ಬಸವನಬಾಗೇವಾಡಿ: ಮಾ.೨೫ ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಜೊತೆಗೆ ನಕಲು ಮುಕ್ತವಾಗಿ ನಡೆಯುವಂತೆ ಎಲ್ಲ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.
ಪಟ್ಟಣದ ಸೇವಾದಳದ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಮೊದಲ ಮೈಲಿಗಲ್ಲು. ಪರೀಕ್ಷೆಯನ್ನು ಯಾವುದೇ ಆತಂಕ, ಒತ್ತಡವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವಂತಾಗಬೇಕು. ಮಕ್ಕಳು ಒತ್ತಡ ರಹಿತ, ಸಂತಸದಿಂದ ಪರೀಕ್ಷೆಯನ್ನು ಬರೆಯುವಂತೆ ಪರೀಕ್ಷಾ ಕೇಂದ್ರವನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಕಾಲಿಕವಾಗಿ ಹಾಜರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಾವುದೇ ಲೋಪ-ದೋಷ ಉಂಟಾಗದಂತೆ ನಡೆಸಬೇಕೆಂದು ಸೂಚಿಸಿದ ಅವರು, ಪರೀಕ್ಷಾ ಕರ್ತವ್ಯದಲ್ಲಿ ಯಾರೂ ತಮ್ಮ ಸಂಬಂಧಗಳನ್ನು ಪರಿಗಣಿಸಬಾರದು. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು. ಯಾರಾದರೂ ಪರೀಕ್ಷೆಯಲ್ಲಿ ಸಹಾಯ ಮಾಡಲು ಹೋದರೆ ಅಂತಹವರ ಮೇಲೆ ನಿರ್ದಾಕ್ಷಣಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿದರು.
ಪರೀಕ್ಷೆ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ವ್ಯವಸ್ಥೆ ಇರುವಂತೆ ಮಾಡಬೇಕು. ಪರೀಕ್ಷಾ ಕರ್ತವ್ಯದಲ್ಲಿ ನಿಯುಕ್ತರಾದ ಎಲ್ಲ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಂದು ತಮ್ಮ ತಮ್ಮ ಕರ್ತವ್ಯವನ್ನು ಸಕಾಲಿಕವಾಗಿ ನಿರ್ವಹಿಸಬೇಕೆಂದ ಅವರು, ಪರೀಕ್ಷಾ ಮಾರ್ಗದರ್ಶಿಗಳ ಕುರಿತು ಹೇಳಿದರು.
ಸಭೆಯಲ್ಲಿ ಕ್ಷೇತ್ರಸಮನ್ವಾಧಿಕಾರಿ ಪಿ.ಯು.ರಾಠೋಡ, ತಾಪಂ ಇಲಾಖೆಯ ಆರ್.ಪಿ.ಪಾಟೀಲ, ಆರೋಗ್ಯ ಇಲಾಖೆಯ ಎಸ್.ಎಸ್.ಮೇಟಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ, ನೋಡಲ್ ಅಧಿಕಾರಿ ಟಿ.ಎ. ಯರಗುದರಿ, ಪೊಲೀಸ್ ಇಲಾಖೆಯ ವಿಜಯಕುಮಾರ ದುದಗಿ, ಅಖಂಡ ತಾಲೂಕಿನ ೧೮ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಉಪಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಜಾಗೃತದಳ, ಮಾರ್ಗಾಧಿಕಾರಿಗಳು ಇತರರು ಇದ್ದರು. ಎಸ್.ಪಿ.ಮಡಿಕೇಶ್ವರ ಸ್ವಾಗತಿಸಿದರು. ಉಪಪ್ರಾಚಾರ್ಯ ರಮೇಶ ಪೂಜಾರಿ ನಿರೂಪಿಸಿದರು. ಎಸ್.ಬಿ.ಹನಗಂಡಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

