ಆಲಮಟ್ಟಿ ಮಂಜಪ್ಪ ಹರ್ಡೇಕರ ಸ್ಮಾರಕ ಶಾಲೆ ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ | ಪ್ರತಿಭಾ ಪುರಸ್ಕಾರ
ಆಲಮಟ್ಟಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯತ್ತಿನ ಬದುಕಿಗಾಗಿ ಸುಂದರ ಕನಸು ಕಾಣಬೇಕು. ಆ ಕನಸು ನನಸಿಗೆ ದಿಟ್ಟ ಸಂಕಲ್ಪ ಭಾವ ತೋರಬೇಕು. ಹಲವು ಸವಾಲುಗಳ ಮಧ್ಯೆ ಗುರಿ, ಛಲ ಸಾಕಾರಕ್ಕೆ ಮುನ್ನುಡಿ ಬರೆಯಬೇಕು.ಶ್ರಮದ ನ್ಯಾಯ ಮಾರ್ಗದಲ್ಲಿ ಜೀವನ ಮೌಲ್ಯ ಕಟ್ಟಿಕೊಳ್ಳಬೇಕು. ಅಂಥದೊಂದು ಆತ್ಮವಿಶ್ವಾಸ ಎದೆಯಲ್ಲಿ ಇದ್ದರೆ ಖಂಡಿತ ಯಶಸ್ಸು ಸಾಧ್ಯ ಎಂದು ಧಾರವಾಡ ಪೋಲಿಸ್ ಆಯುಕ್ತರ ಕಚೇರಿ ಕಾನೂನು ವಿಭಾಗದ ಸಹಾಯಕ ನಿರ್ದೇಶಕಿ ಗೀತಾ ಹೊಸಗಾಣಿಗೇರ ಹೇಳಿದರು.
ಸ್ಥಳೀಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ಮಕ್ಕಳ ಬೀಳ್ಕೊಡುಗೆ,ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ನಿಮ್ಮ ಅಂತಃಶಕ್ತಿಯಿಂದ ಸಮಯೋಚಿತವಾಗಿ ನಿಭಾಯಿಸಿಕೊಳ್ಳಬೇಕು ಎಂದರು.
ಮೌಲ್ಯಯುತ ಶ್ರಮ,ಶ್ರದ್ಧೆ, ಪ್ರಾಮಾಣಿಕ ಬದ್ದತೆ ಗುಣಗಳೇ ಸಾಧನೆಯ ಸಾಧನಗಳಾಗಿವೆ. ಮನಸ್ಸು ಧೃಡತೆಯಿಂದ ಸಾಗಿದರೆ ಫಲ ದೊರೆಯುವದು. ಯಾವುದೇ ಕಾರಣಕ್ಕೂ ಗುರಿ ಸಾಧನೆಗೆ ಯುವಕರು ಅಡ್ಡದಾರಿ ಹಿಡಿಯಬಾರದು ಎಂದರು.
ನಾನು ದೊಡ್ಡ ಅಧಿಕಾರಿಯ ಮಗಳಲ್ಲ. ಸಾಮಾನ್ಯ ಕುಟುಂಬದಿಂದ ಬಂದವಳು. ಈ ಶಾಲೆಯಲ್ಲೇ ಎಸ್ಸೆಸ್ಸೆಲ್ಸಿ ವರೆಗೆ ಕಲಿತು ಓದು, ಬರಹದಿಂದ ಮುಂದೆ ಬಂದಿರುವೆ. ಕರ್ನಾಟಕ ಗಾಂಧಿ ಮಂಜಪ್ಪ ಹರ್ಡೇಕರ ಹೆಸರಿನ ಈ ಶಾಲೆಯ ಮಹಿಮೆ ಅಪಾರವಾಗಿದೆ. ಅಂದು ಕಷ್ಟಪಟ್ಟು ಇಷ್ಟದಿಂದ ಅಧ್ಯಯನ ಮಾಡಿದ ಪರಿಣಾಮ ನನ್ನ ಬದುಕಿನ ಪಯಣ ಇಂದು ಯಶಸ್ಸು ಕಾಣುತ್ತಿದೆ. ನನ್ನ ಅಂದಿನ ಕನಸು ಇಂದು ನನಸಾಗಿದೆ. ಮಂಜಪ್ಪ ಹರ್ಡೇಕರ ರವರ ಹಾಗೂ ತೋಂಟದ ಡಾ, ಸಿದ್ದಲಿಂಗ ಪೂಜ್ಯರ ಕೃಪೆಯಿಂದ ಈ ಶಾಲೆಯಲ್ಲಿ ಶೈಕ್ಷಣಿಕ ಶ್ರೇಷ್ಟತೆ ಪಡೆದ ಅಭಿಮಾನ ಇದೆ. ಇಲ್ಲಿ ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಲಭಿಸಿದೆ. ನನ್ನ ಕನಸ್ಸಿಗೆ ಇಲ್ಲಿನ ಶಾಲೆ, ಗುರುಗಳ ಹಾಗೂ ತಂದೆ, ತಾಯಿಗಳ ಆಶೀರ್ವಾದದಿಂದ ಅಧಿಕಾರಿ ಹುದ್ದೆ ಪಡೆದಿರುವೆ. ಇಂಥದೊಂದು ಸಾಧನೆ ಖುಷಿ ತಮಗೆ ತೃಪ್ತಿ ತಂದಿದೆ. ಶಿಕ್ಷಣ ಎಂಬುದು ನಮ್ಮ ಬದುಕನ್ನು ಉನ್ನತ ಮಜಲಿಗೆ ಕೊಂಡೊಯ್ಯತ್ತದೆ. ಕಾರಣ ನಮ್ಮಲ್ಲಿ ಬದ್ಧತೆಯ ಓದು ಬಲು ಮುಖ್ಯ. ಗುರುಭಕ್ತಿ ಇದ್ದರೆ ಸಾಧನೆ ಸಾಧ್ಯ. ನೀವು ಕೂಡಾ ನೈತಿಕ ಹೊಣೆಗಾರಿಕೆ ಅರಿತು ಗುರು ಸೇವೆದೊಂದಿಗೆ ಅಧಿಕಾರಿಗಳಾಗಿ ಉನ್ನತ ಹುದ್ದೆಗಳಲ್ಲಿ ವಿರಾಜಮಾನರಾಗಿ ಎಂದು ಶಿಕ್ಷಣ ರಂಗದ ಮಹತ್ವವುಳ್ಳ ಸಾರವನ್ನು ತಮ್ಮಅನುಭವದ ಮೂಲಕ ಎಳೆಎಳೆಯಾಗಿ ಗೀತಾ ಹೊಸಗಾಣಿಗೇರ ಮಕ್ಕಳೆದುರಿಗೆ ಹಂಚಿಕೊಂಡರು.
ಮಕ್ಕಳು ಇಂದು ಓದಾಸಕ್ತಿ ಕಳೆದುಕೊಂಡರೆ ಮುಂದೆ ಭವಿಷ್ಯತ್ತಿನ ಬದುಕು ಜಟಿಲವಾಗಿ ಕಾಡಬಹುದು. ಶಿಕ್ಷಣ ಇಲ್ಲದಿದ್ದರೆ ಬದುಕೇ ನಿಷ್ಪ್ರಯೋಜಕ ಎನ್ನುವಂಥ ಕಾಲಘಟ್ಟ ಇದು. ರಚನಾತ್ಮಕ ಚಟುವಟಿಕೆಗಳ ಮೂಲಕ ಬುದ್ದಿವಂತಿಕೆ ಹೆಚ್ಚಿಸಿಕೊಂಡು ಅಭ್ಯಾಸದಲ್ಲಿ ನಿರತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶಾಲೆಗೆ ಪ್ರೊಜೆಕ್ಟರ, ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನ ವಾಗ್ದಾನ: ಇದೇ ವೇಳೆ ಗೀತಾ ಹೊಸಗಾಣಿಗೇರ ತಾವು ಕಲಿತ ಈ ಶಾಲೆಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಅನುಕೂಲಕ್ಕೆ ಒಂದು ಪ್ರೊಜೆಕ್ಟ್ ರ ಹಾಗೂ ಪ್ರತಿ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದು ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆಯುವ ಪ್ರತಿಭಾನ್ವಿತ ಮಕ್ಕಳಿಗೆ ತಲಾ ಮೂರು ಸಾವಿರ ರೂ, ಬಹುಮಾನ ಪ್ರೋತ್ಸಾಹದಾಯಕವಾಗಿ ನೀಡುವ ವಾಗ್ದಾನ ಘೋಷಿಸಿದರು. ತಾವು ಕಲಿತ ಶಾಲಾ ಅಭಿವೃದ್ಧಿಗೆ ಕೈಲಾದ ಮಟ್ಟಿಗೆ ಕೊಡುಗೆ ನೀಡುವ ಇಚ್ಚೆ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯು ಆರಂಭದಿಂದಲೂ ಉತ್ತಮ ಜ್ಞಾನ ಧಾರೆ ಕಲಿಕಾ ಮಕ್ಕಳಗೆ ಕರುಣಿಸುತ್ತಿದೆ. ಮಕ್ಕಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಪರಿಣಿತ ಗುರು ಬಳಗ ಗೈಯುತ್ತಿರುವ ಮಾರ್ಗದರ್ಶನದ ಕಾರ್ಯ ಶ್ಲಾಘಿಸಿದರು.
ಶಾಲೆ ಎಂದರೆ ಒಂದು ಪವಿತ್ರ ದೇವಸ್ಥಾನ ಇದ್ದಂತೆ. ಇಲ್ಲಿ ಅಭ್ಯಸಿಸುವ ಮಕ್ಕಳು ದೇಶದ ಅಮೂಲ್ಯ ಯುವಸಂಪತ್ತು. ಇದನ್ನು ನೈತಿಕತೆಯಿಂದ ಬೆಳೆಸಬೇಕಾಗಿದೆ ಎಂದ ಅವರು, ಕಲಿಕೆಗೆ ಪೂರಕ ವಾತಾವರಣ ಇಲ್ಲಿದೆ. ಮಕ್ಕಳು ಬಳಸಿಕೊಂಡು ಶೈಕ್ಷಣಿಕ ಪ್ರಗತಿದತ್ತ ಹೆಜ್ಜೆ ಹಾಕಲಿ. ತಾವು ನೀಡುವ ಪ್ರೊಜೆಕ್ಟ್ ರ ವ್ಯವಸ್ಥೆಯ ಸದುಪಯೋಗ ಮಕ್ಕಳಿಗೆ ತಟ್ಟಲಿ ಎಂಬ ಆಶಯ ಗೀತಾ ಹೊಸಗಾಣಿಗೇರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಗ್ರಾಪಂ ಅಧ್ಯಕ್ಷೆ ಕವಿತಾ ಬಡಿಗೇರ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ವಾಲಿಕಾರ, ಸದಸ್ಯ ಮುಬಾರಕ ಬಾಗಲಕೋಟ, ಸಾಹಿತಿ ಅಶೋಕ ಹಂಚಲಿ, ಪತ್ರಕರ್ತ ನೀಲೇಶ ಗಾಂಧಿ ಅತಿಥಿಗಳಾಗಿದ್ದರು.
ಸಾಧಕ ಪ್ರತಿಭಾವಂತ ಮಕ್ಕಳ ಪರವಾಗಿ ಪಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಯು.ಎ.ಹಿರೇಮಠ, ಮಹೇಶ ಗಾಳಪ್ಪಗೋಳ, ಗಂಗಾಧರ ಹಿರೇಮಠ, ಎಂ.ಎಚ್.ಬಳಬಟ್ಟಿ, ಕೆ.ಜಗದೇವಿ, ಸರಸ್ವತಿ ಈರಗಾರ, ಕಾಲೇಖಾನ್ ಇತರರಿದ್ದರು.

