“ವೀಣಾಂತರಂಗ”ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಅದೊಂದು ಮದುವೆ ಸಮಾರಂಭ. ವಧು ವರರಿಬ್ಬರೂ ಈ ಕಾರ್ಯಕ್ರಮಕ್ಕೆ ಆ ಲೇಖಕಿಯನ್ನು ವಿಶೇಷವಾಗಿ ಪತ್ರ ಮುಖೇನ ಆಹ್ವಾನ ನೀಡಿ ಬರಲೇಬೇಕೆಂದು ಒತ್ತಾಯಿಸಿದ್ದರು. ತಾನು ಮದುವೆಯಾಗಲಿರುವ ವಧು ತೊನ್ನು ರೋಗಕ್ಕೆ ಗುರಿಯಾಗಿದ್ದು ಮುಂದಿನ ಭವಿಷ್ಯ ಹೇಗೆ ಎಂದು ಕಳವಳಗೊಂಡ ವರ ಮದುವೆಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದು, ಕೊನೆಗೆ ಆ ಲೇಖಕಿಯ ‘ಮಹಾಶ್ವೇತೆ’ ಕಾದಂಬರಿಯನ್ನು ಓದಿ ಮನಃಪರಿವರ್ತನೆಗೊಂಡು, ನಿಶ್ಚಿತ ವಧುವನ್ನು ವಿನಾಕಾರಣ ನೋಯಿಸಿದುದಕ್ಕೆ ಕ್ಷಮೆ ಕೇಳಿ ಮದುವೆಯ ಮೂಲಕ ಮತ್ತೆ ಒಂದಾದ. ವಧು ವರರು ಈ ಮದುವೆಗೆ ಕಾರಣವೇ ತಾವು ಎಂದು ಆ ಲೇಖಕಿಗೆ ಹೇಳಿ ಆಕೆಯ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದರು. ಅಷ್ಟು ಶಕ್ತಿ ಆಕೆಯ ಬರವಣಿಗೆಗೆ ಇದೆ.
ರಾಜ್ಯದ ಗಡಿ ಭಾಗದಲ್ಲಿ ಒಂದು ಅಪ್ಯಾಯಮಾನವಾದ ಸಮಾರಂಭ. ದೇವದಾಸಿಯರಾಗಿದ್ದ ಸಾವಿರಾರು ಮಹಿಳೆಯರ ಪುನರ್ವಸತಿಯ ನಂತರದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ದೇವದಾಸಿಯರು ತಮ್ಮ ಪ್ರೀತಿಯ ದ್ಯೋತಕವಾಗಿ ಸೀರೆಯಿಂದ ತಯಾರು ಮಾಡಿದ ಕೌದಿಯನ್ನು (ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ವಿಶಿಷ್ಟವಾದ ಹಾಸಿಗೆ ಮತ್ತು ಹೊದ್ದಿಕೆಯಾಗಿ ಬಳಸಲ್ಪಡುವ ಸೀರೆ ಮತ್ತಿತರ ವಸ್ತ್ರಗಳಿಂದ ತಯಾರಾದ ಕೈ ಹೊಲಿಗೆಯ ಹೊದಿಕೆ) ಪುನರ್ವಸತಿ ಕಾರ್ಯಕ್ರಮದ ರೂವಾರಿಯಾದ ಆಕೆಗೆ ನೀಡಿದರು. ಆ ಕೌದಿಯಲ್ಲಿ ಪ್ರತಿಯೊಬ್ಬ ದೇವದಾಸಿಯು ಕೂಡ ಒಂದೊಂದು ಹೊಲಿಗೆಯನ್ನು ಹಾಕಿದ್ದು ಸುಮಾರು 3000 ಹೊಲಿಗೆಗಳಿಂದ ಕೂಡಿದ ಆ ಕೌದಿಯನ್ನು ತುಂಬ ಪ್ರೀತಿಯಿಂದ ಸ್ವೀಕರಿಸಿದ ಲೇಖಕಿ ‘ದ ತ್ರೀ ಥೌಸಂಡ್ ಸ್ಟಿಚಸ್’ ಎಂಬ ಕಾದಂಬರಿಯನ್ನೇ ಬರೆದರು.
ವರ್ಷದ ಕೆಲ ದಿನಗಳನ್ನು ಬೆಂಗಳೂರಿನ ದೊಡ್ಡ ದೇವಸ್ಥಾನ ಒಂದರಲ್ಲಿ ತರಕಾರಿಗಳನ್ನು ವಿಂಗಡಿಸಿ ಅಡುಗೆ ಮನೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡುವ ಸೇವಾ ಮನೋಭಾವದ ಮಹಿಳೆ.
ಕರೋನಾ ಸಮಯದಲ್ಲಿ ಅವಿಶ್ರಾಂತವಾಗಿ ತನ್ನ ಮೇಲ್ವಿಚಾರಣೆಯಲ್ಲಿ ಸಂಸ್ಥೆಯ ಪ್ರತಿಷ್ಠಾನದಿಂದ ಕೊಡ ಮಾಡುವ ಅವಶ್ಯಕತೆ ಸಾಮಗ್ರಿಗಳ ಕಿಟ್ ಗಳನ್ನು ತಾನೇ ಖುದ್ದಾಗಿ ಜೋಡಿಸಿದ ಮಾತೃ ಹೃದಯ
ದಶಕಗಳ ಹಿಂದೆಯೇ ಇಂಜಿನಿಯರಿಂಗ್ ಪದವೀಧರೆಯಾಗಿ, ಜಗತ್ತಿನ ಅತಿ ದೊಡ್ಡ ಸಾಫ್ಟವೇರ್ ಕಂಪನಿಯನ್ನು ಹುಟ್ಟು ಹಾಕಿದ ಪತಿಗೆ ಬೆನ್ನೆಲುಬಾಗಿ ನಿಂತ ಪತ್ನಿ.
ತಮ್ಮ ಸಂಸ್ಥೆಯ ಪ್ರತಿಷ್ಠಾನದ ಮೂಲಕ ಇಡೀ ಭಾರತ ದೇಶದ ಹಲವೆಡೆಗಳಲ್ಲಿ ಮತ್ತು ಪಕ್ಕದ ರಾಷ್ಟ್ರಗಳಲ್ಲಿ ಭೂಕಂಪ, ನೆರೆಹಾವಳಿ, ಸುನಾಮಿಯಂತಹ ಪ್ರಾಕೃತಿಕ ಅವಘಡಗಳಲ್ಲಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡ ಸಾವಿರಾರು ನಿರ್ಗತಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ ಮಹಾತಾಯಿ.
ಹಲವಾರು ದೇವಸ್ಥಾನಗಳಿಗೆ ಕಾಯಕಲ್ಪ ಮಾಡಿಸಿ, ನಮ್ಮ ಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿದ ತಾಯಿ. ಶಾಲೆಯೆಂಬ ದೇಗುಲಕ್ಕೆ ಯಾರು ಕರೆದರು ಭೇಟಿ ನೀಡುವ ಹಾರೈಸಿ ಧನ್ಯತೆಯ ಭಾವ ವ್ಯಕ್ತಪಡಿಸುವ ಸ್ಪೂರ್ತಿ ದೇವತೆ.
ಇಂದು ಸಾವಿರಾರು ಮಕ್ಕಳ ಭವ್ಯ ಭವಿಷ್ಯಕ್ಕೆ ದಾರಿ ಮಾಡುವ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವ ಯಶಸ್ವಿ ವ್ಯಕ್ತಿ.
ಪುಟ್ಟ ಪುಟ್ಟ ಮಕ್ಕಳಿಗಾಗಿ ಕಥೆ ಹೇಳುವ ಅಜ್ಜಿ… ಪದ್ಮವಿಭೂಷಣ, ಪದ್ಮಶ್ರೀ, ದಾನ ಚಿಂತಾಮಣಿ, ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್..ಅಬ್ಬಬ್ಬಾ ಇನ್ನೂ ಅದೆಷ್ಟೋ ಗರಿಗಳು ಆಕೆಯ ಸಾಧನೆಯ ಕಿರೀಟಕ್ಕಿವೆ. ಅವರೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಕ್ಕರೆಯ,ಸರಳತೆಯ ಸಾಕಾರ ಮೂರ್ತಿ… ಶ್ರೀಮತಿ ಸುಧಾ ಮೂರ್ತಿ ಅಮ್ಮ.
ಥಟ್ಟನೆ ನೋಡಿದರೆ ಪಕ್ಕದ ಮನೆಯ ಅಜ್ಜಿ, ಮುಂದಿನ ಮನೆಯ ಚಿಕ್ಕಮ್ಮ, ದೊಡ್ಡಮ್ಮ ಇರಬಹುದೇನೋ ಎಂಬಂತೆ ತೋರುವ ಸುಧಾ ಅಮ್ಮ ಅತ್ಯಂತ ಸರಳ, ಸುಶಿಕ್ಷಿತ ಮತ್ತು ಭೂಮಿ ತೂಕದ ಹೆಣ್ಣು ಮಗಳು. ಏರಿಳಿತದ ಹಾದಿಯಲ್ಲಿ ಎಂಬ ಪುಸ್ತಕವಂತು ಅಂದಿನ ಜನರ ಜೀವನ ಶೈಲಿಯ, ಬದುಕಿನ ಭಾವನೆಗಳ ಕುರಿತು ಮಾರ್ಮಿಕವಾಗಿ ತಿಳಿಸುತ್ತದೆ.
ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಜನಿಸಿದ ಸುಧಾ ಮೂರ್ತಿಯವರ ತಂದೆ ವೈದ್ಯರು. ತಾಯಿ ಸದ್ಗೃಹಿಣಿ. ಅಜ್ಜಿಯ ಮನೆಯಾದ ಶಿಗ್ಗಾವಿಯ ಬಳಿ ಕೆಲಕಾಲ ಬಾಲ್ಯವನ್ನು ಕಳೆದ ಸುಧಾ ಅಮ್ಮನವರಿಗೆ ಸಾವಿರಕ್ಕೂ ಹೆಚ್ಚು ವಚನಗಳ ಕಂಠಪಾಠವಾಗಿವೆ. ಅಜ್ಜಿಯ ಅಕ್ಕರೆಯಲ್ಲಿ ಬೆಳೆದ ಸುಧಮ್ಮ ಅಜ್ಜಿಯ ಜೊತೆಗಿನ ಒಡನಾಟದಲ್ಲಿ ಗ್ರಾಮೀಣ ಸಂಸ್ಕೃತಿಯ ಶ್ರೀಮಂತ ಸೊಗಡನ್ನು ಅನುಭವಿಸಿ ಬೆಳೆದಿದ್ದಾರೆ. ಅವರ ಲೇಖನಗಳಲ್ಲಿ ಈ ಛಾಯೆ ಸದಾ ಕಂಡು ಬರುತ್ತದೆ. ಅವರ ಪುಸ್ತಕಗಳಲ್ಲಿ ಅವರ ಬಾಲ್ಯದ ಓದು, ಆಟ ಪಾಠಗಳು, ಬ್ರಾಹ್ಮಣ ಪರಿವಾರದ ತನ್ನ ಅಜ್ಜಿ ಲಿಂಗಾಯತ ಮಠಕ್ಕೆ ಎಡೆ ಕೊಡುವುದು, ಜೈನರೊಂದಿಗಿನ ಒಡನಾಟ, ವಿದ್ಯೆಯ ಮಹತ್ವವನ್ನು ತಿಳಿಸುವ ಪ್ರಜಾ ಮತದಲ್ಲಿ ಪ್ರಕಟವಾದ’ಕಾಶಿ ಯಾತ್ರೆ’ ಕಾದಂಬರಿಯ ಘಟನೆಯ ಕಾರಣವಾಗಿ ತನ್ನ ಹೆಜ್ಜೆ ವಿದ್ಯೆ ಕಲಿಸಿ ಆಕೆಯಿಂದ ಗುರುದಕ್ಷಿಣೆ ಪಡೆದ ಹೃದಯಸ್ಪರ್ಶಿ ಕಥೆ, ಕಟ್ಟಾ ಬ್ರಾಹ್ಮಣ ಪರಿವಾರದ ಅಜ್ಜಿ ಮುಸಲ್ಮಾನ ಪರಿವಾರದ ಹೆಣ್ಣು ಮಗಳಿಗೆ ಹೆರಿಗೆ ಮಾಡಿಸಿದ ಮಾನವೀಯ ಅಂತಃಕರಣದ ಘಟನೆಗಳು, ದೊಡ್ಡವರ ಸಣ್ಣತನಗಳು, ಸಣ್ಣವರ ಹೃದಯ ಶ್ರೀಮಂತಿಕೆಯ ಕಥೆಗಳು, ಮಾನವ ಜೀವನದ ಸಂಕೀರ್ಣ ವಿಷಯಗಳು ಮನ ತಟ್ಟುತ್ತವೆ.
ಮುಂದೆ ಪಿಯುಸಿ ಶಿಕ್ಷಣದ ನಂತರ ಹುಬ್ಬಳ್ಳಿಯ ಪ್ರತಿಷ್ಠಿತ ಬಿ ವಿ ಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏಕೈಕ ಮಹಿಳಾ ವಿದ್ಯಾರ್ಥಿಯಾಗಿ ಓದಿದ ಖ್ಯಾತಿ ಸುಧಾ ಅಮ್ಮನದು. ಮಹಿಳೆಯರು ಈ ವೃತ್ತಿಗೆ ಅಪ್ಲಿಕೇಶನ್ ಹಾಕಬೇಕಿಲ್ಲ ಎಂಬ ಟೆಲ್ಕೊ (ಟಾಟಾ) ಕಂಪನಿಯ ಉದ್ಯೋಗಿಕ ಜಾಹೀರಾತಿಗೆ ಕಟುವಾಗಿ ಟೀಕಿಸಿ ನೀವು ಕೇಳುವ ವೃತ್ತಿ ಕೌಶಲ್ಯಗಳನ್ನು ಹೊಂದಿದ್ದು, ಜೀಪ್ ಚಾಲನೆ ಮಾಡಬಲ್ಲೆ ನನಗೇಕೆ ನೀವು ಉದ್ಯೋಗ ಕೊಡಬಾರದು ಎಂದು ಭಾರತದ ಪ್ರತಿಷ್ಠಿತ ಉದ್ಯಮಿ ಟಾಟಾರವರಿಗೆ ಪೋಸ್ಟ್ ಕಾರ್ಡಿನಲ್ಲಿ ಕಾಗದ ಬರೆದು ಅವರಿಂದ ನೌಕರಿಗೆ ಆಹ್ವಾನ ಪಡೆದವರು ಸುಧಾ ಅಮ್ಮ.
ಆಹ್ವಾನ ಬಂದ ನಂತರ ಸ್ನಾತಕೋತ್ತರ ಪದವಿ ಓದಲು ವಿದೇಶಕ್ಕೆ ಹೋಗುವ ಸನ್ನಾಹದಲ್ಲಿದ್ದ ಸುಧಾ ಅಮ್ಮನವರು ತಂದೆಯ ಸಾತ್ವಿಕ ಆಗ್ರಹ ದ ಮೇರೆಗೆ ಟಾಟಾರವರ ಟೆಲ್ಕೋ ಕಂಪನಿಗೆ ಸೇರಿಕೊಂಡರು.
ಮುಂದೆ ಪುಣೆಯಲ್ಲಿ ನೌಕರಿ ಮಾಡುವಾಗ ಪರಿಚಯವಾದ ಮೈಸೂರು ಮೂಲದ ನಾರಾಯಣಮೂರ್ತಿಯವರನ್ನು ಸುಮಾರು 3 ವರ್ಷಗಳ ಸ್ನೇಹ, ನಂತರ ಪ್ರೀತಿಯನ್ನು ಮುಂದುವರಿಸಿಕೊಂಡು ತಮ್ಮ ಹಿರಿಯರ ಆಶೀರ್ವಾದದೊಂದಿಗೆ, ವಧು ವರರಿಬ್ಬರೂ ತಮ್ಮ ದುಡಿಮೆಯ ಹಣ ಹಾಕಿ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿವಾಹವಾದರು. ಮುಂದೆ ಪುಣೆಯಲ್ಲಿ ಸಂಸಾರ ಹೂಡಿದರು ದಂಪತಿಗಳು. ಪತ್ನಿ ನೌಕರಿಯಲ್ಲಿ ಮುಂದುವರೆದರೆ ಪತಿ ಇನ್ಫೋಸಿಸ್ ಎಂಬ ಬೃಹತ್ ಸಂಸ್ಥೆಯನ್ನು ಕಟ್ಟುವ ಕಾಯಕದಲ್ಲಿ ನಿರತರಾದರು. ಒಂದೊಮ್ಮೆ ಹಣದ ಅಡಚಣೆ ತಲೆದೋರಿದಾಗ ತಮ್ಮದೇ ಉಳಿತಾಯದ ಹತ್ತು ಸಾವಿರಕ್ಕೂ ಹೆಚ್ಚಿನ ಹಣವನ್ನು (ಅಂದಿನ ಕಾಲಕ್ಕೆ ಅದು ಬಹುದೊಡ್ಡ ಮೊತ್ತ) ನೀಡಿ ಪತಿಯ ಕಾರ್ಯಕ್ಕೆ ಬೆಂಬಲವಾಗಿ ನಿಂತರು. ಮುಂದೆ ಇನ್ಫೋಸಿಸ್ ಎಂಬ ಆಲದ ಮರ ಹೆಮ್ಮರವಾಗಿ ತನ್ನ ಬಿಳಲುಗಳನ್ನು ಎಲ್ಲೆಡೆ ಹರಡಿದಾಗ, ತಮ್ಮ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದರು ದಂಪತಿಗಳು. ಆಗಲೂ ಕೂಡ ಶ್ರೀಮತಿ ಸುಧಾ ಮೂರ್ತಿಯವರು ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಣ್ಣು ಕಾಣದ ಅಂಧ ವಿದ್ಯಾರ್ಥಿಗೆ ತನ್ನ ಮಗಳು ಅಕ್ಷತಾ ಪರೀಕ್ಷೆ ಬರೆಯಲು ಸಹಾಯ ಮಾಡಿದ ಘಟನೆ ಸುಧಾ ಮೂರ್ತಿಯವರಿಗೆ ಪಾಠವಾಯಿತೆಂದು ಅವರೇ ಬರೆದಿದ್ದಾರೆ. ಮುಂದೆ ಇನ್ಫೋಸಿಸ್ ಪ್ರತಿಷ್ಠಾನವನ್ನು ಸ್ಥಾಪಿಸಿ ಅದಕ್ಕೆ ಧರ್ಮದರ್ಶಿಯನ್ನಾಗಿ ಸುಧಾ ಮೂರ್ತಿಯವರನ್ನು ನೇಮಕ ಮಾಡಲಾಯಿತು. ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಒರಿಸ್ಸಾದಲ್ಲಿ ಚಂಡಮಾರುತ, ಮಹಾರಾಷ್ಟ್ರದಲ್ಲಿ ಭೂಕಂಪ,ಈಶಾನ್ಯ ಭಾರತದಲ್ಲಿನ ಪ್ರಾಕೃತಿಕ ಅವಘಡಗಳು, ಪಕ್ಕದ ನೇಪಾಳದಲ್ಲಾದ ತೊಂದರೆಗಳು, ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿನ ಪ್ರಾಕೃತಿಕ ತೊಂದರೆಗಳಿಗೆ, ವಿಕೋಪಗಳಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿದರು. ಸಾವಿರಾರು ಜನರು ಇನ್ಫೋಸಿಸ್ ಪ್ರತಿಷ್ಠಾನದ ನೆರವಿನ ಮೂಲಕ ಮನೆ, ಉದ್ಯೋಗ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಸ್ಕಾಲರಶಿಪ್‌ಗಳನ್ನು ಕೂಡ ಕೊಡ ಮಾಡುವ ಈ ಸಂಸ್ಥೆಯ ಕಾರ್ಯ ಅಮೋಘ ಮತ್ತು ಅದ್ವಿತೀಯ. ಮಕ್ಕಳು ಮುದುಕರು ಯುವಕರು ಎಂದೆನ್ನದೆ ಸಮಾಜದ ಎಲ್ಲ ವರ್ಗದ ಜನರಿಗೆ ಅತ್ಯವಶ್ಯಕವಾದ ಸಹಾಯವನ್ನು ಮಾಡುವಲ್ಲಿ ಇನ್ಫೋಸಿಸ್ ನ ಕಾರ್ಯ ಶ್ಲಾಘನೀಯ. ಕಳೆದ ಎರಡು ಮೂರು ದಶಕಗಳಿಂದ ರಾತ್ರಿ ಹಗಲೆನ್ನದೆ ತಿಂಗಳಲ್ಲಿ 20ಕ್ಕೂ ಹೆಚ್ಚು ದಿನ ಮನೆಯಿಂದ ದೂರವಿದ್ದು ಪ್ರತಿಷ್ಠಾನದ ಕಾರ್ಯಗಳನ್ನು ನಿರ್ವಹಿಸುವ ಸುಧಾ ಮೂರ್ತಿಯವರ ಸಾಧನೆ ಹಿಮಾಲಯದಷ್ಟು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತ ಮೇರು ವ್ಯಕ್ತಿತ್ವ ಅಮ್ಮನದು.
ಮಗಳು ಅಕ್ಷತಾಳ ಪತಿ ರಿಷಿ ಸುನಕ್ ಪ್ರಸ್ತುತ ಇಂಗ್ಲೆಂಡ್ ದೇಶದ ಪ್ರಧಾನಮಂತ್ರಿಯಾಗಿದ್ದರೂ ಆ ಕುರಿತು ಯಾವುದೇ ಹೆಗ್ಗಳಿಕೆ ಬಯಸದ, ನನ್ನ ದೇಶಕ್ಕಾಗಿ ನಾನು, ಅವರ ದೇಶಕ್ಕಾಗಿ ಅವರು ಕಾರ್ಯನಿರ್ವಹಿಸಲಿ ಎಂದು ನಮ್ರವಾಗಿ ಹೇಳುತ್ತಾರೆ ಸುಧಾ ಅಮ್ಮ. ಮಗ ರೋಹನ್ ಕೂಡ ಉತ್ತಮ ಸಂಸ್ಕಾರವನ್ನು ಹೊಂದಿದ ವ್ಯಕ್ತಿ.

ಸಾವಿರಾರು ಕೋಟಿ ರೂಗಳ ಷೇರುಗಳನ್ನು ಇನ್ಫೋಸಿಸ್ ನಲ್ಲಿ ಹೊಂದಿದ್ದರು ಇಂದಿಗೂ ಕೂಡ ಬೆಂಗಳೂರಿನಲ್ಲಿ ಎರಡು ಕೋಣೆಗಳ ಮನೆಯೊಂದರಲ್ಲಿ ಈ ದಂಪತಿಗಳು ಸಾಮಾನ್ಯ ಮಧ್ಯಮ ವರ್ಗದವರಂತೆ ವಾಸವಾಗಿದ್ದಾರೆ. ಅತ್ಯಂತ ಶಿಸ್ತಿನ, ಸರಳ ಮತ್ತು ಸಾತ್ವಿಕ ಜೀವನ ಶೈಲಿಯನ್ನು ಹೊಂದಿರುವ ಸುಧಮ್ಮ ಮತ್ತು ನಾರಾಯಣ ಮೂರ್ತಿ ದಂಪತಿಗಳು ನಾಡು-ನುಡಿಯ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟಿದ್ದಾರೆ. 70ರ ಈ ಇಳಿ ವಯಸ್ಸಿನಲ್ಲಿಯೂ ಕೂಡ ದೇಶಾದ್ಯಂತ ಸಂಚರಿಸಿ ಮಕ್ಕಳನ್ನು ಯುವ ಜನತೆಯನ್ನು ಉದ್ದೇಶಿಸಿ ಮಾತನಾಡಿ ಪ್ರೋತ್ಸಾಹಿಸುತ್ತಿರುವ ಈ ದಂಪತಿಗಳು ಇನ್ನೂ ಹಲವಾರು ಕಾಲ ಹೀಗೆ ತಮ್ಮ ಕೈಂಕರ್ಯವನ್ನು ಮುಂದುವರಿಸಲಿ. ಇನ್ನೂ ಹೆಚ್ಚಿನ ಶಕ್ತಿ,ಆರೋಗ್ಯವನ್ನು ಆ ದೇವರು ಕರುಣಿಸಲಿ ಎಂದು ಆಶಿಸುವ.
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

