ನಬಿರೋಷನ್ ಪ್ರಕಾಶನದಿಂದ ವಿಶ್ವ ಮಹಿಳಾ ದಿನಾಚರಣೆ | ವೀರನಾರಿ ಪ್ರಶಸ್ತಿ ಪ್ರಧಾನ | ಮಹಿಳಾ ಕವಿಗೋಷ್ಠಿ
ಸಿಂದಗಿ: ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಮಹೋನ್ನತ ಸಾಧನೆಗೈದು, ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡಿ ಭಾರತದ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಎಂದು ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಅವರು ಹೇಳಿದರು.
ಪಟ್ಟಣದ ಲೊಯೋಲ ಶಾಲೆಯಲ್ಲಿ ನಬಿರೋಷನ್ ಪ್ರಕಾಶನ, ಬೋರಗಿ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ವೀರನಾರಿ ಪ್ರಶಸ್ತಿ ಪ್ರಧಾನ ಹಾಗೂ ಮಹಿಳಾ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉಜ್ವಲ ಭವಿಷ್ಯ ರೂಪಿಸುವಲ್ಲಿ ಮತ್ತು ಕುಟುಂಬವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಅಪಾರ ಎಂದರು.
ಈ ವೇಳೆ ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಅಂದು ಹೆಣ್ಣು ಹುಟ್ಟಿದರೆ ಹೊರೆ, ಗಂಡು ಹುಟ್ಟಿದರೆ ದೊರೆ, ಹೆಣ್ಣು ಹುಣ್ಣು ಗಂಡು ಹೊನ್ನು ಎನ್ನುತ್ತಿದ್ದರು. ಆದರೆ ಇಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಮಹಿಳೆಯರು ಅಸಮಾನತೆಯ ನರಳಾಟದಿಂದ ಹೊರ ಬಂದು ಸಮಾನತೆಯೊಂದಿಗೆ ಪ್ರಗತಿಯ ಪಥದತ್ತ ಸಾಗುತ್ತ, ಸಮಾಜದ ಬಹು ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪ-ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಆರಕ್ಷಕ ಮೌಲಾಲಿ ಆಲಗೂರ ಪ್ರಾಸ್ತಾವಿಕ ಮಾತನಾಡಿದರು.
ಕನ್ನಡ ಝೀ ವಾಹಿನಿಯ ಸರಿಗಮಪ ಖ್ಯಾತಿಯ ಗಾಯಕಿ ಸಾಕ್ಷಿ ಹಿರೇಮಠ, ನಾಗರತ್ನ ಮನಗೂಳಿ, ಇಂದಿರಾಬಾಯಿ ಬಳಗಾನೂರ, ಸಬೀಯಾಬೇಗಂ ಮರ್ತೂರ, ಸುನಂದಾ ಯಂಪೂರೆ ಅವರಿಗೆ ವೀರನಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಕ್ಕಮಹಾದೇವಿ ವಿಶ್ವವಿದ್ಯಾಲಯ ೧೫ನೆಯ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಬಿ.ಎಸ್.ಡಬ್ಲ್ಯೂ ವಿಭಾಗ ವಿದ್ಯಾರ್ಥಿನಿ ಸುರೇಖಾ ಬಿರಾದಾರ, ಅಂತರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ರಿಜ್ವಾನಾ ಜಮಾದಾರ, ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ, ನೀಲಮ್ಮ ಗೌರ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಯತ್ರಿಯರು ಕವನ ವಾಚನ ಮಾಡಿದರು. ಚೇತನಗೌಡ ಬಿರಾದಾರ, ನಬಿಪಟೇಲ್ ಆಲಗೂರ, ಸಿ.ಸೋಫಿಯಾ ಫೆರೇರಾ, ಶಿಲ್ಪಾ ಪತ್ತಾರ, ಶಿಕ್ಷಕ ಸಿದ್ದಪ್ಪ, ಮಹಾಂತೇಶ ನೂಲಾನವರ ಸೇರಿದಂತೆ ಅನೇಕರು ಇದ್ದರು.

