ಆರ್‌ಸಿಬಿ ಮಹಿಳಾ ತಂಡದಲ್ಲಿ ಕಮಾಲ್ ಮಾಡಿದ ಕಲಬುರಗಿ ಜಿಲ್ಲೆಯ ಬೆಡಗಿ
– ಇಲಿಯಾಸ್ ಪಟೇಲ್, ಬಳಗಾನೂರ
ಯಾದಗಿರಿ: ಕಲಬುರಗಿ ಜಿಲ್ಲೆಯ ಪ್ರತಿಭೆ ಶ್ರೇಯಾಂಕ ಪಾಟೀಲ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚುವ ಮೂಲಕ ಕನ್ನಡಿಗರ ನೆಚ್ಚಿನ ಆಟಗಾರ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.
ಸದ್ಯ ದೇಶದಲ್ಲಿ ಮಹಿಳಾ ಐಪಿಎಲ್ ನದ್ದೇ ಹವಾ ನಡೆಯುತ್ತಿದೆ. ಅದರಲ್ಲೂ ಆರ್.ಸಿ.ಬಿ ಫೈನಲ್‌ಗೆ ಎಂಟ್ರಿ ಕೊಟ್ಟು ಇನ್ನಷ್ಟು ಕ್ರೇಜ್ ದ್ವಿಗುಣವಾಗಿದೆ. ಇದರ ಬೆನ್ನಲೇ ಕಲಬುರಗಿಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರವೊಂದು ತಿಳಿದು ಎಲ್ಲರಲ್ಲೂ ಸಂತಸ ಮೂಡಿದೆ.
ಹೌದು, ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಆಗೊಮ್ಮೆ ಈಗೊಮ್ಮೆ ಈ ಭಾಗದ ಹೆಸರನ್ನು ಹೆಸರು ಪ್ರಜ್ವಲಿಸುವಂತೆ ಮಾಡುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಟೀಮ್ ಇಂಡಿಯಾ ಮಹಿಳಾ ತಂಡವನ್ನು ಪ್ರತಿನಿಧಿರುವ ಆಲ್‌ರೌಂಡರ್ ಆಟಗಾರ್ತಿ, ಕನ್ನಡತಿ ಶ್ರೀಯಾಂಕ ಪಾಟೀಲ್ ಅವರ ಮೂಲ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮ ಎನ್ನುವುದು ಜಿಲ್ಲೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅವರ ತಾತ ಅಮೃತಗೌಡ ಹಾಗೂ ತಂದೆ ರಾಜೇಶ್ ಪಾಟೀಲ್ ಅವರ ಹುಟ್ಟೂರು ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮವಾಗಿದೆ. ಆದರೆ, ಶ್ರೇಯಾಂಕ್ ಪಾಟೀಲ್ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಲ್ಲಿಯೇ. ಆದರೂ, ಕಲಬುರಗಿಯ ನಂಟು ಅವರನ್ನು ಬಿಟ್ಟಿಲ್ಲ. ವಿದ್ಯಾನಿಕೇತನ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿರುವ ಶ್ರೇಯಾಂಕ್ ಸದ್ಯ ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಲೇ ಟೀಮ್ ಇಂಡಿಯಾ, ಆರ್‌ಸಿಬಿ ಮಹಿಳಾ ತಂಡದಲ್ಲಿ ತಮ್ಮ ಅತ್ಯುತ್ತಮ ಆಟದಿಂದ ಮಿಂಚು ಹರಿಸುತ್ತಿದ್ದಾರೆ.
ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದಲ್ಲಿ ತಮ್ಮ ಆಲ್ ರೌಂಡರ್ ಆಟದ ಮೂಲಕವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಶ್ರೇಯಾಂಕ ಪಾಟೀಲ್ ಮೂಲತಃ ಕಲಬುರಗಿ ಜಿಲ್ಲೆಯವರಾಗಿದ್ದು, ಈ ಸುದ್ದಿ ವೈರಲ್ ಆಗುತ್ತಿದಂತೆ ಜಿಲ್ಲೆಯ ಕ್ರಿಕೆಟ್ ಕನಸು ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಡಗರ, ಸಂಭ್ರಮ ಮನೆ ಮಾಡಿದೆ. ನಮ್ಮಮನೆ ‘ರಾಜಕುಮಾರಿ’ ಕ್ರಿಕೆಟ್ ದುನಿಯಾದಲ್ಲಿ ರಾರಾಜಿಸುತ್ತಿರುವುದು ನಮ್ಮ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿಕೊಂಡು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಇನ್ಸ್ಟಾ ಗ್ರಾಮ್‌ನಲ್ಲಿ ಮಿಲಿಯನ್ಸ್ ಫಾಲೋವರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಡಬ್ಲ್ಯೂಪಿಎಲ್ ನಲ್ಲಿ ಕಪ್ ಗೆಲ್ಲುತ್ತೆದಂತೆ ಕಲಬುರಗಿ ಹುಡುಗಿಯಾಗಿರುವ ಶ್ರೇಯಾಂಕಾ ಪಾಟೀಲ್ ಅವರ ಖದರೇ ಬದಲಾಗಿದೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಫಾಲ್ಲೋರ್ಸ್ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಕಲಬುರಗಿ ಕುವರಿ ಶ್ರೇಯಾಂಕಾ ಪಾಟೀಲ್ ಇನ್ಸ್ಟಾಗ್ರಾಮ್ ನಲ್ಲಿ 2.3 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಶ್ರೇಯಾಂಕಳದ್ದೇ ಪೋಸ್ಟ್ ಓಡಾಡುತ್ತಿವೆ.

ರಾಜಕೀಯ ನಾಯಕರಿಂದ ಮೆಚ್ಚುಗೆ
ಕಲಬುರಗಿ ಮೂಲದ ಶ್ರೇಯಾಂಕ ಪಾಟೀಲ್ ಅವರ ಕ್ರಿಕೆಟ್ ಸಾಧನೆ ಜಿಲ್ಲೆಯ ರಾಜಕಾರಣಿಗಳು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ, ಶುಭಕೋರಿದ್ದಾರೆ.
ಇನ್ನು ಜೇವರ್ಗಿ ತಾಲೂಕಿನವರೇ ಆದ ಶ್ರೇಯಾಂಕ ಅವರಿಗೆ ಜೇವರ್ಗಿ ಶಾಸಕ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಸೇರಿ ಅನೇಕರು ಶುಭಹಾರೈಸುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಇದಲ್ಲದೇ,ರಾಜ್ಯದ ಅನೇಕ ರಾಜಕಾರಣಿಗಳು ಕನ್ನಡತಿಯ ಈ ಸಾಧನೆಗೆ ಮೆಚ್ಚುಗೆ ತೋರಿದ್ದಾರೆ.

