ಬಬಲೇಶ್ವರ ಶಾಖಾ ಕಾಲುವೆಯ ೧ ಹಾಗೂ ೨ರ ವಿತರಣಾ ಕಾಲುವೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ
ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದ ಹಾಗೂ ಅವಳಿ ಜಿಲ್ಲೆಯ ಕೃಷಿ ಚಟುವಟಿಕೆಯನ್ನು ಮಾಡುವ ರೈತಾಪಿ ವರ್ಗದವರು ನೀರಿನ ಮಹತ್ವವನ್ನು ಅರಿತು ಯಥೇಚ್ಚವಾಗಿ ಬಳಸದೇ ಸದ್ವಿನಿಯೋಗದ ಮೂಲಕ ಯಾವುದೇ ಮೂಲಗಳಿಂದ ಹರಿದು ಬರುವ ನೀರನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ರೈತರಿಗೆ ಸಚಿವ ಶಿವಾನಂದ ಎಸ್ ಪಾಟೀಲ ಕರೆಕೊಟ್ಟರು.
ತಾಲೂಕಿನ ಮುಳವಾಡ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಮುಳವಾಡ ಏತ ನೀರಾವರಿ ಹಂತ-೩ ರ ಅಡಿಯಲ್ಲಿ ಬಬಲೇಶ್ವರ ಶಾಖಾ ಕಾಲುವೆಯ ೧ ಹಾಗೂ ೨ರ ಮೂಲಕ ೧೭೦೪.೧೨ ಹೆಕ್ಟರ್ ಭೂಪ್ರದೇಶ ನೀರಾವರಿ ಕ್ಷೇತ್ರವಾಗಲು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿತರಣಾ ಕಾಲುವೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಸಮಾರಂಭವನ್ನು ಶುಕ್ರವಾರ ಸಾಯಂಕಾಲ ನೆರವೇರಿಸಿ ಮಾತನಾಡುತ್ತಿದ್ದರು.
ಪ್ರತಿ ಮೂರು ವರ್ಷದ ನಂತರ ಬರಗಾಲ ಬರುವದು ನೈಸರ್ಗಿಕವಾದ ಸಹಜ ವಾತಾವರಣವಾಗಿದ್ದು ಬರಗಾಲದಂಥಹ ಇಂಥಹ ಪರಿಸ್ಥಿತಿಯಲ್ಲೂ ರೈತರ ಬದುಕು ದುಸ್ತರವಾದರೂ ಬದುಕುವದು ಅನಿವಾರ್ಯವಾಗಿದೆ ಆದ್ದರಿಂದ ರೈತಾಪಿ ವರ್ಗದವರು ಎದೆಗುಂದದೆ ಕೃಷಿ ಚಟುವಟಿಕೆಗಳಲ್ಲಿ ಇರುವ ನೀರನ್ನು ಸದ್ಬಳಕೆಮಾಡಿಕೊಂಡು ಭೂಮಿ ತಾಯಯನ್ನು ಸಂತೃಪ್ತಿಗೊಳಿಸುವದರ ಜೊತೆಗೆ ದನ ಕರುಗಳಿಗೂ ಅವಲಂಬಿತ ಕುಟುಂಬ ವರ್ಗದ ಜೀವನೋಪಾಯಕ್ಕಾಗಿ ಆಸರೆಯಾಗುವ ಕರ್ತವ್ಯ ರೈತನದಾಗಿದೆ ಎಂದರು.
ದಿ|| ಮಾಜಿ ಮುಖ್ಯಮಂತ್ರಿ ಜಿ.ಎಚ್.ಪಟೇಲ ಅವರನ್ನು ನಾವು ನೆನೆಯಲೇಬೇಕು ಕಾರಣ ಆಲಮಟ್ಟಿ ಆಣೆಕಟ್ಟನ್ನು ೫೨೪ ಮೀ ಎತ್ತರಿಸಿ ಗೇಟಗಳನ್ನು ಅಳವಡಿಸಿ ಅನುಕೂಲ ಮಾಡಿರುವದನ್ನು ಆಂದ್ರಪ್ರದೇಶ ಸರಕಾರ ಸುಪ್ರೀಂಕೋರ್ಟನಿಂದ ತಡೆಯಾಜ್ಞೆ ತಂದು ೫೧೯.೬ ರ ವರೆಗೆ ಗೇಟ್ ಅಳವಡಿಸಕೊಳ್ಳಲು ಸೂಚಣೆ ಕೊಟ್ಟ ಪ್ರಕಾರ ಈ ಭಾಗದ ರೈತರಿಗೆ ಅನುಕೂಲವಾಗುವ ನೀರು ೩೦೦ ಟಿ.ಎಂ.ಸಿ ಅಷ್ಟು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ ಅಲ್ಲದೇ ನ್ಯಾಯಾಲಯಗಳು ರಾಜ್ಯರಾಜ್ಯಗಳ ಮಧ್ಯದ ನೀರಿನ ನ್ಯಾಯವನ್ನು ತ್ವರಿತವಾಗಿ ಬಗೆಹರಿಸದೇ ಇರುವದು ಈ ನಾಡಿನ ಜನರ ದೌರ್ಭಾಗ್ಯ ಎನ್ನುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಾಗರದಿನ್ನಿ ಸದಾನಂದ ಆಶ್ರಮದ ಮಲ್ಲಿಕಾರ್ಜುನ ಶ್ರೀಗಳು ಸಾನಿಧ್ಯವಹಿಸಿದ್ದರು ಅಧ್ಯಕ್ಷತೆಯನ್ನು , ಮುಳವಾಡ ಗ್ರಾಮ ಪಂಚಾಯತಿ ಅಧ್ಯಕ್ಷ ಹಣಮಂತ ಕಳಸಗೊಂಡ ವಹಿಸಿದ್ದರು, ಅತಿಥಿಗಳಾಗಿ ಚಂದ್ರಶೇಖರಗೌಡ ಪಾಟೀಲ, ಎಸ್.ಆರ್.ಪಾಟೀಲ, ಚನ್ನಪ್ಪಗೌಡ ಬಿರಾದಾರ, ಶಿವಪ್ಪ ಗಾಯಕವಾಡ, ಶೇಖಪ್ಪ ಬೀಳಗಿ, ಅಶೋಕ ಕಳಸಗೊಂಡ, ಸುತ್ತಮುತ್ತಲಿನ ಗ್ರಾಮಗಳ ಗಣ್ಯರು ಹಾಗೂ ಯುವಕರಾದ ರವಿ ಕೆಂಗನಾಳ, ಅಣ್ಣುಗೌಡ ಬಿರಾದಾರ, ಬಸವರಾಜ ಸಿದ್ದಾಪೂರ ಪ್ರಮುಖರು ಭಾಗವಹಿಸಿದ್ದರು.

