’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ)
– ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು,ಬೆಳಗಾವಿ ಮೊ:೯೪೪೯೨೩೪೧೪೨

ನಾವೆಲ್ಲರೂ ಉತ್ತಮ ಮತ್ತು ಯಶಸ್ವಿ ಜೀವನವನ್ನು ಹುಡುಕುತ್ತಿದ್ದೇವೆ. ಆದರೆ ನಮ್ಮ ಮನೋಭಾವವು ಅದನ್ನು ಕಷ್ಟವಾಗಿಸುತ್ತಿದೆ. ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದರಿಂದ ಬೇಕಾದ ಜೀವನವನ್ನು ಪಡೆಯಬಹುದು. ಸಕಾರಾತ್ಮಕ ಮನೋಭಾವನೆಯೆಂದರೇನು? ಅದನ್ನು ಬೆಳೆಸಿಕೊಂಡು ಹೇಗೆ ಗೆಲ್ಲಬಹುದೆಂಬುದನ್ನು ತಿಳಿಯೋಣ ಬನ್ನಿ. ಸಕಾರಾತ್ಮಕ ಮನೋಭಾವ ಎಂದರೆ..
ಸಕಾರಾತ್ಮಕ ಮನೋಭಾವದ ಕುರಿತು ರೆಮೆಜ್ ನಾಸನ್ ಹೀಗೆ ಹೇಳುತ್ತಾರೆ. ‘ಧನಾತ್ಮಕ ಚಿಂತನೆಯು ಮಾನಸಿಕ ಮತ್ತು ಭಾವನಾತ್ಮಕ ಮನೋಭಾವವಾಗಿದ್ದು. ಅದು ಜೀವನದ ಪ್ರಕಾಶಮಾನವಾದ ಭಾಗವನ್ನು ಕೇಂದ್ರೀಕರರಿಸುತ್ತದೆ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ.’ ಇನ್ನೊಂದು ಹೆಚ್ಚು ವಿಸ್ತೃತವಾದ ಚರ‍್ರಿಯವರು ನೀಡಿರುವ ವ್ಯಾಖ್ಯಾನವನ್ನು ನೋಡುವುದಾದರೆ ‘ ಧನಾತ್ಮಕ ಚಿಂತನೆಯು ವಾಸ್ತವವಾಗಿ ಜೀವನದ ಸವಾಲುಗಳನ್ನು ಸಕಾರಾತ್ಮಕ ದೃಷ್ಟ್ಟಿಕೋನದಿಂದ ಸಮೀಪಿಸುವುದು ಎಂದರ್ಥ. ಕೆಟ್ಟ ವಿಷಯಗಳನ್ನು ತಪ್ಪಿಸುವುದು ಅಥವಾ ನಿರ್ಲಕ್ಷಿಸುವುದು ಎಂದರ್ಥವಲ್ಲ. ಬದಲಾಗಿ ಸಂಭಾವ್ಯ ಕೆಟ್ಟ ಸನ್ನಿವೇಶಗಳನ್ನು ಹೆಚ್ಚು ಬಳಸಿಕೊಳ್ಳುವುದು. ಇತರ ಜನರಲ್ಲಿ ಉತ್ತಮವಾದುದದ್ದನ್ನು ನೋಡಲು ಪ್ರಯತ್ನಿಸುವುದು ಮತ್ತು ನಿಮ್ಮನ್ನು ನಿಮ್ಮ ಸಾಮರ್ಥ್ಯಗಳನ್ನು ಸಕಾರಾತ್ಮಕವಾಗಿ ನೋಡುವುದನ್ನು ಒಳಗೊಂಡಿರುತ್ತದೆ.’ ಧನಾತ್ಮಕವಾದ ಮನಸ್ಥಿತಿಯು ಪ್ರಕಾಶಮಾನವಾದ ಬದಿಯಲ್ಲಿ ಗಮನಹರಿಸುವ ಮತ್ತು ಸವಾಲುಗಳನ್ನು ಧನಾತ್ಮಕ ದೃಷ್ಟಿಕೋನದಿಂದ ಸಮೀಪಿಸುವ ಪ್ರವೃತ್ತಿಯೆಂದು ಈ ವ್ಯಾಖ್ಯಾನಗಳಿಂದ ತಿಳಿದು ಬರುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ಹೊಂದುವುದು ಎಂದರೆ ಧನಾತ್ಮಕ ಚಿಂತನೆಯನ್ನು ಅಭ್ಯಾಸ ಮಾಡುವುದು. ನಿರಂತರವಾಗಿ ಬೆಳ್ಳಿ ರೇಖೆಯನ್ನು ಹುಡುಕುವುದು ಮತ್ತು ನೀವು ಎದುರಿಸುವ ಯಾವುದೇ ಪರಿಸ್ಥಿತಿಯಲ್ಲೂ ಉತ್ತಮವಾದುದನ್ನೇ ಹೆಕ್ಕಿ ತೆಗೆಯುವುದು.
ಗುಣಲಕ್ಷಣಗಳು
ಆಶಾವಾದ: ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲವೆಂದು ಊಹಿಸುವ ಬದಲು ಅವಕಾಶಗಳನ್ನು ಪಡೆಯುವ ಇಚ್ಛೆ. ಹೊಂದುವುದು. ಪ್ರಯತ್ನಿಸುವುದರಿಂದ ಪಡೆದುಕೊಳ್ಳುತ್ತೇನೆಂಬ ಮನೋಭಾವ.
ಸ್ವೀಕಾರ: ಜೀವನದಲ್ಲಿ ಎಲ್ಲವೂ ನೀವು ಬಯಸಿದಂತೆ ನಡೆಯುವುದಿಲ್ಲ. ಎಂದು ಒಪ್ಪಿಕೊಳ್ಳುವುದು. ಅದರೊಂದಿಗೆ ತಪ್ಪುಗಳಿಂದ ಕಲಿಯುವುದು.
ಸ್ಥಿತಿಸ್ಥಾಪಕತ್ವ: ಬದುಕಿನಲ್ಲಿ ಘಟಿಸುವ ವಿಷಯಗಳು ನಮ್ಮ ಕೈಯಲಿಲ್ಲವೆಂದು ಬಿಟ್ಟುಕೊಡುವ ಬದಲು ಪ್ರತಿಕೂಲತೆ ನಿರಾಶೆ ವೈಫಲ್ಯತೆಯಲ್ಲೂ ಪುಟಿದೇಳುವುದು.
ಕೃತಜ್ಞತೆ: ನಿರಂತರವಾಗಿ ಒಳ್ಳೆಯದನ್ನು ಪ್ರಶಂಸಿಸುವುದು.ಕಷ್ಟದಲ್ಲಿ ಕೈ ಹಿಡಿದವರನ್ನು ಗೌರವಿಸುವುದು ಮತ್ತು ಮರೆಯದೆ ನೆನೆಯುವುದು.
ಪ್ರಜ್ಞೆ /ಜಾಗರೂಕತೆ: ಜಾಗೃತಿಗೆ ಮನಸ್ಸನ್ನು ಅರ್ಪಿಸುವುದು ಮತ್ತು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದು.
ಸಮಗ್ರತೆ: ಸ್ವಾರ್ಥಿಯಾಗುವ ಇಲ್ಲವೇ ಮೋಸಗೊಳಿಸುವ ಗುಣವನ್ನು ಬಿಟ್ಟು ಗೌರವಾನ್ವಿತ, ನೀತಿವಂತ ಮತ್ತು ನೇರವಾಗಿರುವುದು.
ಈ ಗುಣಲಕ್ಷಣಗಳು ಮಾತ್ರವಲ್ಲದೆ ಬೇರೆ ದಿಕ್ಕಿನಲ್ಲಿಯೂ ಕೆಲಸ ಮಾಡಬಹುದು. ಮನಸ್ಸಿನಷ್ಟು ಪ್ರಬಲವಾದದ್ದು ಯಾವುದೂ ಇಲ್ಲ. ಮನಸ್ಸು ಮಾಡಿದರೆ ಧನಾತ್ಮಕ ಮನಸ್ಥಿತಿಯನ್ನು ಉಳಿಸಿಕೊಳ್ಳಲು ಅನುಮತಿಸಿದಿರೆ ನಿಮ್ಮ ವರ್ತನೆ ನಿಮ್ಮನ್ನು ಅನುಸರಿಸುತ್ತದೆ. ನಿಮ್ಮನ್ನು ನೀವು ಸಂತೋಷವಾಗಿರಿಸಿಕೊಳ್ಳಬಹುದು. ಸಕಾರಾತ್ಮಕ ಮನೋಭಾವ ಬೆಳೆಸಲು ಹಲವು ಮಾರ್ಗಗಳಿವೆ. ನೀವು ಪ್ರಾರಂಭಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ಆಂತರಿಕ ಸಂಭಾಷಣೆ ಆಲಿಸಿ
ನಕಾರಾತ್ಮಕತೆಯನ್ನು ಎದುರಿಸುತ್ತಿರುವಾಗ ಅದನ್ನು ಸಕಾರಾತ್ಮಕಗೊಳಿಸಲು ಪ್ರಯತ್ನಿಸಿ. ನನಗೆ ಆ ಕೆಲಸ ಬರುವುದಿಲ್ಲ. ಎನ್ನುವ ಬದಲಾಗಿ ‘ಬಹುಶಃ ಇದು ನನ್ನ ಸಾಮರ್ಥ್ಯಗಳಲ್ಲಿ ಒಂದಲ್ಲ ಆದರೆ ನಾನು ಶ್ರದ್ಧೆಯಿಂದ ಶ್ರಮವಹಿಸಿದರೆ ಖಂಡಿತ ಆ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತೇನೆ.’ ಎಂಬ ಆಂತರಿಕ ಸಂಭಾಷಣೆಗೆ ಕಿವಿಗೊಡಿ. ಯಾರೂ ಪರಿಪೂರ್ಣರಲ್ಲವೆಂಬುದು ನಿಮ್ಮನ್ನೂ ಒಳಗೊಂಡಿದೆ ಎಂಬುದನ್ನು ಒಪ್ಪಿಕೊಳ್ಳಿ. ನಿಮ್ಮ ಸಾಧನೆಯ ಮತ್ತು ಶ್ರಮದ ಬಗ್ಗೆ ಹೆಮ್ಮೆಪಡಿ. ಸೋಲುಗಳನ್ನು ಕಲಿಕೆಯ ಅನುಭವಗಳನ್ನಾಗಿಸಿ ಯಶಸ್ಸನ್ನಾಗಿ ಪರಿವರ್ತಿಸಿ.
ಸಂವಹನ ನಡೆಸಿ
ಸಕಾರಾತ್ಮಕ ಪರಿಸರದಲ್ಲಿರಿ. ನಿಮ್ಮನ್ನು ಧನಾತ್ಮಕವಾಗಿ ಬಲಪಡಿಸುವ ಸಕಾರಾತ್ಮಕ ಜನರೊಂದಿಗೆ ಸಂವಹನ ನಡೆಸಿ.ಅವರೊಂದಿಗೆ ಕೆಲಸ ಮಾಡಿ ಸಕಾರಾತ್ಮಕ ನೆನಪುಗಳಿರುವ ಜಾಗಗಳಿಗೆ ಭೇಟಿ ಕೊಡಿ.ಇತರರಿಗೆ ಸಹಾಯ ಮಾಡಿ ಇದು ನಿಮಗೆ ತೃಪ್ತಿಯ ಭಾವವನ್ನು ನೀಡುತ್ತದೆ. ಮತ್ತು ನಿಮಗೆ ಒಳಗೊಳಗೆ ಸಂತೋಷವನ್ನು ನೀಡುತ್ತದೆ. ಸರಳವಾದ ಅಂಶಗಳಿಂದ ಆನಂದವನ್ನು ಪಡೆಯಲು ಕಲಿಯಿರಿ. ನಗು ಅತ್ಯಂತ ಶಕ್ತಿಶಾಲಿ ಮೂಡ್. ಮನಸಾರೆ ನಗಲು ಮನಸ್ಸು ಮಾಡಿ. ಎಲ್ಲರೂ ಪ್ರೀತಿಗೆ ಅರ್ಹರು. ಮತ್ತು ಎಲ್ಲರೂ ಪ್ರೀತಿಸುತ್ತಾರೆ. ಹೀಗಾಗಿ ನಿಮ್ಮನ್ನು ಇತರರು ಪ್ರೀತಿಸಲು ಅನುಮತಿಸಿ.ನೀವೂ ಪ್ರೀತಿಯಿಂದ ನಡೆದುಕೊಳ್ಳಿ. ನಿಮ್ಮ ಕಾರ್ಯಗಳು ಆಲೋಚನೆಗಳು ಮತ್ತು ಭಾವನೆಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಿ.
ದಿನಚರಿ ಪರೀಕ್ಷಿಸಿ
ನಿಮ್ಮ ಜೀವನವನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ದಿನಚರಿಯು ನಿಮ್ಮ ವರ್ತನೆಯ ಮೇಲೆ ಬೀರುವ ಪರಿಣಾಮಗಳನ್ನು ಪರೀಕ್ಷಿಸಿ. ಪ್ರಯೋಜನಕಾರಿ ಸಕಾರಾತ್ಮಕ ಸಂಬಂಧಗಳನ್ನು ಹೊಂದಿದ್ದೇನೆಯೇ? ಸಕಾರಾತ್ಮಕ ಮನೋಭಾವವನ್ನು ಉಳಿಸಿಕೊಳ್ಳಲು ಧನಾತ್ಮಕ ಶಕ್ತಿಯನ್ನು ಉತ್ತೇಜಿಸುವ ದಿನಚರಿಯನ್ನು ಹೊಂದಿದ್ದೇನೆಯೇ? ನನ್ನ ಮನಸ್ಸಿನ ಸ್ಥಿತಿ ಮತ್ತು ಅದರ ಬದಲಾವಣೆಗಳ ಬಗ್ಗೆ ನನಗೆ ತಿಳಿದಿದೆಯೇ? ನಕಾರಾತ್ಮಕ ಮನಸ್ಥಿತಿಯಲ್ಲಿದ್ದರೆ ಅದನ್ನು ಬದಲಾಯಿಸಲು ಸಾಧ್ಯವೇ? ನನ್ನ ವಾಸ ಸ್ಥಳವು ಸಕಾರಾತ್ಮಕ ವಾತಾವರಣವೇ? ಇಲ್ಲದಿದ್ದರೆ ಅದನ್ನು ಸಕಾರಾತ್ಮಕವಾಗಿಸಲು ಏನು ಮಾಡಬಹುದೆಂಬ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಸಂಗೀತ ಆಲಿಸಿ. ನಿಷ್ಕ್ರೀಯರಾಗಿ ಟಿವಿ ನೋಡಬೇಡಿ. ಏಕಾಂಗಿಯಾರಲು, ಆನಂದಿಸುವ ಕೆಲಸಗಳಿಗೆ ಸಮಯ ನೀಡಿ. ಸಂತೊಷವಾಗದ ವಿಷಯಗಳನ್ನು ನಿರ್ಲಕ್ಷಿಸಿ. ಸಂತೋಷವು ವಸ್ತುನಿಷ್ಟವಲ್ಲವೆಂಬುದನ್ನು ಅರಿತುಕೊಳ್ಳಿ
ಗೆದ್ದೇ ಗೆಲ್ಲುವಿರಿ
ನಿಮ್ಮನ್ನು ಸೋಲಿಸಲಾಗಿದೆ.. ನಿಮಗೆ ಧೈರ್ಯವಿಲ್ಲ. ಗೆಲ್ಲಲು ಬಯಸಿದರೂ ನಿಮ್ಮಿಂದ ಸಾಧ್ಯವಿಲ್ಲವೆಂದು ಭಾವಿಸಿದರೆ ಅದು ನೀವು ಪ್ರಯತ್ನಿಸದಿರುವ ನೆಪವಷ್ಟೆ. ಯಶಸ್ಸು ವ್ಯಕ್ತಿಯ ಇಚ್ಛೆಯಿಂದ ಆರಂಭಗೊಳ್ಳುತ್ತದೆ. ಎಲ್ಲವೂ ನಮ್ಮ ಮನಸ್ಥಿತಿಯಲ್ಲಿದೆ. ಜೀವನವೊಂದು ಯುದ್ಧದಂತೆ ಬಲವಾದ ಮತ್ತು ವೇಗವಾದ ವ್ಯಕ್ತಿಗಳು ಅಲ್ಲಿ ಗೆಲ್ಲುತ್ತಾರೆ. ಆದರೂ ನಿಮಗೆ ಸಾಧ್ಯವೆಂದು ಯೋಚಿಸಿದರೆ. ಬೇಗ ಅಥವಾ ನಂತರ ಗೆದ್ದೇ ಗೆಲ್ಲುವಿರಿ.
– ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು,ಬೆಳಗಾವಿ ಮೊ:೯೪೪೯೨೩೪೧೪೨

