ಬಮ್ಮನಹಳ್ಳಿ ಮಠದಲ್ಲಿ ಜಾತ್ರಾ ಮಹೋತ್ಸವ | ಲಿಂ.ಮಳೇಂದ್ರ ಶಿವಾಚಾರ್ಯರ ಬೆಳ್ಳಿ ಮೂರ್ತಿ ಉತ್ಸವ | ಧರ್ಮಸಭೆ
ಆಲಮೇಲ: ಇಂದಿನ ಜನರಿಗೆ ಎಲ್ಲ ರೀತಿಯ ಸಿರಿ ಸಂಪತ್ತು ಹೊಂದಿದ್ದರೂ ಪ್ರೀತಿ ಮಮತೆ ಇಲ್ಲದೆ ಕೊರಗುತ್ತಿದ್ದಾರೆ. ಅದಕ್ಕೆ ಸಂಸ್ಕಾರ ಇಲ್ಲದೆ ಇರುವುದೇ ಕಾರಣ, ನಮ್ಮ ಧರ್ಮದ ಸಂಸ್ಕಾರ ಸಂಪ್ರದಾಯ ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಅಂದಾಗ ಮಾತ್ರ ಸಮಾಜ ಪರಿವರ್ತನೆ ಆಗಲು ಸಾದ್ಯ ಎಂದು ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಭಾನುವಾರ ರಾತ್ರಿ ತಾಲೂಕಿನ ಬಮ್ಮಹಳ್ಳಿ ಗ್ರಾಮದಲ್ಲಿ ಆಲಮೇಲ ಗುರು ಸಂಸ್ಥಾನ ಹಿರೇಮಠದ ಲಿಂ. ಮಳೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೆಯ ಅಂಗವಾಗಿ ಬಮ್ಮನಹಳ್ಳಿ ಶಾಖಾ ಮಠದಲ್ಲಿ ಜಾತ್ರಾ ಮಹೋತ್ಸವ ಮತ್ತು ಲಿಂ. ಮಳೇಂದ್ರ ಶಿವಾಚಾರ್ಯರ ಬೆಳ್ಳಿ ಮೂರ್ತಿ ಉತ್ಸವ ಹಾಗೂ ಧರ್ಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇಂದು ಎಷ್ಟೇ ಗಳಿಸಿದರೂ ವೃದ್ದಾಪ್ಯ ಜೀವನ ವೃದ್ದಾಶ್ರದಲ್ಲಿ ಕಳೆಯುವಂತಾಗುತ್ತಿದೆ. ಅದಕ್ಕೆ ಕಾರಣ ಸಂಸ್ಕಾರ ಇಲ್ಲದಿರುವುದು. ಈ ರೀತಿಯ ಕೆಟ್ಟ ಸಂಪ್ರದಾಯ ಸುಶಿಕ್ಷಿತರಲ್ಲೆ ಹೆಚ್ಚಾಗುತ್ತಿದೆ. ಅದನ್ನು ಹೋಗಲಾಡಿಸಬೇಕು ಎಂದರೆ ಸಂಸ್ಕಾರ ಸಂಪ್ರದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಗ್ರಾಮೀಣ ಭಾಗದ ರೈತಾಪಿ ವರ್ಗ ಮತ್ತು ಕೂಲಿಕಾರ್ಮಿಕ ಬಡ ಜನರಲ್ಲಿ ಧರ್ಮದ ಸಂಸ್ಕಾರವಿದೆ, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುತ್ತಾರೆ. ಅವರಲ್ಲಿ ಸಂಸ್ಕಾರ ಸಂಪ್ರದಾಯ ಉಳಿದುಕೊಂಡಿದೆ. ಆದರೆ ಉನ್ನತ ಶಿಕ್ಷಣ ಪಡೆದ ಸುಶಿಕ್ಷಿತರೆ ಸಂಸ್ಕಾರ ಸಂಪ್ರದಾಯ ಮರೆಯುತ್ತಿದ್ದಾರೆ, ವಯೋವೃದ್ದ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ದೂಡುವ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತಿದ್ದಾರೆ. ಇದನ್ನು ಹೋಗಲಾಡಿಸಬೇಕು ಎಂದರೆ ತಾಯಿಯಿಂದ ಮಾತ್ರ ಸಾದ್ಯ. ಮಕ್ಕಳಿಗೆ ಬಾಲ್ಯದಿಂದಲೆ ಮೊದಲು ಸಂಸ್ಕಾರ ಕಲಿಸಬೇಕಾಗಿದೆ. ಅಂದಾಗ ಮಾತ್ರ ನಮ್ಮ ಧರ್ಮದ ಸಂಸ್ಕಾರ ಸಂಪ್ರದಾಯ ಉಳಿಯಲಿದೆ, ಸಮಾಜ ಪರಿವರ್ತನೆ ಆಗಲು ಸಾದ್ಯ ಎಂದು ಹೇಳಿದರು.
ಬಂಥನಾಳದ ವೃಷಭಲಿಂಗ ಮಹಾಸ್ವಾಮಿಗಳು ಮಾತನಾಡಿ, ಧರ್ಮವನ್ನು ಯಾರು ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮ ರಕ್ಷಣೆ ಮಾಡಲಿದೆ. ನಿಜವಾದ ಧರ್ಮ ಯಾವುದು ಎಂದರೆ ಕೆಳಗೆ ಬಿದ್ದಂತವರನ್ನು ಮೇಲೆತ್ತುವುದೇ ನಿಜವಾದ ಧರ್ಮ. ಸ್ವಾಮಿಗಳಿಗೆ ಗುರು ವಿರಕ್ತರೆಂಬ ಭೇದ ಭಾವವಿಲ್ಲ. ಧರ್ಮದ ಜಾಗೃತಿ ಮಾಡುವುದೇ ಸ್ವಾಮಿಗಳ ಕರ್ತವ್ಯವಾಗಿದೆ. ಸಂಸ್ಕಾರ ಸಂಪ್ರದಾಯ ಬೆಳೆಸುವ ಕೆಲಸ ಮಠ ಮಂದಿರಗಳು ಮಾಡುತ್ತಿವೆ ಎಂದು ಹೇಳಿದರು.
ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಫಜಲಪೂರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಕೆಪಿಸಿಸಿ ಪ್ರಧಾನ ವಕ್ತಾರ ಸಂಗಮೇಶ ಬಬಲೇಶ್ವರ, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜು ಅಲಗೂರ ಮಾತನಾಡಿದರು.
ಮಮದಾಪೂರದ ಅಭಿನವ ಮುರುಗೇಂದ್ರ ಮಹಾಸ್ವಾಮಿಜಿ, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಮ್ಮನಹಳ್ಳಿಯ ನರಸಿಂಹ ಮಹಾರಾಜರು, ಕುಮಸಗಿಯ ಶಿವಾನಂದ ಸ್ವಾಮೀಜಿ ಮತ್ತು ಆಲಮೇಲ, ಕಣ್ಣಿ, ತಡವಲಗಾ, ಮಾಶಾಳ, ಸೋಮಜಾಳ, ನೀಲೂರ ವಿವಿದ ಮಠಾಧೀಶರು ಸಾನಿದ್ಯ ವಹಿಸಿದ್ದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವುಕುಮಾರ ಗುಂದಗಿ, ಬಸವರಾಜ ಧನಶ್ರೀ, ಕಾಂಗ್ರೆಸ್ ಮುಖಂಡ ಗಂಗಾಧರ ಸಂಬಣ್ಣಿ, ಬಿಎಚ್. ಬಿರಾದಾರ, ಡಾ| ದಯಾನಂದ ಬಿರಾದಾರ, ಕಸಾಪ ತಾಲೂಕ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ರಾಜಕುಮಾರ ಬಿರಾದಾರ ಮುಂತಾದವರು ಇದ್ದರು.

