ದೇವರಹಿಪ್ಪರಗಿ: ಪ್ರೌಢಶಾಲೆ ಕುಡಿಯುವ ನೀರು, ಶೌಚಾಲಯ, ಬಿಸಿಯೂಟ, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ವಿದ್ಯಾರ್ಥಿಗಳು ಪಾಲಕರ ಜೊತೆಗೂಡಿ ಆಗ್ರಹಿಸಿದರು.
ತಾಲ್ಲೂಕಿನ ಗಂಗನಳ್ಳಿ ಸರ್ಕಾರಿ ಪ್ರೌಢಶಾಲೆ ಹಲವು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಕೂಡಲೇ ಶಾಲೆಗೆ ಶೌಚಾಲಯ, ಕ್ರೀಡಾಮೈದಾನ, ವಾರದಲ್ಲಿ ವಿತರಿಸುವ ಶೇಂಗಾಚಿಕ್ಕಿ, ಮೊಟ್ಟೆ ಸೇರಿದಂತೆ ಬಿಸಿಯೂಟ ವ್ಯವಸ್ಥೆಗಳನ್ನು ಸುಧಾರಿಸುವದು ಹಾಗೂ ಮುಖ್ಯವಾಗಿ ಮುಖ್ಯಗುರು ಅಡುಗೆ ಸಿಬ್ಬಂದಿಗೆ ಸಹಕಾರ ನೀಡುವಂತೆ ವಿದ್ಯಾರ್ಥಿಗಳೊಂದಿಗೆ ಸೇರಿ ಪಾಲಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿದಾನಂದ ಕನ್ನೋಳ್ಳಿ ಮಾತನಾಡಿ, ನಮ್ಮೂರಿನ ಪ್ರೌಢಶಾಲೆಗೆ ವಿದ್ಯುತ್ ವ್ಯವಸ್ಥೆ ಹಾಗೂ ಕಂಪ್ಯೂಟರ್ ಶಿಕ್ಷಕರು ಇಲ್ಲದ ಕಾರಣ ಹಲವು ದಿನಗಳಿಂದ ಕಂಪ್ಯೂಟರ್ ಇದ್ದು ಇಲ್ಲದಂತಾಗಿವೆ. ಇನ್ನೂ ಮಧ್ಯಾನ್ಹದ ಬಿಸಿಯೂಟಕ್ಕೆ ಅಡುಗೆ ಸಿಬ್ಬಂದಿಗೆ ಕೇವಲ ೨ ಟೊಮೇಟೊ ನೀಡುತ್ತಾರೆ ಇದರಲ್ಲಿ ಅವರು ಅಡಿಗೆ ಮಾಡುವುದಾದರೂ ಹೇಗೆ? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಾಲೆಯ ಮುಖ್ಯಗುರು ಎಚ್.ಎಮ್. ಸಜ್ಜನ ಈ ಬಗ್ಗೆ ಮಾತನಾಡಿ, ನಮ್ಮ ಶಾಲೆಯಲ್ಲಿ ಮೊಟ್ಟೆ ಸೇರಿದಂತೆ ಎಲ್ಲವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಗ್ರಾಮದ ಕನ್ನೋಳ್ಳಿ ಅನ್ನುವವರು ಎಸ್‌ಡಿಎಮ್‌ಸಿ ಅಧ್ಯಕ್ಷರಾಗ ಬಯಸಿದ್ದು ಅವರ ಮಕ್ಕಳು ಯಾವುದೇ ತರಗತಿಯಲ್ಲಿ ಇರದ ಕಾರಣ ಅವರನ್ನು ನಿರಾಕರಿಸಲಾಯಿತು. ಇದೇ ವಿಷಯವನ್ನು ಇಟ್ಟುಕೊಂಡು ಇಂದು ಮಕ್ಕಳೊಂದಿಗೆ ಸೇರಿ ವಿನಾಕಾರಣ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಶಾಲೆಯಲ್ಲಿ ಮೂವರು ಖಾಯಂ ಹಾಗೂ ನಾಲ್ವರು ಅತಿಥಿ ಶಿಕ್ಷಕರುಗಳಿದ್ದಾರೆ. ಇನ್ನು ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ೫ ಕಂಪ್ಯೂಟರ್ ಹಾಗೂ ಒಂದು ಪ್ರೊಜೆಕ್ಟರ್ ನೀಡಿದೆ. ಆದರೆ ಅದರ ಟೇಬಲ್‌ಗಳು ಹಾಗೂ ಶಿಕ್ಷಕರನ್ನು ನೀಡಿಲ್ಲ. ವಿದ್ಯುತ್ ವ್ಯವಸ್ಥೆ ಇದ್ದರೂ ನಿರಂತರ ವಿದ್ಯುತ್ ವ್ಯವಸ್ಥೆಯಿಲ್ಲ. ಹೀಗಾಗಿ ಅವುಗಳನ್ನು ಹಾಗೇ ಇಡಲಾಗಿದೆ. ಇದರಲ್ಲಿ ನನ್ನ ತಪ್ಪೇನು ಇಲ್ಲ ಎಂದು ವಿವರಣೆ ನೀಡುತ್ತಾರೆ.
ನಮ್ಮ ಶಾಲೆಗೆ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿ ಎಂದು ವಿದ್ಯಾರ್ಥಿನೀಯರಾದ ರಾಜೇಶ್ವರಿ ಈಶ್ವರಪ್ಪಗೋಳ, ಭಾಗ್ಯಶ್ರೀ ಹೊಸಮನಿ, ಕಾಂಚನ ಹಡಪದ, ರಾಜೇಶ್ವರಿ ಬೇನೂರ, ಶರಣಮ್ಮ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಆಗ್ರಹಿಸುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

