ದೇವರಹಿಪ್ಪರಗಿ: ಬಿಜೆಪಿ ಹಿಂದುಳಿದ ವರ್ಗವನ್ನು ಸದಾ ಕಡೆಗಣಿಸುತ್ತಲೇ ಬಂದಿದ್ದು, ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡು ಬಿಸಾಕುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎರಡು ಪ್ರಬಲ ಸಮುದಾಯಗಳಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ ಎಂದು ಕೋಲಿ ಕಬ್ಬಲಿಗ ಯುವವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಲೋಕಸಭಾ ಚುನಾವಣೆಯಲ್ಲಿ ಹಾವೇರಿಯಿಂದ ಕೆ.ಎಸ್. ಈಶ್ವರಪ್ಪನವರ ಮಗನಿಗೆ ಟಿಕೆಟ್ ನೀಡಲಾಗುವುದೆಂದು ಹೇಳಿ ಮೋಸ ಮಾಡಲಾಯಿತು. ಅದರಂತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ ಮದ್ವರಾಜ ಅವರಿಗೆ ಟಿಕೆಟ್ ನೀಡದೇ ಹಿಂದುಳಿದ ವರ್ಗವನ್ನು ತುಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ. ಅಹಿಂದ್ ವರ್ಗವನ್ನು ಕೇವಲ ವ್ಹೋಟ್ ಬ್ಯಾಂಕ ರಾಜಕಾರಣಕ್ಕಾಗಿ ಬಳಸಿಕೊಂಡು ಅಧಿಕಾರ ನೀಡುವಾಗ ಕೇವಲ ಮೇಲ್ವರ್ಗದವರಿಗೆ ನೀಡುತ್ತಿರುವುದು ಹಲವಾರು ನಿದರ್ಶನಗಳಿವೆ.
ರಾಜ್ಯದಲ್ಲಿ ಸುಮಾರು ೭೦ಲಕ್ಷ ಕುರುಬ ಸಮುದಾಯವಿದ್ದು, ಅವರಿಗೂ ಒಂದು ಟಿಕೆಟ್ ಇಲ್ಲದಂತಾಗಿದೆ. ಅದರಂತೆ ಸುಮಾರು ೫೦ಲಕ್ಷದಷ್ಟಿರುವ ಕೋಲಿ ಕಬ್ಬಲಿಗ, ಮೀನುಗಾರರು, ಸೇರಿದಂತೆ ೩೭ ರ‍್ಯಾಯ ಪದಗಳ ಸೇರಿ ಈ ಸಮುದಾಯದವರಿಗೂ ಟಿಕೆಟ್ ವಂಚಿತರನ್ನಾಗಿ ಮಾಡಿದ್ದು, ಬಿಜೆಪಿಯ ಮುಖವಾಡ ಬಯಲಾಗಿದೆ. ಕೆ.ಎಸ್. ಈಶ್ವರಪ್ಪ ಕಟ್ಟಾ ಬಿಜೆಪಿಗರು, ಆದರೆ ಯಡಿಯೂರಪ್ಪನವರಂತ ಕೆಜೆಪಿ ಕಟ್ಟಿ ಪಕ್ಷದ್ರೋಹ ಮಾಡಿದವರಿಗೆ ಮಣೆ ಹಾಕಲಾಗುತ್ತಿದೆ. ಪಕ್ಷ ಸಂಘಟನೆ ಮಾಡಿದವರ ಗತಿಯೇನು? ಎನ್ನುವಂತಾಗಿದೆ. ಇದೇ ರೀತಿ ಕೋಲಿ ಕಬ್ಬಲಿಗ ಸಮುದಾಯದವರಿಗೆ ಎಸ್ಟಿ ಮೀಸಲಾತಿ ನೀಡುತ್ತೇನೆ ಎಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿಗಳು ಕಲಬುರಗಿಯಲ್ಲಿ ಆಶ್ವಾಸನೆ ನೀಡಿದ್ದರು. ಐದು ವರ್ಷಗಳಾದರೂ ನಮಗೆ ಅಚ್ಛೇ ದಿನ್ ಬಂದಿಲ್ಲ. ಅದಕ್ಕಾಗಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದವರು ಅದರಲ್ಲಿ ವಿಶೇಷವಾಗಿ ಕೋಲಿ ಕಬ್ಬಲಿಗ ಹಾಗೂ ಕುರುಬ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸುವುದರ ಕುರಿತು ವಿಚಾರ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

