ಬಿಸಿ ಗಾಳಿಗೆ ಜನ ಹೈರಾಣ | ಧಗೆ ತಣಿಸಲು ಪಾನೀಯಗಳ ಮೊರೆ | ರಸ್ತೆಗೆ ಇಳಿಯಲು ಜನರು ಹಿಂದೇಟು
– ಇಲಿಯಾಸ್ ಪಟೇಲ್ .ಬ
ಯಾದಗಿರಿ: ಗಿರಿನಾಡು ಎಂದೇ ಹೆಸರುವಾಸಿಯಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಸೂರ್ಯ ಜನರ ನೆತ್ತಿ ಸುಡುವುದರ ಜೊತೆಗೆ ಮೈಬೆವರನ್ನು ಇಳಿಸುತ್ತಿದ್ದಾನೆ.
ಬೇಸಿಗೆ ಬಿಸಿಯ ಉಷ್ಣಾಂಶ ಹೆಚ್ಚಳವಾಗಿರುವ ಹಿನ್ನೆಲೆ ಬೇಸಿಗೆಯಿಂದ ಜನರು ದಣಿವಾರಿಸಿ ಕೊಳ್ಳಲು ತಂಪು ಪಾನೀಯ ಹಾಗೂ ಎಳನೀರಿನ ಮೊರೆ ಹೋಗುತ್ತಿದ್ದು, ಅವುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ ಹೀಗೆ ಹಲವಾರು ಕಡೆಯ ಜನತೆ ರಣ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ ಅಂತಾನೇ ಹೇಳಬಹುದು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೂರ್ಯನ ಧಗೆ ಜನರ ನೆತ್ತಿಸುಡುತ್ತಿದೆ. ಇದರಿಂದ ಜನರು ನಿತ್ರಾಣವಾಗಿ ದಾಹ ನೀಗಿಸಿಕೊಳ್ಳಲು ತಂಪು ಪಾನೀಯಗಳಾದ ಕಬ್ಬಿನ ಹಾಲು, ಎಳೆನೀರು, ಮಜ್ಜಿಗೆ, ನಿಂಬೆಹಣ್ಣಿನ ಜ್ಯೂಸ್ ಗಳಂತಹ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಬಿಸಿಲಿನ ಜೊತೆಗೆ ಬಿಸಿ ಗಾಳಿಯೂ ಸಹ ಜನರನ್ನು ತತ್ತರಿಸುವಂತೆ ಮಾಡಿದೆ. ನಾಗರಿಕರು ಬಿಸಿಲಿನ ತಾಪಕ್ಕೆ ದಣಿವಾರಿಸಲು ಎಳೆನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಎಳೆನೀರಿನ ಬೆಲೆ ಹೆಚ್ಚಾಗಿದ್ದರೂ, ಬಿಸಿಲಿನ ತಾಪವನ್ನು ತಗ್ಗಿಸಿಕೊಳ್ಳಲು ಅದರ ಮತ್ತು ತಂಪು ಪಾನಿಯ ಹಾಗೂ ಕಬ್ಬಿನ ರಸಕ್ಕೆ ಮೊರೆ ಹೋಗುತ್ತಿದ್ದಾರೆ. ಈ ಬಾರಿ ರಣ ಬಿಸಿಲಿನಿಂದ ನೆತ್ತಿ ಸುಡುತ್ತಿದ್ದು ಬರುವ ದಿನಗಳಲ್ಲಿ ಬಿಸಿಲಿನ ತಾಪ ಮತ್ತಷ್ಟು ತೀವ್ರಗೊಳ್ಳಲಿದೆ.
ಮನೆಯಿಂದ ಹೊರ ಬರಲು ಜನರು ಹಿಂದೇಟು
ಯಾದಗಿರಿ ಜಿಲ್ಲೆಯಲ್ಲಿ ಸದ್ಯ ಸಂಜೆ 5ಗಂಟೆಯವರೆಗೆ 38 ಡಿಗ್ರಿ ಸೆಲ್ಸಿಯಸ್ ತಾಪ ಮಾನವಿದ್ದು, ಬಿಸಿಲಿನ ಜಳ ಜನರ ಬೆವರಿಳಿಸುತ್ತಿದೆ. ಮಕ್ಕಳು, ಮಹಿಳೆಯರು, ವಯೋವೃದ್ದರು ಬಿಸಿಲಿನ ಪರಿಣಾಮ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಿವಿಧ ಕಾರ್ಯದ ನಿಮಿತ್ತ ಹೊರ ಬರುವ ಜನರು ಛತ್ರಿಗೆ ಮೊರೆ ಹೋಗಿದ್ದಾರೆ. ಗ್ರಾಮೀಣ ಪ್ರದೇಶದ ಜನರು ನೆರಳಿಗೆ ಹೊಂಗೆ ಮರವನ್ನು ಆಶ್ರಯಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಕೆರೆ, ಕುಂಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕುಡಿಯುವ ನೀರಿಗೆ ಸದ್ಯದ ಪರಿಸ್ಥಿತಿಯಲ್ಲಿ ಬೆರಳೆಣಿಕೆ ಗ್ರಾಮಗಳಲ್ಲಿ ಸಮಸ್ಯೆಯಿದೆ. ಆದರೆ ಬಿಸಿಲಿನ ಆರ್ಭಟ ಮಾತ್ರ ಜನರನ್ನು ತಲ್ಲಣಗೊಳಿಸಿದೆ. ಇನ್ನೂ ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವುದರಿಂದ ನೀರಿನ ಸಮಸ್ಯೆ ಒಂದೆಡೆಯಾದರೆ, ಪಾನೀಯಗಳ ಬೆಲೆಯೂ ದುಬಾರಿಯಾಗುತ್ತಿದೆ.
ಹೆಚ್ಚುತ್ತಿರುವ ಬಿಸಿಲಿನ ಕಾವು ಆರಂಭದಲ್ಲೆ ಉರಿಬಿಸಿಲಿನ ಅನುಭ ವಕ್ಕೆ ಬೆಚ್ಚಿ ಬೀಳುತ್ತಿರುವ ನಾಗರಿಕರು ಪ್ರಾರಂಭದಲ್ಲಿ ಹೀಗಾದರೆ, ಏಪ್ರಿಲ್, ಮೇ ತಿಂಗಳು ಹೇಗಪ್ಪಾ ಕಳೆಯುವುದು ಎಂಬ ಚಿಂತೆ ಜನರಲ್ಲಿ ಮನೆ ಮಾಡಿದೆ.


