ಸಿಂದಗಿಯ ರೈತ ಭವನ ಆವರಣದಲ್ಲಿ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ
ಸಿಂದಗಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರಕ್ಕೆ ನಗರ ಯೋಜನೆ ಪ್ರಾಧಿಕಾರ ಅವಶ್ಯಕತೆ ಇತ್ತು ಎಂದು ಅಶೋಕ್ ಮನಗೂಳಿ ಹೇಳಿದರು.
ಪಟ್ಟಣದ ಎಪಿಎಂಸಿ ಯಾರ್ಡ್ ರೈತ ಭವನದಲ್ಲಿ ಹಮ್ಮಿಕೊಂಡ ನಗರ ಯೋಜನಾ ಪ್ರಾಧಿಕಾರ ನೂತನ ಕಚೇರಿಯನ್ನು ಶಾಸಕ ಅಶೋಕ ಮನಗೂಳಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಧಾರ್ಮಿಕ, ಸಮಾಜಿಕ ಮತ್ತು ಉದ್ಯೋಗ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಈ ಜಿಲ್ಲೆಯಲ್ಲಿ ಯಾವುದಾದರೂ ಇದ್ದರೆ ಅದು ಸಿಂದಗಿ. ಈ ಯೋಜನಾ ಪ್ರಾಧಿಕಾರದಿಂದ ನಮಗಿರುವ ಪ್ರಯೋಜನವೆಂದರೆ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಸರಕಾರಕ್ಕೆ ಒತ್ತಾಯ ಮಾಡಲು ಅನುಕೂಲವಾಗುತ್ತದೆ. ಗ್ರಾಹಕ ಮಿತ್ರರು ಎನ್‌ಎ ಅಥವಾ ಯಾವುದೇ ಕಾರ್ಯಕ್ಕಾಗಿ ವಿಜಯಪುರಕ್ಕೆ ಹೋಗಬೇಕಾಗುತ್ತಿತ್ತು. ಸುಗಮವಾಗಿ ಕಾರ್ಯವಾಗಲಿ, ಪುರಸಭೆಯ ಆದಾಯ ಇನ್ನೂ ಹೆಚ್ಚಾಗಲಿ ಎಂಬ ದೃಷ್ಠಿಕೋನ ಇಟ್ಟುಕೊಂಡು ಯೋಜನಾ ಪ್ರಾಧಿಕಾರವನ್ನು ಮಂಜೂರು ಮಾಡಿಸಲಾಗಿದೆ ಎಂದರು.
ಈ ವೇಳೆ ವಿಜಯಪುರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ, ರವೀಂದ್ರ ಹೇರಲಗಿ ಮಾತನಾಡಿ, ಪಟ್ಟಣದಲ್ಲಿ ಯೋಜನಾ ಪ್ರಾಧಿಕಾರ ಪ್ರಾರಂಭಿಸಿದ್ದು ಜನರಿಗೆ ಅನುಕೂಲವಾಗಿದೆ. ಯೋಜನಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು.
ಆಗ ಶಾಸಕರು ಯೋಜನಾ ಪ್ರಾಧಿಕಾರಕ್ಕೆ ಆದಷ್ಟು ಬೇಗ ಸಿಬ್ಬಂದಿ ನಿಯೋಜನೆ ಮಾಡುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಣಮಂತ ಸುಣಗಾರ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಪುರಸಭೆ ಸದಸ್ಯರಾದ ಪ್ರತಿಭಾ ಕಲ್ಲೂರ್, ಸಂದೀಪ್ ಚೌರ್, ಬಸವರಾಜ ಯರನಾಳ, ಶ್ರೀಶೈಲ ಬೀರಗೊಂಡ, ಆನಂದ ಡೋಣೂರ, ಮಲ್ಲಿಕಾರ್ಜುನ ಶಂಭೇವಾಡ, ರಾಜು ಖೇಡ, ರಜತ ತಾಂಬೆ, ಸುನಂದಾ ಯಂಪುರೆ, ಗಿರೀಶ ನಾಗೂರ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಸದಸ್ಯರು, ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

