ನಾವದಗಿ ಗ್ರಾಮದಲ್ಲಿ ಮೌನಾನುಷ್ಠಾನ ಮಂಗಲೋತ್ಸವ ಹಾಗೂ ಧರ್ಮಸಭೆ
ತಾಳಿಕೋಟಿ: ಮನುಷ್ಯ ಜೀವನದಲ್ಲಿ ಭೋಗಗಳ ದಾಸನಾಗಬಾರದು ಧರ್ಮವಂತನಾಗಿ ದಾನ-ದಾಸೋಹ ದಂಥಹ ಉದಾತ್ತ ಗುಣಗಳನ್ನು ಬೆಳೆಸಿ ಕೊಳ್ಳಬೇಕು. ಸತ್ಕರ್ಮಗಳನ್ನು ಮಾಡುವ ಅವಕಾಶ ಸಿಕ್ಕಾಗ ಅದನ್ನು ಕಳೆದು ಕೊಳ್ಳಬಾರದು ಸತ್ಕರ್ಮಗಳಿಂದಲೇ ಸ್ವರ್ಗ ಪ್ರಾಪ್ತವಾಗುತ್ತದೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಹಾಗೂ ಜ್ಯೋತಿಷ್ಯ ರತ್ನ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ನಾವದಗಿ ಗ್ರಾಮದ ರಾಜಗುರು ಶ್ರೀ ಪರ್ವತೇಶ್ವರ ಸಂಸ್ಥಾನ ಬೃಹನ್ ಮಠದ ಶ್ರೀ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ 11ದಿನಗಳ ಮೌನಾನುಸ್ಟಾನ ಮಂಗಲೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ಸಮ್ಮುಖವನ್ನು ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ಢವಳಗಿ ಘನಮಟೇಶ್ವರ ಮಠದ ಶ್ರೀಗಳು ಮೌನಾನುಷ್ಠಾನ ಅಂದರೆ ತನ್ನನ್ನು ತಾನು ಶುದ್ಧೀಕರಿಸುವುದು ಆತ್ಮ ಉದ್ಧಾರ ಮಾಡಿಕೊಳ್ಳುವುದು ಎಂದಾಗಿದೆ ಇದೊಂದು ವಿಶಿಷ್ಟ ಸಾಧನೆಯ ಹೆಸರು ಇದರಿಂದ ಗುರು ಆದವರಿಗೆ ವಿಶೇಷ ಸಾಮರ್ಥ್ಯ ಸಿಗುತ್ತದೆ ಇದು ಭಕ್ತರನ್ನು ಸಂಸ್ಕರಿಸಲು ಅತ್ಯಗತ್ಯವಾಗಿದೆ. ಇದನ್ನು ನಿರಂತರವಾಗಿ ಮಾಡಲೇಬೇಕಾಗುತ್ತದೆ. ಗುರು ಪಟ್ಟಾಧಿಕಾರದ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಭಕ್ತರ ತ್ಯಾಗ ಬಹಳ ದೊಡ್ಡದಿದೆ. ಒಂದು ವರ್ಷ ಕಳೆದ ನಂತರ ಇದರ ವಾರ್ಷಿಕೋತ್ಸವ ಬರುತ್ತದೆ ಆ ಕಾರ್ಯಕ್ರಮಕ್ಕೆ ಉಳಿದಿಬ್ಬರು ಜಗದ್ಗುರುಗಳನ್ನು ಕರೆಸಿ ಮಾಡಲಾಗುವುದು ಎಂಬದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.
ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಶ್ರೀಗಳು ಹಾಗೂ ಜಿಪಂ ಮಾಜಿ ಸದಸ್ಯ ಬಸನಗೌಡ ವಣಿಕ್ಯಾಳ ಮಾತನಾಡಿದರು.
ಸಮಾರಂಭದ ಸಾನಿಧ್ಯವನ್ನು ವಹಿಸಿದ ದೇವರಹಿಪ್ಪರಗಿ ಜಡಿಮಠದ ಪರಮಪೂಜ್ಯ ಶ್ರೀ ಜಡೆ ಸಿದ್ದೇಶ್ವರ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ನಾವದಗಿ ಗ್ರಾಮದ ಭಕ್ತರು ತಮ್ಮ ಗ್ರಾಮದ ಹೆಸರು ಇತಿಹಾಸದಲ್ಲಿ ಅಮರವಾಗಿರುವಂಥಹ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಶ್ರೀಗಳ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ನಾಡಿನಲ್ಲಿ ಒಂದು ಇತಿಹಾಸವನ್ನು ಸ್ಥಾಪಿಸಿದೆ ಕಾರ್ಯಕ್ರಮ ನಡೆಸುವಲ್ಲಿ ಹಲವಾರು ಸಮಸ್ಯೆಗಳು ಎದುರಾದರೂ ಭಕ್ತರ ನಿಸ್ವಾರ್ಥ ಸೇವೆ ತ್ಯಾಗ ದೈವಿಶಕ್ತಿಯ ಆಶೀರ್ವಾದದಿಂದ ಎಲ್ಲವೂ ಸರಳವಾಗಿ ನಡೆದು ಯಶಸ್ವಿ ಆಯಿತು. ಈ ಕಾರ್ಯಕ್ರಮದ ಯಶಸ್ವಿಯಲ್ಲಿ ಏಳು ಜನ ಪೂಜ್ಯರ ತ್ಯಾಗ ಬಹಳಷ್ಟಿದೆ ಜೊತೆಗೆ ನಾವದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಾಯ ಸಹಕಾರವೂ ಇದೆ. ಮುಂದೆಯೂ ಇದೇ ರೀತಿಯಾದ ಪ್ರೀತಿ ವಿಶ್ವಾಸ ಶ್ರೀಮಠದ ಮೇಲೆ ಇರಲಿ ಎಂದರು.
ಹಲವಾರು ಗ್ರಾಮಗಳಿಂದ ಆಗಮಿಸಿದ ಶ್ರೀಮಠದ ಭಕ್ತರು ಪೂಜ್ಯ ಶ್ರೀ ರಾಜೇಂದ್ರ ಒಡೆಯರ್ ಶಿವಾಚಾರ್ಯರಿಗೆ ಗೌರವ ಸಮರ್ಪಣೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಈ ಸಮಯದಲ್ಲಿ ವೇ.ಮೂ.ಡಾ. ಗುರುಲಿಂಗಯ್ಯ ಹಿರೇಮಠ ಗುರು ಪಟ್ಟಾಧಿಕಾರ ಸ್ವಾಗತ ಸಮಿತಿಯ ಸದಸ್ಯರು ಹಾಗೂ ಅಪಾರಭಕ್ತರು ಉಪಸ್ಥಿತರಿದ್ದರು.

