ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಶಿಕ್ಷಣ ಇಲಾಖೆ ವಿರುದ್ದ ಕಿಡಿ
ಸಿಂದಗಿ: ಶಿಕ್ಷಣ ವಲಯದಲ್ಲಿ ಯಾವುದೇ ಚರ್ಚೆ ಮಾಡದೇ ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ೩ ಮುಖ್ಯ ಪರೀಕ್ಷೆಗಳನ್ನಾಗಿ ಮಾಡಿರುವ ಕಾರ್ಯದಿಂದ ಶಿಕ್ಷಕ ವರ್ಗ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪೂರ ಶಿಕ್ಷಣ ಇಲಾಖೆಯ ವಿರುದ್ದ ಕಿಡಿ ಕಾರಿದರು.
ಅವರು ಬುಧವಾರ ತಮ್ಮ ಸ್ವಗೃಹದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವರು ೩ಮುಖ್ಯ ಪರೀಕ್ಷೆಗಳನ್ನು ಮಾಡಲು ನಿರ್ಧಾರ ಮಕ್ಕಳ ಹಿತವನ್ನು ಕಾಪಾಡುವಂತದ್ದಾಗಿದ್ದರೆ ಶಿಕ್ಷಕರ ಹಿತ ಕಾಪಾಡುವವರು ಯಾರು ಎಂದು ಪ್ರಶ್ನಿಸಿದ ಅವರು ೫,೮,೯ ಮಕ್ಕಳ ಪಬ್ಲಿಕ್ ಪರೀಕ್ಷೆಗಳು ಕೋರ್ಟ ಮೆಟ್ಟಿಲೇರಿರುವುದರಿಂದ ಇನ್ನೂ ಸೂಕ್ತವಾದ ಯಾವುದೇ ಆದೇಶ ಬಂದಿಲ್ಲ. ಇದರಿಂದ ಮಕ್ಕಳು ಆತಂಕದ ಸ್ಥಿತಿಯಲ್ಲಿದ್ದಾರೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬಿರುತ್ತಿದೆ. ಹೀಗಾದರೆ ನಮ್ಮ ಮಕ್ಕಳ ಸ್ಥಿತಿ ಏನು ಎಂಬ ಚಿಂತೆಯಲ್ಲಿ ಪಾಲಕರಿದ್ದಾರೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ವೆಬ್ ಕಾಸ್ಟೀಂಗ್ ಅಳವಡಿಸಬೇಕು ಎಂದು ಇಲಾಖೆ ಯಡವಟ್ಟು ಆದೇಶ ಮಾಡಿರುವ ಹಿನ್ನಲೆಯಲ್ಲಿ ಶಿಕ್ಷಕ ವರ್ಗಕ್ಕೆ ತೊಂದರೆ ಉಂಟಾಗಿದೆ. ತಂತ್ರಜ್ಞಾನದ ಮಾಹಿತಿಯ ಕೊರತೆ ಹೆಚ್ಚು ಶಿಕ್ಷಕರಿಗೆ ಮತ್ತು ಶಿಕ್ಷಣ ಇಲಾಖೆಯ ಕೆಳ ಮಟ್ಟದ ಅಧಿಕಾರಿಗಳಿಗೆ ಇಲ್ಲದೇ ಇರುವುದರಿಂದ ವೆಬ್ ಕಾಸ್ಟೀಂಗ್ ಅಳವಡಿಕೆಯಲ್ಲಿ ಶಿಕ್ಷಕ ವರ್ಗ ಒದ್ದಾಡುತ್ತಿದ್ದಾರೆ. ಪರೀಕ್ಷಾ ಸಮಯದಲ್ಲಿ ಏನಾದರೂ ಲೋಪ ದೋಷಗಳಾದರೆ ಇದಕ್ಕೆ ಶಿಕ್ಷಕರೇ ಹೊಣೆಯಾಗುತ್ತಾರೆ. ಪರೀಕ್ಷೆಯ ಕಟ್ಟು ನಿಟ್ಟಿನ ಕ್ರಮ ಇಲಾಖೆ ಕೈಗೊಳ್ಳಲಿ ಆದರೆ ಇದನ್ನು ಶಾಲಾ ಪ್ರಾರಂಭದ ಸಮಯದಲ್ಲಿ ಆದೇಶ ಮಾಡಿದ್ದಲ್ಲಿ ಶಿಕ್ಷಕ ವೃಂದ ತರಬೇತಿಯನ್ನು ಪಡೆಯುತ್ತಿದ್ದರು. ಏಕಾಏಕಿ ಪರೀಕ್ಷಾ ಸಮಯದಲ್ಲಿ ಈ ಆದೇಶ ಶಿಕ್ಷಕರಿಗೆ ಸಮಸ್ಯೆಯಾಗಿದೆ.
ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನದೇ ಆದ ಹೆಸರು ಮಾಡಿದೆ ಆದರೆ ಈ ಬಾರಿ ದ್ವೀತಿಯ ಪಿಯುಸಿ ಮೌಲ್ಯಮಾಪನದಲ್ಲಿ ಕೆಲವು ಹಿರಿಯ ಉಪನ್ಯಾಸಕರಿಗೆ ಸಹಾಯಕ ಮೌಲ್ಯಮಾಪಕರನ್ನಾಗಿ ಮತ್ತು ಕಿರಿಯ ಉಪನ್ಯಾಸಕರಿಗೆ ಉಪ ಮೌಲ್ಯಮಾಪಕರಾಗಿ ನೇಮಕ ಮಾಡಿ ಇಲಾಖೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ಪ್ರಸ್ತುತ ಈ ಬಾರಿ ಲೋಕಸಭೆಯ ಚುಣಾವಣೆ ಇರುವುದರಿಂದ ಶಿಕ್ಷಕರು ಪರೀಕ್ಷೆ, ಮೌಲ್ಯಮಾಪನ ಮತ್ತು ಚುನಾವಣಾ ಕಾರ್ಯ ಎಲ್ಲವನ್ನು ಮಾಡುತ್ತಿದ್ದಾರೆ. ಪರೀಕ್ಷಾ ಕಾರ್ಯ ಮಾಡುತ್ತಿರುವ ಶಿಕ್ಷಕರಿಗೆ ಚುನಾವಣಾ ಕಾರ್ಯಕ್ಕೆ ವಿನಾಯ್ತಿ ನೀಡಬೇಕು. ಯಾವುದೇ ಶಿಕ್ಷಕರಿಗೆ ತೊಂದರೆ ಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮೌಲ್ಯಮಾಪನ ಸಂದರ್ಭದಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಅರುಣ ಶಹಾಪೂರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

