ಬಿಸಿಲಿನ ತಾಪದಲ್ಲೂ ಪತ್ರಾಸ್ ಶೆಡ್ಡಿನಲ್ಲಿ ಕಾರ್ಯ | ಕೂಡಗಿ ಪೋಲೀಸರಿಗೆ ನರಕಯಾತನೆ | ದೂರುದಾರರಿಗೆ ಹೊರಗಡೆಯೇ ನಿಲ್ಲಿಸಿ ವಿಚಾರಣೆ
ಕೊಲ್ಹಾರ: ಬೇಸಿಗೆಯ ಕಾಲದಲ್ಲಿ ಬಿಸಿಲಿನ ತಾಪದ ಝಳ ಮಳೆಗಾಲ ಬಂತೆಂದರೆ ಮಳೆರಾಯನ ಆಗಮನದ ಜೋರಾದ ಸಪ್ಪಳ ಚಳಿಗಾಲದಲ್ಲಿ ಬೆಚ್ಚಗಿನ ನಡುವೆಯೂ ಚಳಿ ಚಳಿ ತಾಳಿಕೊಂಡು ಸೇವೆಯನ್ನು ಸಲ್ಲಿಸುವ ಅನಿವಾರ್ಯ ಪರಿಸ್ಥಿತಿಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರಕ್ಷಕರ ಹಲವಾರು ವರ್ಷಗಳ ದುಸ್ಥಿತಿಯ ಚಿತ್ರಣ.
ಇಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಪೋಲೀಸ್ ಠಾಣೆಯ (ಆರಕ್ಷಕ) ಠಾಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿ ವರ್ಗದವರು ಅನುಭವಿಸುತ್ತಿರುವ ನರಕಯಾತನೆ ಹೇಳತೀರದು. ಸಾರ್ವಜನಿಕರಿಗೆ ಗಣ್ಯರಿಗೆ ರಕ್ಷಣೆ ಕೊಡುವ ಆರಕ್ಷಕ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಸುಸಜ್ಜಿತವಾದ ಸ್ವಂತ ಇಲಾಖಾ ಕಟ್ಟಡವಿಲ್ಲದೇ ಕಾರ್ಯನಿರ್ವಹಿಸುವಂತಹ ಸರಕಾರಿ ಸೇವೆ ಸಲ್ಲಿಸುತ್ತಿರುವ ಅವರಿಗೆ ಕಟ್ಟಡ ಭಾಗ್ಯ ದೊರಕುವದು ಯಾವಾಗ ಎನ್ನುವಂತಾಗಿದೆ.
ಸುಮಾರು ೧೫ ವರ್ಷಗಳ ಹಿಂದೆ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಘಟಕ ಉದ್ಘಾಟನೆ ಮಾಡಬಾರದು ಎನ್ನುವ ರೈತ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಅವಾಂತರವನ್ನು ಗಮನಿಸಿದ ಎನ್.ಟಿ.ಪಿ.ಸಿ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಎನ್‌ಟಿಪಿಸಿ ರಕ್ಷಣೆಗಾಗಿ ಆರಕ್ಷಕ ಠಾಣೆ ಮಂಜೂರು ಮಾಡಬೇಕೆಂದು ಪತ್ರ ಬರೆದ ಪ್ರಯುಕ್ತ ಅಖಂಡ ಬಸವನ ಬಾಗೇವಾಡಿ ತಾಲೂಕಿನ ಹತ್ತು ಗ್ರಾಮಗಳನ್ನು ಸೇರಿಸಿ ಮತ್ತು ಕೇಂದ್ರಸರಕಾರದ ಸ್ವಾಮಿತ್ವದ ಕೂಡಗಿ ಎನ್‌ಟಿಪಿಸಿಗಾಗಿ ಸರಕಾರವು ಹೊಸ ಪೋಲೀಸ್ ಠಾಣೆಯನ್ನು ಮಂಜೂರು ಮಾಡಿದ್ದು ಪೋಲೀಸ್ ಠಾಣೆಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗುವದು ಎಂದು ಎನ್‌ಟಿಪಿಸಿ ಅಧಿಕಾರಿಗಳು ಒಪ್ಪಿಗೆಯನ್ನು ಸೂಚಿಸಿದ್ದರು.
ಆದರೂ ಜಾಗ ದೊರೆಯದೇ ಕೂಡಗಿ ಪೋಲೀಸ್ ಠಾಣೆ ಆಲಮಟ್ಟಿ ಮುಳವಾಡ ಜಿಲ್ಲಾ ಮುಖ್ಯ ರಸ್ತೆಯ ಎನ್‌ಟಿಪಿಸಿ ಘಟಕದ ಆವರಣಗೋಡೆಗೆ ಹೊಂದಿಕೊಂಡು ಇಕ್ಕಟ್ಟಾದ ತಿರುವಿನ ಹೆಚ್ಚುವರಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವದು ಪಕ್ಕದಲ್ಲಿ ಇರುವ ಎನ್‌ಟಿಪಿಸಿ ಮಹಾಪ್ರಭಂದಕ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೋ ಅಥವಾ ರಾಜ್ಯ ಗೃಹ ಇಲಾಖೆಯ ಅಧಿಕಾರಿಗಳು ಒತ್ತಡ ಹಾಕದೇ ಹೇಗಿದ್ದರೂ ನಡೆದಿದೆಯಲ್ಲ ಎನ್ನುವ ಉದಾರ ಮನೋಭಾವದ ಮನಸ್ಥಿತಿಯ ಮಧ್ಯ ಕಾರ್ಯನಿರ್ವಹಿಸುತ್ತಿರುವ ಆರಕ್ಷಕ ಸಿಬ್ಬಂದಿಯ ಗೋಳು ಹೇಳಲು ಅಸಾಧ್ಯವಾಗಿದೆ.
ಠಾಣಾಧಿಕಾರಿಗಳಿಗೆ ಒಂದು ಕೋಣೆ, ಸಿಬ್ಬಂದಿ ವರ್ಗದವರಿಗೆ ಒಂದು ಕೋಣೆ ಹೆಚ್ಚುವರಿಯಾಗಿ ಒಂದು ಕೋಣೆಯನ್ನು ಸುಮಾರು ಎರಡು ಗುಂಟೆ ಜಾಗದಲ್ಲಿ ಪತ್ರಾಸ ಶೆಡ್ ಹಾಕಿ ನಿರ್ಮಾಣ ಮಾಡಿರುವದರಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಾಹನಗಳು ಅಫಘಾತಕ್ಕೀಡಾದಾಗ ಯಾವುದೇ ಗ್ರಾಮದಲ್ಲಿ ವ್ಯಾಜ್ಯಗಳು ನಡೆದು ದೂರು ಸಲ್ಲಿಸಲು ದೂರುದಾರರು ಬಂದಾಗ ಹೊರಗಡೆಯೇ ನಿಲ್ಲಿಸಿ ತನಿಖೆ ಮಾಡುವಂತಹ ಮತ್ತು ವಾಹನಗಳನ್ನು ನಿಲ್ಲಿಸಲು ಜಾಗದ ಕೊರತೆ ಆಗುತ್ತಿರುವದನ್ನು ಇನ್ನೂ ಎಷ್ಟು ದಿನ ಕೂಡಗಿ ಪೋಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಡೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

