ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ಉಚಿತ ದಂತ ತಪಾಸಣಾ ಶಿಬಿರ
ಬಸವನಬಾಗೇವಾಡಿ: ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣಿನಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಖನಿಜಯುಕ್ತ ಆಹಾರ ಸೇವಿಸಬೇಕೆಂದು ಡಾ.ಆನಂದ ಪಾಟೀಲ ಹೇಳಿದರು.
ಪಟ್ಟಣದ ವಿದ್ಯಾನಗರದ ಗಂಗಾಂಬಿಕ ಅಕ್ಕನ ಬಳಗವು ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ವಿಜಯಪುರದ ಐಡಿ ಸಹಯೋಗದಲ್ಲಿ ಸ್ಥಳೀಯ ಈರಕಾರಮುತ್ಯಾ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಯಿ ಮನುಷ್ಯನ ಕನ್ನಡಿ ಇದ್ದಹಾಗೆ. ನಮ್ಮ ಮುಖದ ಸೌಂದರ್ಯ ಚೆನ್ನಾಗಿ ಇರುವದರಲ್ಲಿ ಹಲ್ಲಿನ ಪಾತ್ರ ಬಹಳವಿದೆ. ಮಹಿಳೆಯರು ಗರ್ಭಿಣಿಯರಿದ್ದಾಗ ಹಲ್ಲುಗಳನ್ನು ಉಜ್ಜಬಾರದು ಎಂಬ ತಪ್ಪು ಕಲ್ಪನೆಯಿದೆ. ಇದರ ಸರಿಯಲ್ಲ. ಗರ್ಭೀಣಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ದಿನಕ್ಕೆ ಎರಡು ಸಲ ಹಲ್ಲು ಉಜ್ಜಬೇಕು. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕೆಂದರು.
ಸೌಭಾಗ್ಯ ಗುಬ್ಬ ಮಾತನಾಡಿ, ತಾಯಂದಿರಿಗೆ ಮಕ್ಕಳ ಆರೋಗ್ಯದಲ್ಲಿ ಹಲ್ಲುಗಳ ರಕ್ಷಣೆ ಕುರಿತು, ಮನುಷ್ಯನ ಅಂಗಗಳಲ್ಲಿ ಹಲ್ಲಿನ ಪಾತ್ರ ಕುರಿತು ಹೇಳಿದರು.
ಅಧ್ಯಕ್ಷತೆಯನ್ನು ನೀಲಮ್ಮ ಝಳಕಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗಂಗಾಂಬಿಕ ಅಕ್ಕನ ಬಳಗದ ಎಲ್ಲ ಸದಸ್ಯರು ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಜನರು ತಮ್ಮ ದಂತ ತಪಾಸಣೆ ಮಾಡಿಕೊಂಡರು.

