ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಆರೋಪ
ದೇವರಹಿಪ್ಪರಗಿ: ಅನುದಾನ, ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿ ನೀಡದೇ, ಎಲ್ಲವುಗಳಿಗೆ ನಾನೇ ಕಾರಣ ಎಂಬ ಹೇಳಿಕೆ ನೀಡಿ ಶಾಸಕರು ಸಣ್ಣತನ ತೋರುತ್ತಿದ್ದಾರೆ ಇದು ಶಾಸಕ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ ಗಂಭೀರವಾಗಿ ಆರೋಪಿಸಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷರು, ಜಿಲ್ಲೆಯ ಉಸ್ತುವಾರಿ ಸಚಿವರ ಸಹಕಾರ ಹಾಗೂ ಆಸಕ್ತಿಯಿಂದ ಮತಕ್ಷೇತ್ರಕ್ಕೆ ಅಗತ್ಯವಾದ ಅನುದಾನ ತರುವಲ್ಲಿ ಮಾಜಿಶಾಸಕ ಶರಣಪ್ಪ ಸುಣಗಾರ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತಾಲ್ಲೂಕು ಕೇಂದ್ರಕ್ಕೆ ಅಗತ್ಯವಾದ ಕಚೇರಿಗಳ ಆರಂಭಕ್ಕೆ ಸರ್ಕಾರದ ನೆರವು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದೊಂದಿಗೆ ಅಗತ್ಯ ಪ್ರಯತ್ನದಲ್ಲಿದೆ. ಆದರೆ ಕ್ಷೇತ್ರದ ಶಾಸಕರು ಮಾತ್ರ ಗ್ರಾಮ ಪಂಚಾಯಿತಿ ಮಟ್ಟದ ಸಭೆ ಹಾಗೂ ಯೋಜನೆಗಳಲ್ಲಿ ಅನಗತ್ಯ ಹಸ್ತಕ್ಷೇಪ ಕೈಗೊಳ್ಳುತ್ತಿದ್ದಾರೆ. ಅಲ್ಲದೆ ಹಿಂದಿನ ಶಾಸಕರ ಹಾಗೂ ಸರ್ಕಾರದ ಯೋಜನೆಗಳಿಗೆ ಹಿಂದೆಯೇ ಗುದ್ದಲಿಪೂಜೆ ನೆರವೇರಿಸಿದ್ದರೂ ಸಹ ಮತ್ತೋಮ್ಮೆ ‘ಸನಿಕೆಪೂಜೆ’ ಜರುಗಿಸುವ ಮೂಲಕ ಕ್ಷೇತ್ರದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.
ದೇವರಹಿಪ್ಪರಗಿ ಪಟ್ಟಣದ ಸರ್ಕಾರಿ ಕಾಲೇಜು, ಪಡಗಾನೂರ ರಸ್ತೆ ಹಾಗೂ ಕುಡಿಯುವ ನೀರಿನ ಜೆಜೆಎಮ್, ಭೂಸೇನಾ ನಿಗಮದ ಕಾರ್ಯಗಳಿಗೆ ಹಿಂದಿನ ಸರ್ಕಾರದಲ್ಲಿಯೇ ಅನುದಾನ ದೊರೆತು ಪೂಜೆ ಜರುಗಿಸಲಾಗಿದೆ. ಆದರೆ ಶಾಸಕರು ಈಗ ಪುನಃ ಯಾವ ಯೋಜನೆ, ಯಾವ ವರ್ಷ, ಯಾವ ಇಲಾಖೆಯಡಿ ಅನುಮೋದನೆ, ಯಾರು ಗುತ್ತಿಗೆದಾರರು? ಎಂಬ ಯಾವ ಮಾಹಿತಿಗಳನ್ನು ಒಳಗೊಂಡಿರದ ಬ್ಯಾನರ್‌ಗಳೊಂದಿಗೆ ಬಂದು ಸನಿಕೆಪೂಜೆ ಮಾಡುತ್ತಿದ್ದಾರೆ. ಅಲ್ಲದೇ ಈಗ ರಾಜ್ಯ ಸರ್ಕಾರ ನೀಡಿರುವ ಬಡವರ ಮನೆಗಳಿಗೂ ತಮ್ಮದೇ ಹೆಸರು ಹೇಳುತ್ತಿದ್ದಾರೆ. ಅಲ್ಲದೇ ಜಾತಿಯಾಧಾರಿತವಾಗಿ ತಾರತಮ್ಯ ನೀತಿ ಅನುಸರಿಸಿ ತಮಗೆ ಬೇಕಾದವರಿಗೆ ಮಾತ್ರ ಅನುಕೂಲ ಕಲ್ಪಿಸುತ್ತಿದ್ದಾರೆ. ಹಿಂದಿನ ಯಾವ ಶಾಸಕರು ಅಳವಡಿಸಿಕೊಳ್ಳದ ಇಬ್ಬಗೆಯ ನೀತಿ ಅವರ ಸ್ಥಾನಕ್ಕೆ ಯೋಗ್ಯವಾದುದಲ್ಲ. ಇದು ಅವರ ದ್ವೇಷಪೂರಿತ ರಾಜಕೀಯ ಹಾಗೂ ಸಣ್ಣತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

