ಬರದಿಂದ ಅಸ್ಕಿ, ಬೆಕಿನಾಳ, ಹುಣಶ್ಯಾಳ, ಕುದುರಗೂಂಡ ಕೆರೆಗಳು ಖಾಲಿ
ವಿಜಯಪುರ: ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿ ಕೆರೆಗಳೆಲ್ಲ ಬತ್ತಿದ್ದು, ಕೂಡಲೇ ಕಲಕೇರಿ ಸುತ್ತಮುತ್ತಲಿನ ಭಾಗದ ಅಸ್ಕಿ, ಬೆಕಿನಾಳ, ಹುಣಶ್ಯಾಳ, ಕುದುರಗೂಂಡ ಕೆರೆಗಳನ್ನು ತುಂಬಿಸಬೇಕು ಎಂದು ಹುಣಶ್ಯಾಳ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಹಾಗೂ ಹುಣಶ್ಯಾಳ ಜಿಲ್ಲಾ ಪಂಚಾಯಿತಿ ಸೇವಾ ಆಕಾಂಕ್ಷಿ ಶ್ರೀಮತಿ ಬಂಗಾರೆಮ್ಮ ಮಾನಪ್ಪ ದೊಡಮನಿ ಆಗ್ರಹಿಸಿದರು.
ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಬರಗಾಲಪೀಡಿತ ಜಿಲ್ಲೆಯ ಜನರ ನೀರಿನ ಬವಣೆಗೆ ಸರ್ಕಾರ ಕೆರೆತುಂಬಿಸುವ ಯೋಜನೆಗಳಿಗೆ ಚಾಲನೆ ನೀಡಿತ್ತು. ಕೆರೆಗಳನ್ನು ತುಂಬಿಸುವ ಯೋಜನೆ ಆರಂಭಿಸಬೇಕು ಎಂದು ಕಾರ್ಯಾದೇಶ ನೀಡಿದ್ದರೂ ಶೇ ೯೫ರಷ್ಟು ಕಾಮಗಾರಿ ನಿಗದಿತ ಅವಧಿಯಲ್ಲಿ ನಡೆಯದೇ ಯೋಜನೆ ವಿಳಂಬ ಗತಿಯಲ್ಲಿ ಸಾಗಿರುವುದರಿಂದ ಗ್ರಾಮೀಣ ಕೆರೆ-ಕಟ್ಟೆಗಳು ಒಣಗಿ, ಕುಡಿವ ನೀರಿಗೆ ಜಾನುವಾರುಗಳಿಗೆ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ.
ಕಲಕೇರಿ ಸುತ್ತಮುತ್ತಲಿನ ಭಾಗದ ಅಸ್ಕಿ, ಬೆಕಿನಾಳ, ಹುಣಶ್ಯಾಳ, ಕುದುರೆಗುಂಡ ಕೆರೆಗಳನ್ನು ತುಂಬಿಸುವುದರಿಂದ ಈ ಭಾಗದ ಸುಮಾರು ೨೦ ಹಳ್ಳಿಗಳ ಜನಜಾನುವಾರುಗಳ ಕುಡಿಯುವ ನೀರಿಗೆ ಮತ್ತು ರೈತರ ಕೃಷಿ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಸುಧಾರಿಸುತ್ತದೆ.
ವಿಜಯಪುರ ಜಿಲ್ಲೆ ಪಂಚ ನದಿಗಳ ನಾಡು ಆದರೂ ಕೆರೆಗಳಿಗೆ ಹನಿ ನೀರು ಬಾರದೇ ಸತತ ಬರಗಾಲದ ಪ್ರದೇಶ ಎಂಬ ಹಣೆಪಟ್ಟಿ ಕಾಯಂ ಆಗುತ್ತಿದೆ.
ಆದುದರಿಂದ ಜನ ಜಾನುವಾರುಗಳ ಕುಡಿವ ನೀರಿಗೆ, ಕೃಷಿಗೆ ಮತ್ತಷ್ಟು ತೊಂದರೆ ಉಂಟಾಗುವ ಮೊದಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

