ವಿಜಯಪುರದಲ್ಲಿ ಲೋಕಸಭೆ ಚುನಾವಣೆ ಕುರಿತು ಡಿಸಿ ಟಿ.ಭಾಬಾಲನ್ ಪತ್ರಿಕಾಗೋಷ್ಠಿ
ವಿಜಯಪುರ: ಭಾರತ ಚುನಾವಣೆ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಅಧಿಸೂಚನೆಯನ್ನು ಹೊರಡಿಸಿದ್ದು, ಇಂದಿನಿಂದ ಜೂನ್ ೬ ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣೆ ಅಧಿಕಾರಿಯೂ ಆಗಿರುವ ಟಿ.ಭೂಬಾಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ಲೋಕಸಭೆ ಚುನಾವಣೆ ೨೦೨೪ ರ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯ ಅಧಿಸೂಚನೆಯನ್ನ ಏ. ೧೨ ರಂದು ಹೊರಡಿಸಲಾಗುವುದು. ಏ. ೧೯ ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ಏ. ೨೦ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ. ೨೨ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳುವ ದಿನವಾಗಿದೆ. ಮೆ. ೭ ರಂದು ಮತದಾನ ಹಾಗೂ ಜೂನ ೪ ರಂದು ಮತ ಎಣಿಕೆ ನಡೆಯಲಿವೆ ಎಂದರು.
ಜಿಲ್ಲೆಯಲ್ಲಿ ಸುಸೂತ್ರವಾಗಿ ಚುನಾವಣೆ ನಡೆಸಲು. ೯ ಜನ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೨೦೮೫ ಮತಗಟ್ಟೆಗಳಿದ್ದು, ೧೯,೧೯,೦೪೮ ಜನ ಮತದಾರರು ಇದ್ದಾರೆ. ಇದರಲ್ಲಿ ೯,೪೨,೭೫೭ ಮಹಿಳಾ, ೯,೪,೨೭೫೭ ಗಂಡು, ೨೧೮ ಇತರೆ ಮತದಾರರು ಇದ್ದಾರೆ. ೧,೭೧೫೯ ಜನರು ೮೫ ವರ್ಷ ಮೇಲ್ಪಟ್ಟ ಮತದಾರರು, ೨೧,೫೬೯ ವಿಶೇಷ ಚೇತನ ಮತದಾರರಿದ್ದಾರೆ. ೮೫ ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಅಂಚೆ ಮತ ಪತ್ರ ವಿತರಿಸುವ ಕುರಿತಂತೆ ಭಾರತ ಚುನಾವಣೆ ಆಯೋಗವು ನೀಡುವ ನಿರ್ದೇಶನ ಅನುಸಾರ ಕ್ರಮ ವಹಿಸಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೭ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ ೧೧ ಅಂತರರಾಜ್ಯ ಚೆಕ್‌ಪೋಸ್ಟ್, ೧೬ ಅಂತರ ಜಿಲ್ಲಾ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಚುನಾವಣೆ ಪ್ರಕ್ರಿಯೆ ಶಾಂತಿ ಸುವ್ಯವಸ್ಥೆಯಿಂದ ನಡೆಸಲು ೮ಡಿಎಸ್ಪಿ, ೨೬ ಪಿಎಸ್, ೯೦ ಪಿಎಸ್‌ಐ, ೧೧೮ ಎಎಸ್‌ಐ, ೧,೮೮೮ ಪಿಸಿ, ೯೭೬ ಹೋಮ್‌ಗಾರ್ಡ ಸೇರಿ ಒಟ್ಟು ೩೧೦೬ ಸಿಬ್ಬಂದಿಗಳನ್ನು ನೇಮಕ ಮಾಡಲಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಹಂತದಲ್ಲಿ ಹಾಗೂ ವಿಧಾನಸಭಾ ಮತಕ್ಷೇತರವಾರು ದೂರು ನಿರ್ವಹಣಾ ಕೋಶವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಚುನಾವಣಾ ವಿಷಯದ ಕುರಿತು ದೂರು ಸಲ್ಲಿಸಲು ಜಿಲ್ಲಾ ನೋಡಲ್ ಅಧಿಕಾರಿ ಮೋಬೈಲ್ ಸಂಖ್ಯೆ ೯೯೪೫೩೫೪೪೪೭ಗೆ ಕರೆ ಮಾಡಿ ದೂರು ದಾಖಲಿಸಬಹುದು. ಚುನಾವಣೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಶಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಉಪಸ್ಥಿತರಿದ್ದರು.

