ಆಲಮಟ್ಟಿಯ ಚಂದ್ರಗಿರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ | ಭಕ್ತರ ಭಕ್ತಿಭಾವದ ಪರಾಕಾಷ್ಠೆ
– ಸಂಪದಾ ಹಿರೇಮಠ
ಆಲಮಟ್ಟಿ: ಬೇಸಿಗೆಯ ಬಿರುಬಿಸಿಲು ಝಳ ಪ್ರಖರವಾಗುತ್ತಿದೆ. ಇತ್ತ ಕೃಷ್ಣಾನದಿಯ ಅಂಗಳು ಜೀವಜಲದಿಂದ ಸೊರಗುತ್ತಿದೆ. ಆದರೆ ಗುರುವಾರ ಕೃಷ್ಣೆಯ ದಡದಲ್ಲಿ ಜಲೋದ್ಬವದ ಬದಲು ಜನೋದ್ಬವದ ಜಯ ಉದ್ಘೋಷ್ ಹರಿದು ಬಂದಿದ್ದು ಕಂಡು ಬಂತು.ಈ ವೇಳೆ ಕೃಷ್ಣೆಯ ಜಲಧಿಯಲ್ಲಿ ಪವನಗೊಂಡ ಜನತೆಯ ಭಕ್ತಿಭಾವದ ಪರಾಕಾಷ್ಠೆ ತರ್ಪಣ ಅವಣೀಯವಾಗಿತ್ತು.ಎಲ್ಲೆಲ್ಲೂ ಭಕ್ತ ಮೊಗಗಳ ಕಲರವದ ಕಂಪು ನಿನಾದ ಮೊಳಗಿತ್ತು !!!
ಆಹಾ ! ಎತ್ತ ನೋಡಿದರು ಜನರೋ ಜನ. ಭಕ್ತಿರಸದ ಲೀಲೆಯಲ್ಲಿ ತನ್ಮಯ. ಆ ಜಾಗೃತ ದೇವಿಯ ಗುಂಗು ಪ್ರತಿಯೊಬ್ಬರ ಮನಭಾವದಲ್ಲಿ ನೆಲೆನಿಂತ ಪರಿಣಾಮ ಆರಾಧನಾ ಮಹೋತ್ಸವಕ್ಕೆ ನವಮೆರಗು ಬಂದಿತ್ತು. ಜಾತ್ರಾ ಉತ್ಸವದಲ್ಲಿ ಹರುಷದಿಂದ ಮಿಂದೆದ್ದ ಅಸಂಖ್ಯಾತ ಭಕ್ತ ಸಾಗರ ಧಾಮಿ೯ಕ ಭಕ್ತಿಲೋಕದಲ್ಲಿ ತೇಲಿದರು…!
ಇಂಥದೊಂದು ದೃಶ್ಯ ವೈಭವಕ್ಕೆ ಗುರುವಾರ ಇಲ್ಲಿನ ಚಂದ್ರಗಿರಿಯ ಚಂದ್ರಮ್ಮಾ ದೇವಸ್ಥಾನದ ಅಂಗಳ ಸಾಕ್ಷಿಯಾಗಿತ್ತು !
ಅಪಾರ ಭಕ್ತ ಸಮೂಹವನ್ನು ಹೊಂದಿರುವ ಇಲ್ವಿನ ಚಂದ್ರಗಿರಿ ಚಂದ್ರಮ್ಮಾ ದೇವಿಯ ಜಾತ್ರಾ ಉತ್ಸವ ಇದೇ ಮಾಚ್೯ 14 ಗುರುವಾರದಿಂದ ಶನಿವಾರದವರೆಗೆ ಮೂರು ದಿನಗಳ ಕಾಲ ಸಂಭ್ರಮ,ಸಡಗರದಿಂದ ನಡೆಯಲಿದ್ದು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಭಕ್ತರು ಹರಿದು ಬಂದರು. ದೇವಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಜಪತಪ ಮಾಡಿದರು. ಶಕ್ತಿದೇವತೆಯ ಸನ್ನಿಧಿಯಲ್ಲಿ ಉರುಳು ಸೇವೆಯ ಭಕ್ತಿ ಅರ್ಪಣೆ ಜೋರಾಗಿತ್ತು. ಹಲಬಗೆಯ ಹರಿಕೆ ತೀರಿಕೆಗಳ ಮಹಾಪೂರ ಸಾಂಗವಾಗಿ ಸಾಗಿತ್ತು !
ಕೃಷ್ಣಾ ನದಿತೀರದ ಜಾಗೃತ ಶಕ್ತಿದೇವತೆ ಎಂದೇ ಮನೆ ಮಾತಾಗಿ ಪ್ರಸಿದ್ಧಿ ಪಡೆದಿರುವ ಚಂದ್ರಗಿರಿಯ ಚಂದ್ರಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ರಾಜ್ಯ,ಹೊರ ರಾಜ್ಯದ ಭಕ್ತರ ಮಹಾಪೂರವೇ ಆಗಮಿಸಿತ್ತು. ಮೊದಲ ದಿನ ರಾಜ್ಯದ ಮೂಲೆ ಮೂಲೆಗಳಿಂದ ಹಾಗು ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಜನಸ್ತೋಮ ಇಲ್ಲಿ ಸೇರಿದ್ದು ಕಂಡುಬಂತು.ಸಾಕ್ಷಾತ್ ಚಾಮುಂಡೇಶ್ವರಿ ಅವತಾರಿಣಿ ಚಂದ್ರಮ್ಮನ ಸನ್ನಿಧಿಯಲ್ಲಿಂದು ಅಪಾರ ಸಂಖ್ಯೆಯಲ್ಲಿ ಭಕ್ತಗಣ ಸೇರಿತ್ತು. ಬೇಡಿದ ಭಕ್ತರಿಗೆ ವರವನ್ನು ನೀಡುವ ಐತಿಹ್ಯ ಹೊಂದಿರುವ ಚಂದ್ರಮ್ಮದೇವಿ ಈ ಭಾಗದ ಅಸಂಖ್ಯಾತ ಭಕ್ತಗಣದ ಆರಾಧ್ಯ ದೇವಿಯಾಗಿರು ಹಿನ್ನೆಲೆಯಲ್ಲಿ ದೇವಿಜಾತ್ರೆ ವರ್ಷ ದಿಂದ ವರ್ಷಕ್ಕೆ ವೈಭವಯುತ ಕಳೆ ಪಡೆಯುತ್ತಿದೆ. ದೇವಿಯ ಅಂಗಳದಲ್ಲಿ ಮುಸ್ಸಂಜೆ ಸಂಭ್ರಮ ಕಳೆಗಟ್ಟಿದೆ. ಬೆಳಗಿನ ಜಾವದಲ್ಲಿ ಚಂದ್ರಮ್ಮದೇವಿ ಗದ್ದುಗೆಗೆ ವಿಶೇಷ ಹೂ,ಪುಷ್ಪ,ಬಳೆಗಳಿಂದ ಅಲಂಕರಿಸಲಾಗಿತ್ತು. ಹಸಿರುಡುಗೆಯಲ್ಲಿ ಸಿಂಗರಿಸಿ ಕಂಗೊಳಿಸಿ ದೇವಿ ಭಕ್ತರ ದರ್ಶನಕ್ಕೆ ಲಭ್ಯವಾಗಿದ್ದಳು. ವಿಶೇಷ ಪೂಜೆ ಸೇರಿದಂತೆ ಧಾಮಿ೯ಕ ಕೈಂಕರ್ಯದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳ ಕಾರ್ಯಗಳು ವಿಧಿವತ್ತಾಗಿ ನೆರವೇರಿಸಿ ಜಾತ್ರಾ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ಚಂದ್ರಗಿರಿ ಧರ್ಮರ ಮಠದ ಧಮಾ೯ಧಿಕಾರಿ ಸೋಮರಾವ ದೇಸಾಯಿ ತಿಳಿಸಿದರು.
ಬೆಳಗು ಮುಂಜಾನೆಯಿಂದಲೇ ಕೃಷ್ಣಾನದಿ ನೀರಿನಲ್ಲಿ ಮಿಂದು ದೇವಿಯ ದರ್ಶನಕ್ಕೆ ಜನ ಮುಗಿಬಿದಿದ್ದರು. ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಆರಾಧಿಸುತ್ತಿದ್ದರು. ಬಳಿಕ ಚಂದ್ರಮ್ಮತಾಯಿ ದರ್ಶನ ಕಣ್ಣಂಚಿನಲ್ಲಿ ತುಂಬಿಕೊಂಡು ಪುನೀತ್ ಭಾವದ ಧನ್ಯತೆ ಮೆರೆದರು. ದೇವಸ್ಥಾನದ ಸುತ್ತಲೂ ಹರಿಕೆ ಹೊತ್ತ ಭಕ್ತರು ಹೆಣ್ಣು ಗಂಡು ಲಿಂಗಭೇದ ಎನ್ನದೇ ದೀರ್ಘ ದಂಡ ನಮಸ್ಕಾರದ ಉರುಳು ಸೇವೆ ಸಮಪಿ೯ಸಿದರು. ಈ ದೃಶ್ಯ ವ್ಯಾಪಕ ಜನಸಂದಣಿಯ ಪಾದಸ್ಪರ್ಶದ ಅಂಚಿನಲ್ಲೇ ಯಥ್ಥೇಚ್ಚವಾಗಿ ಸಾಗುತ್ತಿತ್ತು. ವಿಶಿಷ್ಟ ಭಕ್ತಿಸೇವೆಯಿಂದ ಜನ ಸಂತೃಪ್ತ ಭಾವ ತಾಳಿ ದೇವಿ ಧ್ಯಾನದಲ್ಲಿ ತೇಲಿದ್ದರು. ಭಕ್ತಿಯ ಲೀನತೆ ಮೆರೆದರು. ಕಲ್ಪವೃಕ್ಷವೆಂಬ ಪ್ರತೀತಿಯ ಚಂದ್ರಮ್ಮಾ ಮಾತೆಯ ದರ್ಶನಕ್ಕೆ ನೆರೆಯ ಗೋವಾ, ಮಹಾರಾಷ್ಟ್ರ, ಆಂದ್ರ, ತೆಲಂಗಾಣ ಸೇರಿದಂತೆ ಅಂತರರಾಜ್ಯಗಳ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ವಯೋಭೇದವಿಲ್ಲದೇ,ಲಿಂಗಭೇದವಿಲ್ಲದೇ ಹರಿದು ಬರುವುದು ವಿಶೇಷ. ಗುರುವಾರ ಮೊದಲ ದಿನ ಇಲ್ಲಿ ಸಂಜೆವಾಗುತ್ತಲ್ಲೇ ಭಕ್ತರ ಸಂಖ್ಯೆಯಲ್ಲಿ ಏರಿಕೆವಾಗಿತ್ತು. ತಂಡೋಪತಂಡವಾಗಿ ಜನತೆ ಚಂದ್ರಮ್ಮಾ ತಾಯಿಯ ದಿವ್ಯ ದರ್ಶನ ಕಣ್ತುಂಬಿಸಿಕೊಳ್ಳಲ್ಲು ಇತ್ತ ಧಾವಿಸಿ ಬಂದರು.ಅಪಾರ ಭಕ್ತಾದಿಗಳ ದಂಡು ದೇಗುಲದ ಸುತ್ತ ನೆರದಿತ್ತು. ಇತಿಹಾಸ ಪ್ರಸಿದ್ಧ ಚಂದ್ರಮ್ಮಾ ದೇವಿಯ ಆರಾಧನಾ ಮಹೋತ್ಸವದ ಕಂಪು ಕೃಷ್ಣೆಯ ದಡದಲ್ಲಿಂದು ನಿವಿ೯ಗ್ನವಾಗಿ ಮೊಳಗಿತ್ತು. ದೇಗುಲದ ಸುತ್ತ ಭಕ್ತರು ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಚಂದ್ರಮ್ಮ ತಾಯಿಯಲ್ಲಿ ಬೇಡಿಕೊಂಡರು. ಹುಂಡಿಗೆ ದಕ್ಷಣೆ ಹಾಕಿ,ದೇವಿಗೆ ನೈವೇದ್ಯ ಸಲ್ಲಿಸಿ, ದೀರ್ಘದಂಡ ನಮಸ್ಕಾರದೊಂದಿಗೆ ಭಕ್ತಿಪೂರ್ವಕ ವಿವಿಧ ಧಾಮಿ೯ಕ ಪೂಜಾ ಕೈಂಕರ್ಯಗಳನ್ನು ಶ್ರದ್ಧೆ ಮನದ ತಪಸ್ಸಿನಿಂದ ಭಕ್ತರು ಸಮಪಿ೯ಸಿದರು.
ಪ್ರಮುಖ ಬೀದಿಗಳಲ್ಲಿ ಭಕ್ತರ ಜನಸಂದಣಿ,ವಾಹನಗಳ ದಟ್ಟಣೆ ಹೇರಳವಾಗಿತ್ತು.ಜಾತ್ರೆ ಪ್ರಯುಕ್ತ ಸಾಲುಸಾಲು ತೆರೆಯಲ್ಪಟ್ಟಿದ ವಿವಿಧ ಮಳಿಗೆಗಳಲ್ಲಿ ವಿವಿಧ ಸ್ತರದ ಸಾಮಗ್ರಿಗಳ ವ್ಯಾಪಾರ ವಹಿವಾಟು ಜೋರಾಗಿತ್ತು.ವಿವಿಧ ಸಾಮಗ್ರಿಗಳ ಖರೀದಿಸಲು ಜನ ಉತ್ಸಾಹದಿಂದ ಮುಗಿಬಿದ್ದರು. ಸಿಹಿ ಪದಾರ್ಥಗಳ, ಗ್ರಹ ಬಳಿಕೆ ವಸ್ತುಗಳ ಮಳಿಗೆಗಳು, ತಿಂಡಿ ತಿನಿಸುಗಳ ಮಿಠಾಯಿ, ಹೋಟೆಲ್ ಗಳು,ಬ್ಯಾಗ್, ಬಳೆ ಫಲಪುಷ್ಪ, ಪೂಜಾ ಸಾಮಗ್ರಿ ಸೇರಿದಂತೆ ನೂರಾರು ಬಗೆಬಗೆ ಅಂಗಡಿಗಳು ತೆಲೆ ಎತ್ತಿವೆ. ರೈತಾಪಿ ಜನತೆಯ ಅಗತ್ಯ ವಸ್ತುಗಳ ಹಾಗು ಲಂಬಾಣಿ ಸಮೂದಾಯದ ಉಡುಗೆ ತೋಡುಗೆಯ ಬಟ್ಡೆಗಳ ಖರೀದಿಯಲ್ಲಿ ಜನ ಹೆಚ್ಚಿದ್ದರು. ವಿವಿಧ ಮನರಂಜನಾ ಪ್ರದರ್ಶನ, ಆಟೋಟಗಳ ಸ್ಪಾಟ್ ಗಳು, ಕಿವಿ ಕೊರೆಯುವ ಹಾಡುಗಳ ಸದ್ದುಗಳು ಜಾತ್ರೆಯಲ್ಲಿ ಮಾರ್ದನಿಸುತ್ತಿವೆ.
ಧಾಮಿ೯ಕ ಸಂದೇಶ ಸಾರುತ್ತಿರುವ ಚಂದ್ರಮ್ಮದೇವಿ ಹಲವಾರು ಮಹತ್ವದ ಪ್ರಸಿದ್ಧಿ ಹೊಂದಿದಿದ್ದಾಳೆ. ಹೀಗಾಗಿ ಚಂದ್ರಮ್ಮ ತಾಯಿ ನಮ್ಮೆಲ್ಲರ ದುಃಖ ದುಮ್ಮಾನು ದೂರ ಮಾಡು,ಸಂತಸ,ನೆಮ್ಮದಿ ಕರುಣಿಸು, ಆರೋಗ್ಯಕರ ಜೀವನ ದಯಪಾಲಿಸು ಎಂದು ಪ್ರಾಥಿ೯ಸಿ ಜನ ಚಂದ್ರಮ್ಮನ ದರ್ಶನಕ್ಕೆ ಭೇಟಿ ನೀಡಿ ದೇವಿ ಸನ್ನಿಧಿಯಲ್ಲಿ ಬಗೆಬಗೆಯ ಹರಕೆಗಳನ್ನು ತೀರಿಸುತ್ತಿದ್ದಾರೆ. ದೇವಾಲಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ,ಭಜನೆಯಂಥ ಹತ್ತಾರು ಕಾರ್ಯಕ್ರಮ ನಡೆಯುತ್ತಿವೆ. ದೇವಾಲಯದ ಒಳಾವರಣ,ಹೊರಾವರಣದ ಸುತ್ತ ಅಲಂಕಾರ ತಳಿರು ತೋರಣಗಳಿಂದ, ವಿದ್ಯುತ್ ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದೆ.
ಭಕ್ತರ ಅನುಕೂಲಕ್ಕಾಗಿ ಸ್ಥಳೀಯ ಪೋಲಿಸರು ಸೂಕ್ತ ಬಂದೋಬಸ್ತ ಕೈಗೊಂಡಿದ್ದಾರೆ. ದೇವಸ್ಥಾನದ ಒಳಗೆ ಹೊರಗೆ ಕಣ್ಗಾವಲು ಈರಿಸಿದ್ದಾರೆ.
ಚಂದ್ರಗಿರಿಯ ಚಂದ್ರಮ್ಮಾದೇವಿ ದೇಗುಲ ಕೃಷ್ಣಾ ನದಿ ಹಿನ್ನೀರಿನ ಸನಿಹದಲ್ಲಿದೆ. ಈಗ ಬೇಸಿಗೆ ಬೇರೆ. ಮೇಲಾಗಿ ಜಾತ್ರೆ ಕೂಡಾ. ಜನರ ಓಡಾಟ ಹೆಚ್ಚು.ನದಿ ತೀರ ಮೊಸಳೆಗಳು ಅಗಾಗ ಗೋಚರಿಸುತ್ತವೆ. ಕಾರಣ ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಬಲು ಹುಷಾರದಿಂದರಬೇಕು.ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಭಕ್ತರು ದೇವಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಲಾಗಿದೆ.

