ಮುಳಸಾವಳಗಿಯಲ್ಲಿ ಸಿದ್ದೇಶ್ವರ ಶ್ರೀಗಳ ಗುರುನಮನ | ಆಧ್ಯಾತ್ಮಿಕ ಪ್ರವಚನ
ದೇವರಹಿಪ್ಪರಗಿ: ನಾವು ಮಾಡುವ ಯೋಗ್ಯ ಕೆಲಸವನ್ನು ಶ್ರದ್ದೆ, ನಿಷ್ಠೆ, ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು ಎಂದು ಬಾಲಗಾಂವ ಆಶ್ರಮದ ಅಮೃತಾನಂದಶ್ರೀ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಗುರುವಾರ ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದ ಅಂಗವಾಗಿ ಜರುಗುತ್ತಿರುವ ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಯಕವೇ ಕೈಲಾಸ ಎಂದರು ಬಸವೇಶ್ವರರು, ಅದರಂತೆ ನಡೆದರು ನಮ್ಮ ನಡೆದಾಡುವ ದೈವ ಸಿದ್ದೇಶ್ವರರು. ಕಾಯಕದಲ್ಲಿ ಚಿತ್ತಶುದ್ದ ಮನಸ್ಸಿನಿಂದ ಪರಮಾತ್ಮನನ್ನು ಕಾಣಬೇಕು. ಆತನ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕು.
ಹಿಪ್ಪರಗಿಯ ಮಡಿವಾಳ ಮಾಚಿದೇವರು, ಶಿವಣಗಿಯ ನೂಲಿಯ ಚಂದಯ್ಯನವರ ಕಾಯಕ ನಿಷ್ಠೆಯನ್ನು ನಾವೆಲ್ಲರೂ ಅರಿತು, ನಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಕಾಯಕ ಜೀವಿಗಳಾಗಬೇಕಾಗಿದೆ. ಪ್ರಮುಖವಾಗಿ ಬದುಕಿನಲ್ಲಿ ಕೆಟ್ಟದ್ದನ್ನು ತಲೆಗೆ ಹಾಕಿಕೊಳ್ಳದೇ, ಕೆಟ್ಟದ್ದಕ್ಕೆ ನೀರು, ಗೊಬ್ಬರ ಹಾಕದೇ, ಕೆಟ್ಟದ್ದನ್ನು ಬಿಟ್ಟಾಕಿ ಸತ್ಕಾರ್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಾಗಿದೆ ಎಂದರು.
ಪ್ರತಿನಿತ್ಯ ಬೆಳಿಗ್ಗೆ ೬ ಗಂಟೆಯಿಂದ ೭ ಗಂಟೆಯವರೆಗೆ ಜರುಗುವ ಸತ್ಸಂಗ ಪ್ರವಚನ ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಸವಾನಂದಶ್ರೀಗಳು, ದಯಾನಂದ ಸ್ವಾಮೀಜಿ, ನಿಂಗರಾಯ ಮಹಾರಾಜ, ಬಸವರಾಜಶ್ರೀ, ಸಂಗನಬಸವಶ್ರೀಗಳು ಸೇರಿದಂತೆ ಮುಳಸಾವಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

