ಕಲಕೇರಿ: ಸನಾತನ ಕಾಲದಿಂದಲೂ ಮಠಮಾನ್ಯಗಳಿಗೆ ತನ್ನದೇ ಆದ ವಿಶೇಷ ಘನತೆ ಗೌರವದ ಸ್ಥಾನವಿದ್ದು, ಮಠಗಳು ಸಮಾಜವನ್ನು ತಿದ್ದಿ ತೀಡಿ ಅವರನ್ನು ಧರ್ಮದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದು, ಅವು ನಿರಂತರವಾಗಿ ಅನ್ನ, ಅರಿವು ಮತ್ತು ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವ ತಾಣಗಳಾಗಿವೆ ಎಂದು ಮಾಗಣಗೇರಿಯ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಶುಕ್ರವಾರ ಸಂಜೆ ನಡೆದ ಲಿಂ.ಬಸವಲಿಂಗ ಮರುಳಸಿದ್ದ ಶಿವಾಚಾರ್ಯರ ಪುಣ್ಯಸ್ಮರಣೋತ್ಸವದ ನಿಮಿತ್ಯ ತಿಂಗಳ ಪರ್ಯಂತ ನಡೆಯಲಿರುವ ಮಹಾಶಿವಶರಣೆ ಸಜ್ಜಲಗುಡ್ಡದ ಶರಣಮ್ಮ ತಾಯಿಯ ಮಾಹಾಪುರಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠಕ್ಕೆ ಶತಶತಮಾನಗಳ ಇತಿಹಾಸವಿದ್ದು ಮಹಾದಾಸೋಹಿ ಕಲಬುರ್ಗಿಯ ಶರಣಬಸಪ್ಪನಿಗೆ, ಕಡಕೋಳದ ಮಡಿವಾಳಪ್ಪನಿಗೆ ದೀಕ್ಷೆ ಕೊಟ್ಟ ಕೀರ್ತಿ ಕಲಕೇರಿ ಹಿರೇಮಠದ ಗುರುಪರಂಪರೆಗೆ ಸಲ್ಲುತ್ತದೆ, ಪ್ರಸ್ತುತ ಶ್ರೀಮಠದ ಪೀಠಾಧಿಪತಿಗಳಾದ ಸಿದ್ದರಾಮ ಶಿವಾಚಾರ್ಯರು ಹತ್ತು ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಭಕ್ತರು ತಮ್ಮ ಸಂಸಾರದ ಜಂಜಾಟದ ಮಧ್ಯ ಗುರುಗಳ ಮಾರ್ಗದರ್ಶನದಲ್ಲಿ ಪುರಾಣ ಪುಣ್ಯಕಥೆಗಳನ್ನು ಕೇಳುವುದರ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪುರಾಣಿಕರಾದ ಯಾಳಗಿ ಸೋಮಶೇಖರಮಠದ ಬಸಯ್ಯ ಶಾಸ್ತ್ರಿಗಳು ಸಜ್ಜಲಗುಡ್ಡದ ಶರಣಮ್ಮ ತಾಯಿಯ ಪುರಾಣವನ್ನು ಪ್ರಾರಂಭಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಗವಾಯಿಗಳಾದ ಸಂಗಮೇಶ ನೀಲಾ ಮತ್ತು ಮಹಾಂತೇಶ ಕಾಳಗಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವಿರುಪಾಕ್ಷಯ್ಯ ಹಿರೇಮಠ ಹಂಪಿ, ಶಾಂತಗೌಡ ಬಿ. ಪಾಟೀಲ, ಬಿಜೆಪಿ ಮುಖಂಡ ಸಿದ್ದು ಬುಳ್ಳಾ ಮಾತನಾಡಿದರು.
ಕಲಕೇರಿಯ ಸಂಸ್ಥಾನ ಗದ್ದುಗೆಮಠದ ಗುರುಮಡಿವಾಳೆಶ್ವರ ಶಿವಾಚಾರ್ಯರು, ಕೆರುಟಗಿ ಸಿದ್ಧರಾಮೇಶ್ವರ ಮಠದ ಶಿವಬಸವ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಕಲಕೇರಿ ಹಿರೇಮಠದ ಪೀಠಾಧಿಪತಿಗಳಾದ ಸಿದ್ದರಾಮ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಣ್ಣಶರಭಯ್ಯ ಗದ್ದಗಿಮಠ, ಕಾಶೀನಾಥ ಹಿರೇಮಠ, ಮಲ್ಲಯ್ಯ ಹಿರೇಮಠ, ಶರಣಯ್ಯ ಮಠಪತಿ, ಪ್ರಭುಗೌಡ ಬಿರಾದಾರ ಅಸ್ಕಿ, ದೇವಿಂದ್ರ ಜಂಬಗಿ, ಸಿ.ಎಸ್.ಹಿರೇಮಠ, ಸಂಗನಗೌಡ ಬಿರಾದಾರ, ಷಣ್ಮುಖಪ್ಪ ಝಳಕಿ, ಶರಣಪ್ಪ ಮೋಪಗಾರ, ಮಹಾಂತೇಶ ಮೂಲಿಮನಿ, ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

