ಕೆರೆಗೆ ಬಾಗಿನ ಅರ್ಪಣೆ | ಗ್ರಾಮಸ್ಥರ ಹರ್ಷ | ಶಾಸಕ ಮನಗೂಳಿ ಭರವಸೆ
ಮೋರಟಗಿ: ಗ್ರಾಮದ ಕೆರೆ ಅಭಿವೃದ್ಧಿಪಡಿಸಲು ೨ ಕೋಟಿ ರೂ.ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಶನಿವಾರ ಗ್ರಾಮದ ೧೪ ಎಕರೆ ೨೬ ಗುಂಟೆ ವಿಶಾಲ ಕೆರೆಗೆ ನೀರು ಹರಿಸಿದ ಪ್ರಯುಕ್ತ ಶನಿವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಗ್ರಾಮಸ್ಥರ ಕುಡಿವ ನೀರಿನ ಬವಣೆ ತಪ್ಪಿಸಲು ಕೆರೆಗೆ ನೀರು ಹರಿಸುವಂತೆ ಗ್ರಾಪಂ ಅಧಿಕಾರಿಗಳು ಹಾಗೂ ಹಿರಿಯರು ವಿನಂತಿಸಿದ್ದರು. ಅವರ ಕೋರಿಕೆಯಂತೆ ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್, ಗ್ರಾಪಂ ಅಧಿಕಾರಿಗಳು ಕೆರೆ ತುಂಬಿಸಲು ಸಾಕಷ್ಟು ಶ್ರಮಿಸಿದ್ದಾರೆ. ಚುನಾವಣೆ ನಂತರ ಅನುದಾನ ಮಂಜೂರು ಮಾಡಿಸಿ ಕೆರೆಯ ನಾಲ್ಕು ಬದಿಗೆ ಒಡ್ಡು ಹಾಕಿ ಅಭಿವೃದ್ಧಿಪಡಿಸುವ ಜತೆಗೆ ಕೆರೆ ದಾರಿ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕದ ೨೩೬ ತಾಲೂಕುಗಳಲ್ಲಿ ೨೧೪ ತಾಲೂಕುಗಳನ್ನು ಸರ್ಕಾರ ಬರ ಪೀಡಿತ ಎಂದು ಘೋಷಿಸಿದೆ. ಇಂಥ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನ, ಜಾನುವಾರುಗಳಿಗೆ ಕುಡಿವ ನೀರು ಒದಗಿಸಬೇಕು ಎಂಬ ಕಳಕಳಿಯಿಂದ ಸರ್ಕಾರ ಕೆರೆ ತುಂಬಿಸುವ ಯೋಜನೆಗೆ ಮುಂದಾಗಿದೆ.
ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಭಾಗದ ಕೆರೆಗಳಿಗೂ ನೀರು ಹರಿಸುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ ೩೨ ಟಿಎಂಸಿ ನೀರು ಇದ್ದು, ಗುತ್ತಿಬಸವಣ್ಣ ಏತ ನೀರಾವರಿ ಹಾಗೂ ಐಬಿಸಿ ಕೆನಾಲ್‌ಗೆ ಸತತವಾಗಿ ೮ ದಿನಗಳಿಂದ ನೀರು ಹರಿಸಲಾಗುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಮೇ ತಿಂಗಳಲ್ಲಿ ಮತ್ತೆ ನೀರು ಹರಿಸಲಾಗುವುದು ಎಂದರು.
ಸಿಂದಗಿ ಜನತೆ ಕುಡಿವ ನೀರಿಗೆ ತೊಂದರೆ ಆಗದಿರಲಿ ಎಂದು ಪಟ್ಟಣದ ೫೪ ಎಕರೆ ಕೆರೆಗೆ ಬಳಗಾನೂರ ಕೆರೆ ಹಾಗೂ ಯರಗಲ್ ಬಿಕೆ ಹತ್ತಿರದ ಕೆನಾಲ್‌ನಿಂದ ಪೈಪ್‌ಲೈನ್ ಮಾಡಿಸಿ ನೀರು ತುಂಬಿಸಲಾಗುತ್ತಿದೆ. ಆಲಮೇಲ ಪಟ್ಟಣದ ೭೪ ಎಕರೆ ಕೆರೆ ಅಭಿವೃದ್ಧಿಗೆ ಮೂರುವರೆ ಕೋಟಿ ರೂ., ಹಂದಿಗನೂರು ಗ್ರಾಮದಲ್ಲಿ ಕೆರೆ ನಿರ್ಮಿಸಲು ೨ ಕೋಟಿ ರೂ.ಮಂಜೂರು ಮಾಡಿಸಿ ಕೆರೆ ನಿರ್ಮಿಸಲಾಗಿದೆ. ಸಿಂದಗಿಯಲ್ಲಿ ೯ ಬಾವಿ ಸಂಪೂರ್ಣ ಹಾಳು ಬಿದ್ದಿದ್ದಿದ್ದವು. ೩೦ ಲಕ್ಷ ರೂ.ಮಂಜೂರು ಮಾಡಿಸಿ ಮೂರು ಬಾವಿಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ ಮಾತನಾಡಿದರು.
೫ ದಿನಗಳಿಂದ ಮುಖ್ಯ ಕೆನಾಲ್‌ನಿಂದ ಕಾಲುವೆ ನಿರ್ಮಿಸಿ ಕೆರೆ ತುಂಬಲಾಗುತ್ತಿದ್ದು, ಅಂತರ್ಜಲ ಹೆಚ್ಚಾಗಿ ೩ ಬಾವಿ, ೮ ಬೋರ್‌ವೆಲ್ ಪುನಶ್ಚೇತನಗೊಂಡಿವೆ. ಎರಡು ದಿನಗಳಲ್ಲಿ ಕೆರೆ ಸಂಪೂರ್ಣ ತುಂಬಲಿದೆ. ಗ್ರಾಮಸ್ಥರು ಶಾಸಕರ ಕಳಕಳಿ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕೆಬಿಜೆಎನ್‌ಎಲ್ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್, ಕೆಡಿಪಿ ಸದಸ್ಯ ಎನ್.ಎನ್.ಪಾಟೀಲ, ರವಿಕಾಂತ ನಡುವಿನಕೇರಿ, ಯುಸೂಫ್ ಮುಲ್ಲಾ, ವೀರನಗೌಡ ಪಾಟೀಲ, ರಜಾಕ್ ಬಾಗವಾನ್, ಸಲೀಮ್ ಕಣ್ಣಿ, ಇನಾಯತ್ ದೊಡಮನಿ, ಸಿದ್ದು ಮುಂದೇವಾಲಿ, ಧರ್ಮರಾಜ ಯಂಟಮನ, ಸಿದ್ದು ಶೀಲವಂತ, ಮಲ್ಲು ದುದ್ದಗಿ, ಬಂದೇನವಾಜ್ ಕಣ್ಣಿ, ಜೆ.ಕೆ.ನೆಲ್ಲಗಿ, ಹುಸೇನ್‌ಬಾಷಾ ಬಾಗವಾನ್, ಶಕೀಲ ಮುಲ್ಲಾ, ಹಸನಸಾಬ್ ಶಿರಷ್ಯಾಡ, ಗ್ರಾಪಂ ಸಿಬ್ಬಂದಿ, ಸರ್ವ ಸದಸ್ಯರು, ಗ್ರಾಮಸ್ಥರು ಇದ್ದರು.

