ಅನಾರೋಗ್ಯದಿಂದ ಅಸ್ವಸ್ಥಗೊಂಡ ಅಪರಿಚಿತ ವಯೋವೃದ್ಧನನ್ನು ಆಸ್ಪತ್ರೆಗೆ ಸಾಗಿಸಿದ ಕರವೇ ಅಧ್ಯಕ್ಷ
– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಪಟ್ಟಣದ ಸಮೀಪವಿರುವ ಬಸವನಹಟ್ಟಿ ಕ್ರಾಸಿನ ಬಸ್ತಂಗುದಾಣದಲ್ಲಿ ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಅಸ್ವಸ್ಥಗೊಂಡ ಅಪರಿಚಿತ ವಯೋವೃದ್ಧನನ್ನು ಅಂಬ್ಯುಲೆನ್ಸ್ ಸಿಬ್ಬಂದಿಗಳ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಒರ್ವ ವಯೋವೃದ್ಧನ ಜೀವ ಕಾಪಾಡಿದ ಮಾನವೀಯ ಘಟನೆ ಗುರುವಾರ ಜರುಗಿದೆ.
ಕಳೆದ ಮೂರು ದಿನಗಳಿಂದ ಅಪರಿಚಿತ ಸುಮಾರು ೬೨ ವರ್ಷದ ವೃದ್ಧ ಬಸವನಹಟ್ಟಿ ಕ್ರಾಸಿನ ಬಸ್ ತಂಗುದಾಣದಲ್ಲಿದ್ದಾರೆ. ಇದನ್ನು ಗಮನಿಸಿದ ಬಸ್ ತಂಗುದಾಣದ ಹತ್ತಿರ ತೋಟದ ನಿವಾಸಿ ಅಸ್ತಾಪ ಬಾಗವಾನ ಅವರು ಸೇರಿದಂತೆ ಇತರರು ವೃದ್ದನಿಗೆ ಆಹಾರ, ನೀರು, ಜ್ಯೂಸ್ ನೀಡಿದ್ದಾರೆ. ತೀವ್ರ ಅನಾರೋಗ್ಯದಿಂದ ಅಸ್ವಸ್ಥಗೊಂಡ ವೃದ್ಧ ನಿತ್ರಾಣವಾಗಿ ಮಲಗಿಕೊಂಡಿದ್ದಾನೆ. ವಿಪರೀತ ಬಿಸಿಲಿನ ತಾಪವು ವೃದ್ಧನನ್ನು ಹೈರಾಣ ಮಾಡಿದೆ. ಇದನ್ನು ಕಂಡ ಅಸ್ತಾಪ ಬಾಗವಾನ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಅವರಿಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ತಕ್ಷಣವೇ ಅಶೋಕ ಹಾರಿವಾಳ ಅವರು ಸ್ಥಳಕ್ಕೆ ಬಂದು ತೀವ್ರ ಬಳಲಿದ ವೃದ್ಧನನ್ನು ನೋಡಿ ತಕ್ಷಣವೇ ಅಂಬ್ಯುಲೆನ್ಸ್ಗೆ ಕರೆ ಮಾಡಿ ಅನಾರೋಗ್ಯದಿಂದ ನಿತ್ರಾಣಗೊಂಡ ವೃದ್ಧನನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಶ್ರೀಶೈಲ ಮದರಕಿ, ಪರಶು ಒಡೆಯರ,ಅಸ್ತಾಪ ಬಾಗವಾನ ಇದ್ದರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾಸ್ಪತ್ರೆಯಲ್ಲಿ ಮುಂದಿನ ಚಿಕಿತ್ಸೆ ಕರೆದುಕೊಂಡು ಹೋಗಲಾಯಿತು.
ಅಶೋಕ ಹಾರಿವಾಳ ಅವರನ್ನು ದೂರವಾಣಿ ಮೂಲಕ ಶುಕ್ರವಾರ ಪತ್ರಿಕೆ ಸಂಪರ್ಕಿಸಿದಾಗ, ಬಸವನಹಟ್ಟಿ ಕ್ರಾಸಿನಲ್ಲಿರುವ ಬಸ್ ತಂಗುದಾಣದಲ್ಲಿ ಒರ್ವ ವೃದ್ಧನು ಅನಾರೋಗ್ಯದಿಂದ ತೀವ್ರವಾಗಿ ಬಳಲುತ್ತಿದ್ದಾನೆ ಎಂಬುವದು ಗೊತ್ತಾಯಿತು. ತಕ್ಷಣವೇ ನಾನು ಸ್ಥಳಕ್ಕೆ ಹೋಗಿ ಇದರ ಬಗ್ಗೆ ತಾಲೂಕಾ ವೈದ್ಯಾಧಿಕಾರಿ ಡಾ.ಎಸ್.ಎಸ್.ಓತಗೇರಿ ಅವರ ಗಮನಕ್ಕೆ ತಂದಾಗ ತಕ್ಷಣವೇ ಅವರು ಅಂಬ್ಯುಲೆನ್ಸ್ ಕಳುಹಿಸಿ ವೃದ್ಧನಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿದರು. ಈ ವೃದ್ಧನ ಹೆಸರು, ಊರು ಗೊತ್ತಾಗಿಲ್ಲ. ಯಾರಾದರೂ ಇವರ ಸಂಬಂಧಿಕರು ಇದ್ದರೆ ಜಿಲ್ಲಾಸ್ಪತ್ರೆಗೆ ಹೋಗಬಹುದು. ಈಗ ವೃದ್ಧನು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಗೊತ್ತಾಗಿದ್ದು. ವೃದ್ಧನು ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಗೊತ್ತಾಗಿದೆ. ಇದರಿಂದ ಅವರ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು.

