ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನಡೆದ ವಿಶೇಷ ಸಂವಾದದಲ್ಲಿ ಡಾ.ನವೀನ ಪಟ್ಟಣಶೆಟ್ಟಿ ಅಭಿಮತ
ವಿಜಯಪುರ: ಸತ್ತಂತೆ ಬದುಕುವುದಕ್ಕಿಂತ ಸತ್ತ ಮೇಲೂ ಬದುಕುವುದು ನಿಜವಾದ ಬದುಕಾಗಿದ್ದು ಆ ಕಾರ್ಯ ಆಗಬೇಕಾದಲ್ಲಿ ಅಂಗಾಂಗಗಳನ್ನು ದಾನ ಮಾಡುವುದೊಂದೆ ಮಾರ್ಗವಾಗಿದೆ. ಸತ್ತ ಮೇಲೆ ಮಣ್ಣಾಗುವ ಈ ಶರೀರದಿಂದ ಸಾಯುವ ಅಂಚಿನಲ್ಲಿರುವ ಜೀವಗಳಿಗೆ ಬದುಕು ನೀಡಬಹುದು ಎಂದು ಮೂತ್ರಪಿಂಡಗಳ ಕಸಿ ತಜ್ಞರಾದ ಡಾ.ನವೀನ ಪಟ್ಟಣಶೆಟ್ಟಿ ಹೇಳಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಅವರು; ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಾಯಲೇ ಬೇಕು ಎನ್ನುವುದು ನಿಸರ್ಗದ ನಿಯಮವಾಗಿದೆ. ಆ ನಿಯಮದ ಪ್ರಕಾರ ಪ್ರತಿನಿತ್ಯವೂ ಸಾಕಷ್ಟು ಜನ ಪ್ರಾಣ ಬಿಡುತ್ತಿದ್ದಾರೆ. ಆದರೆ ಸತ್ತ ಮೇಲೆ ಮತ್ತೊಮ್ಮೆ ಬದುಕಿ ಉಳಿಯಬೇಕಾದರೆ ಅದಕ್ಕಿರುವ ಏಕೈಕ ಮಾರ್ಗವೆಂದರೆ ಅದು ಅಂಗಾಂಗ ದಾನವಾಗಿದೆ. ಕೆಲವು ಸಂದರ್ಭಗಳಲ್ಲಿ ಸಂಭವಿಸುವ ಮೃತ್ಯುವಿನಿಂದ ವ್ಯಕ್ತಿಯು ನಮ್ಮನ್ನು ಅಗಲಿ ಹೋಗುತ್ತಾರೆ. ಆದರೆ ಅವರಿಗೆ ತಮ್ಮ ದೇಹದ ಭಾಗಗಳಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎನ್ನುವುದರ ಕುರಿತು ಮನದಟ್ಟು ಮಾಡಿಕೊಟ್ಟರೆ ಸಾವುಗಳು ಕೂಡ ಸಾರ್ಥಕತೆ ಪಡೆದುಕೊಳ್ಳುತ್ತವೆ. ಅದರಲ್ಲೂ ಮೂತ್ರ‍್ರಪಿಂಡಗಳ ವೈಫಲ್ಯದಿಂದ ಸಾವನ್ನಪ್ಪುವುದನ್ನು ತಡೆಯುವುದಕ್ಕೆ ಎರಡು ಮಾರ್ಗಗಳಿದ್ದು, ಒಂದು ಹತ್ತಿರದ ರಕ್ತ ಸಂಬಂಧಿಗಳು ಸ್ವಯಂಪ್ರೇರಿತವಾಗಿ ತಮ್ಮ ಮನೆಯಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾದ ವ್ಯಕ್ತಿಗೆ ಕಿಡ್ನಿ ದಾನ ಮಾಡಬಹುದು. ಹಾಗೂ ಇನ್ನೊಂದು ಸರ್ಕಾರ ನಿಯಮಿಸಿದ ಕೇಂದ್ರದಡಿಯಲ್ಲಿ ಅಪಘಾತ ಹಾಗೂ ಅಸಹಜ ಸಾವುಗಳಿಂದ ಮೃತ ವ್ಯಕ್ತಿಯ ಆಸೆಯಂತೆ ಅಥವಾ ಅವರ ಸಂಬಂಧಿಕರ ಒಪ್ಪಿಗೆಯಂತೆ ಸಿಗುವ ಕಿಡ್ನಿಗಳಿಂದ ಕಿಡ್ನಿ ವೈಫಲ್ಯಕ್ಕೊಳಗಾದ ರೋಗಿಗಳ ಬದುಕನ್ನು ಬದಲಿಸಬಹುದು. ಆದರೆ ಇದರ ಕುರಿತಾಗಿ ಬಹಳ ಜನಗಳಿಗೆ ತಿಳುವಳಿಕೆ ಇಲ್ಲದಂತಾಗಿದೆ. ಹೀಗಾಗಿ ನಮ್ಮ ದೇಶದಲ್ಲಿ ಒಂದು ದಿನಕ್ಕೆ ಅರವತ್ತು ಕಿಡ್ನಿ ಕಸಿಗಳು ನಡೆದರೆ ಸರಿ ಸುಮಾರು ಹತ್ತೊಂಬತ್ತು ಪ್ರಕರಣಗಳಲ್ಲಿ ಕಿಡ್ನಿ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಮತ್ತೆ ಕೆಲವರಲ್ಲಿ ಧಾರ್ಮಿಕ ಆಚರಣೆ ಹೆಸರಿನಲ್ಲಿ ಕಿಡ್ನಿ ನೀಡಿದರೆ ಸ್ವರ್ಗ ಸಿಗುವುದಿಲ್ಲ, ಮುಕ್ತಿ ಸಿಗುವುದಿಲ್ಲ ಎಂದುಕೊಂಡು ಅಂಗಾಂಗ ದಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಇದು ಶುದ್ಧ ತಪ್ಪಾಗಿದ್ದು ಜನರು ಆ ಮೂಡ ನಂಬಿಕೆಗಳು ಹಾಗೂ ಅರ್ಥವಿದಲ್ಲಿದ ಆಚರಣೆಗಳಿಂದ ಹೊರ ಬಂದು ಪರೋಪಕಾರಕ್ಕೆ ತೆರೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಜೆಎಸ್‌ಎಸ್ ಆಸ್ಪತ್ರೆಯ ಇನ್ನೋರ್ವ ಕಿಡ್ನಿ ಕಸಿ ತಜ್ಞ ಡಾ.ರಾಕೇಶ ಪಾಟೀಲ ಮಾತನಾಡಿದರು.
ಅಲ್ಲದೇ ಕಿಡ್ನಿ ಟ್ರಾನ್ಸ್ಪ್ಲಾಂಟ್ ನಂತರದಲ್ಲಿ ಕಿಡ್ನಿ ನೀಡಿದವರಿಗೂ ಹಾಗೂ ಪಡೆದುಕೊಂಡವರಿಗೂ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದ್ದು ಇದರ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮವಲ್ಲಿ ನೂರಾರು ಡಯಾಲಿಸಿಸ್ ರೋಗಿಗಳು ಪಾಲ್ಗೊಂಡು ತಮ್ಮ ಅನುಭವವನ್ನು ಹಂಚಿಕೊಳ್ಳುವುದರೊಂದಿಗೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಅನುಮಾನಗಳನ್ನು ನೀಗಿಸಿಕೊಂಡರು.
ಎರಡು ಯಶಸ್ವಿ ಕಿಡ್ನಿ ಟ್ರಾನ್ಸಪ್ಲಾಂಟ್‌ನಲ್ಲಿ ಭಾಗವಹಿಸಿದ ಸರ್ವ ಸಿಬ್ಬಂದಿ ವರ್ಗದವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಯಿತು.
ಈ ಸಂವಾದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿವರ್ಗ ಭಾಗವಹಿಸಿದ್ದರು.

