ಅಫಜಲಪುರ ಸಂಪೂರ್ಣ ಸ್ಥಬ್ದ | ರಸ್ತೆ ತಡೆ | ಸಂಚಾರ ಅಸ್ತವ್ಯಸ್ತ | ಮುಂದುವರೆದ ಉಪವಾಸ ಸತ್ಯಾಗ್ರಹ
ಅಫಜಲಪುರ: ಭೀಮಾ ನದಿಗೆ ಮಹಾರಾಷ್ಟದ ಉಜನಿ ಜಲಾಶಯದಿಂದ ನೀರು ಬಿಡುಗಡೆಗೆ ಆಗ್ರಹಿಸಿ ಪಟ್ಟಣದಲ್ಲಿ ಶಿವಕುಮಾರ ನಾಟಿಕಾರ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಸತ್ಯಾಗ್ರಹ ೬ನೇ ದಿನವಾದ ಬುದವಾರ ಅಫಜಲಪುರ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿತ್ತು.
ಅಫಜಲಪುರ ಸಂಪೂರ್ಣವಾಗಿ ಬಂದ್ ಗೆ ಕರೆ ನೀಡಿದರಿಂದ ವಿವಿಧ ಮಠಗಳ ಮಠಾಧೀಶರು, ರೈತರು, ವ್ಯಾಪಾರಸ್ಥರು, ಮಹಿಳಾ ಸಂಘಟನೆ, ರೈತ ಸಂಘಟನೆ ಸೇರಿದಂತೆ ಪಕ್ಷಾತೀತವಾಗಿ ಎಲ್ಲರೂ ಬಂದ್ ನಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತ ಪಡಿಸಿದರು
ಆದ್ದರಿಂದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು, ಬಸ್ ಸಂಚಾರ ಬಂದ್ ನಿಂದಾಗಿ ಪ್ರಯಾಣಿಕರು ಪರದಾಡಿದರು. ವಿಜಯಪುರ ಮಾರ್ಗದ ಬಸ್ ಸಂಚಾರವನ್ನು ಕರಜಗಿ ಕ್ರಾಸ್ ನಲ್ಲಿಯೇ ಸ್ಥಗಿತಗೊಳಿಸಿದ ಪ್ರಯುಕ್ತ ಎರಡು ಕಿ ಮಿ ನಡೆದುಕೊಂಡು ಹೋಗುವಂತಾಗಿ ಮಹಿಳೆಯರು, ವೃದ್ದರು ಪರದಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ರಾಯಪ್ಪ ಹುಣಸಗಿ ಭೇಟಿ ನೀಡಿ ಭೀಮಾ ನದಿಗೆ ನೀರು ಹರಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಜಾಯಿಷಿ ನೀಡಲು ಮುಂದಾದಾದಾಗ ನದಿಗೆ ನೀರು ಬಿಡುವ ತನಕ ನಾವು ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದ ಘಟನೆ ನಡೆಯಿತು.
ಪ್ರತಿಭಟನೆ ಕುರಿತು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಮಾತನಾಡುತ್ತಾ ಉಜನಿ ಜಲಾಶಯದಿಂದ ಭೀಮಾ ನದಿಗೆ ಬಚಾವತ್ ತೀರ್ಪಿನ ಪ್ರಕಾರ ೧೫ ಟಿಎಂಸಿ ನೀರು ಮಹಾರಾಷ್ಟçದಿಂದ ಕರ್ನಾಟಕಕ್ಕೆ ಬರಬೇಕಾಗಿದೆ. ಆದರೆ ತೀರ್ಪು ಬಂದಾಗಿನಿಂದ ಇಲ್ಲಿಯವರೆಗೆ ತೀರ್ಪಿನ ಪ್ರಕಾರ ನೀರು ಹರಿದು ಬಂದಿಲ್ಲ. ಪ್ರವಾಹ ಬಂದಾಗ ಮಾತ್ರ ಭೀಮಾ ನದಿಗೆ ನೀರು ಹರಿಯುತ್ತದೆ. ಆದರೆ ಇಂತಹ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ನಮ್ಮ ಪಾಲಿನ ನೀರು ಬರುತ್ತಿಲ್ಲ. ಇದನ್ನು ಯಾವೊಬ್ಬ ರಾಜ್ಯದ ರಾಜಕಾರಣಿಯೂ ವಿಧಾಸಭೆಯಲ್ಲಿ ಧ್ವನಿ ಎತ್ತುವುದಿಲ್ಲ. ಮಹಾರಾಷ್ಟ್ರ ಸರ್ಕಾರದೊಂದಿಗೆ ಸಮಾಲೋಚನೆ ಮಾಡುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳ ತಂಡ ಉಜನಿ ಜಲಾಶಯಕ್ಕೆ ನಿಯೋಗ ಹೋಗಿ ನೀರಿನ ಪ್ರಮಾಣದ ಪರಿಶೀಲನೆ ಮಾಡಿಕೊಂಡು ಬರಬೇಕು. ಮಹಾರಾಷ್ಟ್ರ ರಾಜ್ಯದವರು ವಾಮಮಾರ್ಗದಿಂದ ಉಜನಿ ನೀರನ್ನು ಶಿನಾ ನದಿಗೆ ವರ್ಗಾಯಿಸಿಕೊಂಡು ನಮ್ಮ ಪಾಲಿನ ನೀರು ನಮಗೆ ಬಿಡದೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ನಿಯೋಗ ಹೋಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನು ಭೀಮಾ ನದಿ ಸಂಪೂರ್ಣವಾಗಿ ಬರಿದಾಗಿದ್ದರಿಂದ ಜನಸಾಮಾನ್ಯರು, ಜಾನುವಾರುಗಳಿಗೆ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಿದೆ. ಭೀಮಾ ನದಿಗೆ ತಾತ್ಕಾಲಿಕವಾಗಿ ಆಲಮಟ್ಟಿ, ನಾರಾಯಣಪೂರ ಜಲಾಶಯಗಳಿಂದ ೨ ಟಿಎಂಸಿ ನೀರು ಹರಿಸಿ ಬೆಸಿಗೆಯ ಬವಣೆ ತಪ್ಪಿಸುವ ಕೆಲಸ ಶೀಘ್ರದಲ್ಲಿ ಆಗಬೇಕು ಎಂದು ಆಗ್ರಹಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡುತ್ತಾ, ನಾವು ಈಗಾಗಲೇ ಉಜನಿ ಜಲಾಶಯದಿಂದ ನಮ್ಮ ಪಾಲಿನ ನೀರು ಪಡೆದುಕೊಳ್ಳಲು ಸೊಲಾಪುರದ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತುಕತೆಯಲ್ಲಿದ್ದೇವೆ. ಸಧ್ಯ ಭೀಮೆಗೆ ನೀರು ಹರಿಸುವ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದ ನೀರನ್ನು ಬಳಗಾನೂರ ಕಾಲುವೆಯಿಂದ ಭೀಮಾ ನದಿಗೆ ೨ ಟಿಎಂಸಿ ನೀರು ಹರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು ಎರಡು ದಿನಗಳಲ್ಲಿ ನೀರು ಭೀಮಾ ನದಿಗೆ ತಲುಪಲಿದೆ. ನೀವೆಲ್ಲಾ ಶಾಂತರೀತಿಯಿಂದ ಸತ್ಯಾಗ್ರಹ ಹಮ್ಮಿಕೊಂಡಿದ್ದೀರಿ. ಎರಡು ದಿನಗಳಲ್ಲಿ ನೀರು ಭೀಮಾ ನದಿಗೆ ಹರಿಯಲಿದ್ದು, ನೀವು ಉಪವಾಸ ಸತ್ಯಾಗ್ರಹ ಕೈಬಿಡಬೇಕೆಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿಗಳ ಮನವಿಯನ್ನು ಹೋರಾಟಗಾರರು ನಯವಾಗಿ ತಿರಸ್ಕರಿಸಿ ನದಿಗೆ ನೀರು ಬರುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಸತ್ಯಾಗ್ರಹಕ್ಕೆ ಪಟ್ಟಣದ ವರ್ತಕರು, ವ್ಯಾಫಾರಿಗಳು ಬೆಂಬಲ ಸೂಚಿಸಿ ಪಟ್ಟಣ ಬಂದ್ ಮಾಡಿದರು.
ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳು, ಚಿನ್ಮಯಗಿರಿಯ ವೀರಮಹಾಂತ ಶಿವಾಚಾರ್ಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಕುಮಸಗಿಯ ಶಿವಾನಂದ ಶಿವಾಚಾರ್ಯರು, ಅಳ್ಳಗಿ, ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಸಂತೋಶ್ರೀ ಕಾಳೆ, ಅವ್ವಣ್ಣ ಮ್ಯಾಕೇರಿ, ಪಪ್ಪು ಪಟೇಲ, ಚಂದು ದೇಸಾಯಿ, ಭೀಮರಾವ ಗೌರ, ಬಾಬುರಾವ ಜಮಾದಾರ, ರಾಜು ಚವ್ಹಾಣ, ಶ್ರೀಮಂತ ಅಂಜುಟಗಿ, ವಿಜಯಕುಮಾರ ಅರಳಗುಂಡಗಿ, ಪ್ರಭಾವತಿ ಮೇತ್ರಿ, ಸಂತೋಷ ದಾಮಾ, ಮಕ್ಬೂಲ್ ಪಟೇಲ್, ರಾಣಿ ಬುಕ್ಕೇಗಾರ, ಪ್ರತಿಭಾ ಮಹಿಂದ್ರಕರ, ಸದ್ದಾಂ ನಾಕೇದಾರ, ಅಮೂಲ ಗಾಯಕವಾಡ, ಮಹಾರಾಯ ಅಗಸಿ, ಶೈಲೇಶ ಗುಣಾರಿ, ಮಹಾದೇವ ಬಂಕಲಗಿ, ಮಾಂತು ಬಳೂಂಡಗಿ, ಭಗವಂತ ವಗ್ಗೆ ಸೇರಿದಂತೆ ಅನೇಕರು ಇದ್ದರು.

