ವಿಜಯಪುರ: ಈ ಕಾಮರ್ಸ್ ನಲ್ಲಿ ವ್ಯಾಪಾರ ವಹಿವಾಟು ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿಗಳು ಅವರ ಹಣವನ್ನು ಮೋಸದಿಂದ ಸೆಳೆಯುವ ಸಾಧ್ಯತೆ ಇದ್ದು ಗ್ರಾಹಕರು ತಮ್ಮ ವಹಿವಾಟಿನ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಸಂದೇಶಗಳನ್ನೂ ನಂಬಿ ಲಿಂಕ್ ಕ್ಲಿಕ್ ಅಥವಾ ವ್ಯಯಕ್ತಿಕ ಮಾಹಿತಿಗಳನ್ನು ನೀಡದೇ ಗ್ರಾಹಕರು ಜಾಗರೂಕತೆಯಿಂದ ವ್ಯವಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಂದರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಪ್ರಯುಕ್ತ ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿವಂತಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನಾಮಧೇಯ ವ್ಯಕ್ತಿಗಳು ನಿಮ್ಮ ಮೊಬೈಲ್ ಗೆ ಸಂದೇಶ ಕಳಿಸಿ, ಹಣ ಹೂಡಿದರೆ ದ್ವಿಗುಣ ವಾಗುತ್ತದೆ ಎಂದು ನಂಬಿಸುತ್ತಾರೆ. ಹಾಗೆ ನಿಮ್ಮ ಮೊಬೈಲ್ ಗೆ ಓಟಿಪಿ ಬಂದಿದೆ ಎಂದು ನಬಿಸುತ್ತಾರೆ. ಯಾವುದೇ ಕಾರಣಕ್ಕೂ ಮತ್ತೊಬ್ಬರಿಗೆ ಓಟಿಪಿ ಹೇಳಬಾರದು. ಈ ತರ ಯಾವುದೇ ಕರೆ, ಸಂದೇಶ ಬಂದರೆ ಹತ್ತಿರದ ಸೈಬರ್ ಕ್ರೈಮ್ ಗೆ ದೂರು ನೀಡಬೇಕು. ರಾಷ್ಟ್ರೀಯ ಹೆಲ್ಪ್ ಲೈನ್ ೧೯೩೦ ಕ್ಕೆ ಕರೆ ಮಾಡಿ ದೂರು ದಾಖಲಿಸಿದರೆ ತಕ್ಷಣವೇ ವರ್ಗಾವಣೆ ಆದ ಹಣವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಿಜಯಪುರ ಬಳಕೆದಾರರ ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿಗಳಾದ ಎಂ.ಜಿ. ಮಠಪತಿ ಉಪನ್ಯಾಸ ನೀಡಿ, ಆನಲೈನ್ ನಲ್ಲಿ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಬಳಕೆ ಮಾಡುವಾಗ ಅದರ ಬಗ್ಗೆ ಮಾಹಿತಿ ಹೊಂದಿರುವುದು ಅವಶ್ಯಕತೆಯಾಗಿದೆ. ಜಾಲತಾಣದಲ್ಲಿ ಬರುವ ಮಾಹಿತಿಯನ್ನು ನಂಬಿ ವ್ಯವಹಾರ ಮಾಡಬಾರದು. ಕೂಲಂಕುಷವಾಗಿ ಪರಿಶೀಲಿಸಿ ಮುಂದುವರೆಯಬೇಕು ಎಂದರು.
ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಅಧ್ಯಕ್ಷರಾದ ಅಂಬಾದಾಸ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗದ ಸದಸ್ಯರಾದ ವಿದ್ಯಾ ಗಲಗಲಿ, ಕಾನೂನು ಮಾಪನ ಶಾಸ್ತ್ರ ಸಹಾಯಕ ನಿರ್ದೇಶಕರಾದ ಶ್ರೀಕಾಂತ ಬುರಾಣಪುರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ವಿನಯಕುಮಾರ ಪಾಟೀಲ, ಕೆ ಎಫ್ ಸಿ ಎಸ್ ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಡಿ. ಆರ್. ನಾಯ್ಕೋಡಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ನ್ಯೂ ಸಂಸ್ಥೆ ಯ ಅಧ್ಯಕ್ಷರಾದ ಎಸ್.ಎಂ. ಕರೇಕಲ್ ಉಪಸ್ಥಿತರಿದ್ದರು.
ಎಚ್. ಎ. ಮಮದಾಪೂರ ಕಾರ್ಯಕ್ರಮ ನಿರೂಪಿಸಿದರು. ನಾಮದೇವ ಚವ್ಹಾಣ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

