡಿಸಿಎಂ ನಿಲುವೇನು? ಅಥವಾ ನೀವೇನಾದರೂ ಈ ಪ್ರಣಾಳಿಕೆ ಬರೆದುಕೊಟ್ಟಿದ್ದೀರಾ? ಎಂದು ವ್ಯಂಗ್ಯವಾಗಿ ಪ್ರಶ್ನೆಯನ್ನು ಮುಂದಿಟ್ಟರು.
ರೈತರು ಮತ್ತು ಕರ್ನಾಟಕಕ್ಕೆ ದ್ರೋಹಿಗಳಾಗಿ ಸಿದ್ದರಾಮಯ್ಯನವರ ಮತ್ತು ಡಿ.ಕೆ.ಶಿವಕುಮಾರರ ನಡವಳಿಕೆಯನ್ನು ಗಮನಿಸಿದಾಗ ಇದು ಸ್ಟಾಲಿನ್ ಅವರಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದು ಅವರ ಬಾಯಿಗೆ ಇಟ್ಟಂತೆ ಆಗಿದೆ. ಕರ್ನಾಟಕಕ್ಕೆ ಮಾಡಿದ ದ್ರೋಹ ಇದು. ಮೇಕೆದಾಟು ಕುರಿತು ನಿಲುವನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.

