ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಹಿರೇಮಠದಲ್ಲಿ ಐದನೇ ವರ್ಷದ ನವರಾತ್ರಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಸದೃಢ ಸಮಾಜ ನಿರ್ಮಾಣಕ್ಕಾಗಿ ಮಾ.23 ರಿಂದ ನವರಾತ್ರಿ ಉತ್ಸವದ ವರೆಗೆ ತಾಲೂಕಿನಲ್ಲಿ ಜನಜಾಗೃತಿ ಸೇವಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ನಾಗೂರ, ಇವಣಗಿ, ಟಕ್ಕಳಕಿ, ಹಂಗರಗಿ, ಕೊಡಗಾನೂರ, ಕಾನ್ನಾಳ ಸೇರಿದಂತೆ 30 ಗ್ರಾಮಗಳಲ್ಲಿ ಜನಜಾಗೃತಿ ಸೇವಾ ಯಾತ್ರೆ ನಡೆಯಲಿದೆ. ಪ್ರತಿ ಗ್ರಾಮದಲ್ಲಿ ಐದು ದಿನಗಳವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಯಾತ್ರೆ ತೆರಳುವ ಗ್ರಾಮದಲ್ಲಿ ಬೆಳಗ್ಗೆ ಪ್ರತಿ ಮನೆಗಳಿಗೆ ತೆರಳಿ “ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ” ಸಂದೇಶದೊಂದಿಗೆ ಸದ್ಬಾವನಾ ಯಾತ್ರೆ ಕೈಗೊಂಡು ಮನೆಯ ಎಲ್ಲ ಸದಸ್ಯರಿಗೆ ರುದ್ರಾಕ್ಷಿ ಧಾರಣೆ ಮಾಡಲಾಗುವುದು. ಸಮಾಜ ಸೇವಾ ಕಾರ್ಯಕರ್ತರೊಂದಿಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಗಿಡ ನೆಡಿ, ಮರ ಬೆಳೆಸಿ, ಪರಿಸರ ಉಳಿಸಿ ಅಭಿಯಾನದ ಮೂಲಕ ಪರಿಸರದ ಮಹತ್ವ ತಿಳಿಸಿಕೊಡಲಾಗುವುದು. ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುವುದು. ಪ್ರತಿದಿನ ಸಂಜೆ ಶ್ರೇಷ್ಠ ಗವಾಯಿಗಳಿಂದ ಸಂಗೀತ ಗಾಯನ ಕಾರ್ಯಕ್ರಮ ಹಾಗೂ ಶಿವಪ್ರಸಾದ ದೇವರಿಂದ ಶಿವಶರಣರ ಜೀವನ ದರ್ಶನ ಕುರಿತ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಮಾ.23 ರಂದು ಜನಜಾಗೃತಿ ಸೇವಾ ಯಾತ್ರೆಗೆ ತಾಲೂಕಿನ ನಾಗೂರ ಗ್ರಾಮದಲ್ಲಿ ಚಾಲನೆ ನೀಡಲಾಗುವುದು. ಗ್ರಾಮದಲ್ಲಿ ಮಾ.27ರ ವರೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಆನಂದ ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
