ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಸಲಹೆ
ಬಸವನಬಾಗೇವಾಡಿ: ಭಗವಂತನಲ್ಲಿ ಭಕ್ತಿಯಿದ್ದರೆ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತವೆ. ಅರಳಿಚಂಡಿ ಗ್ರಾಮದ ಜಗನ್ಮಾತೆ ಆದಿಶಕ್ತಿದೇವಿ ಹಿರೇಮಠದ ಶಕ್ತಿ ದೊಡ್ಡದು. ದೇವಿ ಕೃಪೆ ಪಡೆದ ಅನೇಕ ಸದ್ಭಕ್ತರ ಸಹಾಯ-ಸಹಕಾರದಿಂದ ಭವ್ಯವಾದ ಜನಕಲ್ಯಾಣ ಸಮುದಾಯ ಭವನ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ತಾಲೂಕಿನ ಅರಳಿಚಂಡಿ ಗ್ರಾಮದ ಜಗನ್ಮಾತೆ ಆದಿಶಕ್ತಿದೇವಿ ಹಿರೇಮಠದಲ್ಲಿ ನಿರ್ಮಾಣವಾದ ಜನಕಲ್ಯಾಣ ಸಮುದಾಯ ಭವನ ಲೋಕಾರ್ಪಣೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಸಮಾಜ ಬಾಂಧವರನ್ನು ಸಮಾನವಾಗಿ ಕಾಣುವ ಗ್ರಾಮ ಇದಾಗಿದೆ. ಈ ಗ್ರಾಮಸ್ಥರ ಒಗ್ಗಟ್ಟಿನಿಂದ ಗ್ರಾಮಕ್ಕೆ ಅನೇಕ ಕೆಲಸಗಳು ಆಗಿವೆ. ಅರಳಿಚಂಡಿ ಕೆರೆ ತುಂಬಿದರಿಂದ ಈ ಭಾಗದಲ್ಲಿ ನೀರಿನ ಭವಣೆ ಇಲ್ಲದಂತಾಗಿದೆ. ಜನರಲ್ಲಿ ಒಗ್ಗಟ್ಟು ಇದ್ದಾಗ ಅದಕ್ಕೆ ಬರುವ ಮೆರಗು ಬೇರೆಯಾಗಿರುತ್ತದೆ ಎಂದ ಅವರು, ಅರಳಿಚಂಡಿ ಗ್ರಾಮಕ್ಕೆ ಬರಲು ಮೊದಲು ಸರಿಯಾದ ರಸ್ತೆಗಳು ಇರಲಿಲ್ಲ. ಮೊದಲ ಬಾರಿಗೆ ಈ ಗ್ರಾಮಕ್ಕೆ ಸಚಿವ ಶಿವಾನಂದ ಪಾಟೀಲರನ್ನು ಕರೆದುಕೊಂಡು ಬಂದಾಗ ರಸ್ತೆಗಳು ಇರದೇ ಇರುವದನ್ನು ಗಮನಿಸಿದ ಅವರು ಮುತುವರ್ಜಿ ವಹಿಸಿ ಗ್ರಾಮಕ್ಕೆ ಬರಲು ನಾಲ್ಕು ಕಡೆ ರಸ್ತೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ ಎಂದರು.
ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿ, ಎಲ್ಲ ಜನರಿಗೆ ಸದುಪಯೋಗವಾಗುವ ಸದುದ್ದೇಶದಿಂದ ಈ ಜನಕಲ್ಯಾಣ ಸಮುದಾಯ ಭವನ ನಿರ್ಮಾಣವಾಗಿರುವದು ಸಂತಸದಾಯಕ ಸಂಗತಿ. ಈ ಸಮುದಾಯ ಭವನದಲ್ಲಿ ಒಳ್ಳೆಯ ಕಾರ್ಯಗಳು ನೆರವೇರಿ ಎಲ್ಲರಿಗೂ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ನಾವುಗಳು ಭಾಗವಹಿಸಿದರೆ ಅನೇಕ ಶ್ರೀಗಳ ಆಶೀರ್ವಾದ ಸಿಗುವ ಜೊತೆಗೆ ಜೀವನದ ಸನ್ಮಾರ್ಗಕ್ಕೆ ಹಿತನುಡಿಗಳು ನಮಗೆ ಸಿಗುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ ಮಾತನಾಡಿದರು.
ಯುವಮುಖಂಡ ಸಂಗಮೇಶ ಓಲೇಕಾರ, ನಿವೃತ್ತ ಶಿಕ್ಷಕ ಎಸ್.ಎಸ್.ಗುಬ್ಬಾ ಮಾತನಾಡಿದರು.
ಸಾನಿಧ್ಯವನ್ನು ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾದೇವಯ್ಯ ಹಿರೇಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಗುರಪ್ಪ ದೇವೂರ, ಶರಣಬಸಪ್ಪ ಬ್ಯಾಕೋಡ, ರಮೇಶ ಕೋರಿ, ಮಹಾಂತೇಶ ಬ್ಯಾಕೋಡ, ಬಂದೇನವಾಜ ನಂದವಾಡಗಿ, ಗೋಪಾಲ ಕನಸೆ, ಪ್ರಕಾಶ ದೇಸಾಯಿ, ನಿಂಗಪ್ಪ ಬಮ್ಮನಹಳ್ಳಿ, ಈರಣ್ಣ ಬೆಕಿನಾಳ, ಶಿವಾನಂದ ಹಿರೇಮಠ, ರಾಜೇಂದ್ರ ಬ್ಯಾಕೋಡ,ಸಾತಪ್ಪ ಕಿಣಗಿ, ಶರದ ಬ್ಯಾಕೋಡ, ಲಕ್ಷ್ಮೀ ಶಾಖಾಪೂರ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣ ಧನ ಸಹಾಯ ನೀಡಿದ ದಾನಿಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಬಿ.ಎಂ.ಮುಕಾರ್ತಿಹಾಳ ಸ್ವಾಗತಿಸಿದರು. ಎಸ್.ಎಸ್.ಕತ್ತಿ ನಿರೂಪಿಸಿದರು. ಎಚ್.ಎಸ್.ಸೊನ್ನದ ವಂದಿಸಿದರು.

